ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಅವರ ತಾಯಿ ಸೊಸೆ ಕುಸುಮಾ ಅವರ ಬಗ್ಗೆ ನೀಡಿದ್ದ ಹೇಳಿಕೆ ಸಂಬಂಧ ಮೊದಲ ಬಾರಿ ಕುಸುಮಾ ಪ್ರತಿಕ್ರಿಯಿಸಿದ್ದಾರೆ
ಬೆಂಗಳೂರು (ಅ.08): ‘ನನ್ನ ವಿರುದ್ಧ ಡಿ.ಕೆ.ರವಿ ಅವರ ತಾಯಿ ಅವರು ನೀಡಿರುವ ಹೇಳಿಕೆಯನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ನಾನು ಯಾರನ್ನೂ ಎದುರುಹಾಕೊಂಡು ಚುನಾವಣೆ ಎದುರಿಸುವುದಿಲ್ಲ’ ಎಂದು ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಹೇಳಿದ್ದಾರೆ.
ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ಶನೇಶ್ವರ ದೇವಾಲಯದ ಆವರಣದಲ್ಲಿ ನಡೆದ ತಮ್ಮ ಪಕ್ಷದ ಚುನಾವಣಾ ಪೂರ್ವಭಾವಿ ಸಭೆಯ ವೇಳೆ ಅವರು ಮಾತನಾಡಿದರು. ಇದೇ ವೇಳೆ ತಮ್ಮ ಅತ್ತೆ ಗೌರಮ್ಮ ಅವರು ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಸುಮಾ ಅವರು, ‘ಅವರು ದೊಡ್ಡವರು, ನನ್ನ ವಿರುದ್ಧ ಏನಾದರೂ ಮಾತನಾಡಲಿ. ಅದನ್ನೇ ನನಗೆ ನೀಡಿದ ಆಶೀರ್ವಾದ ಎಂದು ಭಾವಿಸುತ್ತೇನೆ. ಈ ಚುನಾವಣೆಯಲ್ಲಿ ನನಗೆ ಯಾರು ಎದುರಾಳಿ ಎನ್ನುವುದು ಮುಖ್ಯವಲ್ಲ. ನಾನು ಯಾರನ್ನೂ ಎದುರು ಹಾಕಿಕೊಂಡು ಚುನಾವಣೆ ಎದುರಿಸುವುದಿಲ್ಲ. ಎಲ್ಲರನ್ನೂ ಒಳಗೊಳ್ಳುವಿಕೆಯ ಕಾಂಗ್ರೆಸ್ ಸಿದ್ಧಾಂತ ಮುಂದಿಟ್ಟು ಚುನಾವಣೆ ಎದುರಿಸುತ್ತೇನೆ’ ಎಂದು ಹೇಳಿದರು.
RR ನಗರ ಬೈ ಎಲೆಕ್ಷನ್: ಟಿಕೆಟ್ ಘೋಷಣೆ ಬೆನ್ನಲ್ಲೇ ಪಣತೊಟ್ಟ ಕಾಂಗ್ರೆಸ್ ಅಭ್ಯರ್ಥಿ
‘ಕಾಂಗ್ರೆಸ್ ಸಿದ್ಧಾಂತಕ್ಕೂ ನನ್ನ ನಂಬಿಕೆಗಳಿಗೂ ಸಾಮ್ಯತೆ ಇರುವುದರಿಂದ ಸೇರ್ಪಡೆಯಾಗಿದ್ದೇನೆ. ರಾಜಕೀಯಕ್ಕೆ ಬರಬೇಕು ಎನ್ನುವ ಆಲೋಚನೆ ನನಗೆ ಇರಲಿಲ್ಲ. ಆದರೆ, ಸಮಾಜಸೇವೆ ಮಾಡಲು ಒಳ್ಳೆಯ ಅವಕಾಶ ಎನ್ನುವ ಕಾರಣಕ್ಕೆ ಬಂದಿದ್ದೇನೆ. ನಾನು ಯಾವುದೇ ಒತ್ತಡಕ್ಕೆ ಒಳಗಾಗಿ ಚುನಾವಣಾ ಸ್ಪರ್ಧೆಗೆ ಇಳಿದಿಲ್ಲ’ ಎಂದು ಹೇಳಿದರು.
‘ನಾನು ಈ ನಾಡಿನ ಹೆಣ್ಣು ಮಗಳು. ರಾಜರಾಜೇಶ್ವರಿ ನಗರದ ಸಂಪೂರ್ಣ ಅರಿವು ನನಗಿದೆ. ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿಬೆಳೆದವಳು. ನನಗೆ ಬಿಜೆಪಿ ಅಭ್ಯರ್ಥಿಯಾರು ಎಂಬುದು ಮುಖ್ಯವಲ್ಲ. ನನಗೆ ನನ್ನ ಸಿದ್ಧಾಂತವೇ ಮುಖ್ಯ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಡಲು ಸಂಕಲ್ಪ ಮಾಡಿದವಳು ನಾನು. ಜನರ ಸೇವೆಯೇ ನನ್ನ ಗುರಿ. ಕುಸುಮಾ ಯಾರು ಎಂಬುದಕ್ಕೆ ಇದೇ ನನ್ನ ಉತ್ತರ’ ಎಂದರು.