
ವಿಧಾನಸಭೆ (ಆ.21): ಅನಾಥ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿಕಲಚೇತನರ ಮಾದರಿಯಲ್ಲಿ ವಿಶೇಷ ಎಂದು ಪರಿಗಣಿಸಿ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಬುಧವಾರ ಪ್ರಶ್ನೋತ್ತರ ಕಲಾಪದ ವೇಳೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯೆ ನಯನಾ ಮೋಟಮ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಅಡಿ ರಾಜ್ಯದಲ್ಲಿ 108 ಸರ್ಕಾರಿ, 54 ಅನುದಾನಿತ, 550 ಖಾಸಗಿ ಸೇರಿ ಒಟ್ಟು 712 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಈ 712 ಸಂಸ್ಥೆಗಳಲ್ಲಿ ಒಟ್ಟು 17,049 ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದರು. ಈ ಅನಾಥ ಮಕ್ಕಳ ಪದವಿ ಪೂರ್ವ ಶಿಕ್ಷಣದವರೆಗೂ ಮಕ್ಕಳ ಶಾಲಾ ದಾಖಲಾತಿ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಜಾತಿ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಪದವಿ ಶಿಕ್ಷಣಕ್ಕೆ ಪ್ರವೇಶಾತಿ ವೇಳೆ ಸಾಮಾನ್ಯ ವರ್ಗ ಎಂದು ಪರಿಗಣಿಸಿ ದಾಖಲಾತಿ ಮಾಡಲಾಗುತ್ತಿದೆ. ಹೀಗಾಗಿ ಇದರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಹೇಳಿದರು.
ಉನ್ನತ ಶಿಕ್ಷಣಕ್ಕೆ ದಾಖಲಾಗುವ ಸಂದರ್ಭದಲ್ಲಿ ಈ ಮಕ್ಕಳಿಗೆ ಯಾವುದೇ ವಿಶೇಷ ರಿಯಾಯಿತಿ ಇರುವುದಿಲ್ಲ. ಸಾಮಾನ್ಯ ವರ್ಗದ ಇತರೆ ಮಕ್ಕಳಂತೆ ಈ ಮಕ್ಕಳನ್ನೂ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹತೆ ಪಡೆದಿರುವ ಎಲ್ಲಾ ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಲಾಗುತ್ತಿದೆ. ಯಾವುದೇ ಮಗುವಿಗೂ ಉನ್ನತ ಶಿಕ್ಷಣಕ್ಕೆ ತೊಂದರೆಯಾಗಿಲ್ಲ ಎಂದರು.
ಮಕ್ಕಳಿಗೆ ಭವಿಷ್ಯ ಕಲ್ಪಿಸಲು ಸಹಕರಿಸಿ: ಇದಕ್ಕೂ ಮುನ್ನ ಮಾತನಾಡಿದ ನಯನಾ ಮೋಟಮ್ಮ, ಈ ಅನಾಥ ಮಕ್ಕಳು ಶಾಲಾ-ಕಾಲೇಜು ಸೇರ್ಪಡೆ ವೇಳೆ ಆಧಾರ ಕಾರ್ಡ್ ಸೇರಿ ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯುವುದಕ್ಕೆ ತೊಂದರೆಯಾಗುತ್ತಿದೆ. ವಿದೇಶಗಳಲ್ಲಿ ವ್ಯಾಸಂಗ ಮಾಡಲು ಸಮಸ್ಯೆಯಾಗುತ್ತಿದೆ. ಈ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು.
ಜಾತಿ ಗುರುತಿಸುವುದು ಕಷ್ಟ: ಬಳಿಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ಮಕ್ಕಳು ಆಧಾರ್ ಕಾರ್ಡ್ ಪಡೆಯಲು ಯಾವುದೇ ಸಮಸ್ಯೆ ಇಲ್ಲ. ಶಾಲಾ-ಕಾಲೇಜು ದಾಖಲಾತಿ ವೇಳೆ ಆಯಾಯ ಜಿಲ್ಲಾಧಿಕಾರಿ ಆಧಾರ್ ಕಾರ್ಡ್ ಮಾಡಿಸಿಕೊಡುತ್ತಾರೆ. ಮಕ್ಕಳು ಸಂಸ್ಥೆಗಳಿಗೆ ಬಂದಾಗ ವೈದ್ಯರನ್ನು ಕರೆಸಿ ವಯಸ್ಸು ನಿರ್ಧರಿಸಲಾಗುತ್ತಿದೆ. ಜಾತಿ ಗುರುತಿಸುವುದು ಕಷ್ಟವಾಗಿರುವುದರಿಂದ ಇಂತಹ ಮಕ್ಕಳನ್ನು ಹಿಂದುಳಿದ ವರ್ಗ ಅಥವಾ ಎಸ್-ಎಸ್ಟಿ ಪ್ರವರ್ಗಕ್ಕೆ ಸೇರಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಕಡತ ಕಳುಹಿಸಲಾಗಿತ್ತು. ಆದರೆ, ಇಲಾಖೆ ಆಗುವುದಿಲ್ಲ ಎಂದು ಹೇಳಿದೆ ಎಂದು ಗಮನಕ್ಕೆ ತಂದರು.
ಇದಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರತಿಕ್ರಿಯಿಸಿ, ಇಂತಹ ಮಕ್ಕಳನ್ನು ಎಸ್‌ಸಿ ಪ್ರವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಇದೊಂದು ವಿಶೇಷ ಪ್ರಕರಣವೆಂದು ಭಾವಿಸಿ ಕೇಂದ್ರ ಸರ್ಕಾರ ಸೇರಿಸಬೇಕು. ಇಲ್ಲವೇ ಸರ್ಕಾರ ವಿಶೇಷ ಎಂದು ಪರಿಗಣಿಸಿ ಈ ಮಕ್ಕಳಿಗೆ ಸವಲತ್ತುಗಳನ್ನು ನೀಡಬಹುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.