ಅನಗತ್ಯವಾಗಿ ಕೇಸು ಹಾಕಿ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು (ಅ.08): ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸುವ ಮೂಲಕ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಈ ರೀತಿಯ ಕ್ರಮ ಕೈಗೊಳ್ಳುತ್ತಿರುವ ಪೊಲೀಸ್ ಅಧಿಕಾರಿಗಳು ಭವಿಷ್ಯದಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಆರ್.ಆರ್. ನಗರ ಉಪಚುನಾವಣೆಗೆ ಸಂಬಂಧಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
RR ನಗರ ಬೈ ಎಲೆಕ್ಷನ್: ಟಿಕೆಟ್ ಘೋಷಣೆ ಬೆನ್ನಲ್ಲೇ ಪಣತೊಟ್ಟ ಕಾಂಗ್ರೆಸ್ ಅಭ್ಯರ್ಥಿ
‘ರಾಜರಾಜೇಶ್ವರಿ ಕ್ಷೇತ್ರದ ಹಿಂದಿನ ಶಾಸಕರು ಸ್ಥಳೀಯ ಕಾರ್ಯಕರ್ತರಾದ ನಿಮ್ಮೆಲ್ಲರಿಗೂ ಸಾಕಷ್ಟುಕಿರುಕುಳ ನೀಡಿದ್ದಾರೆ. ಅವರಿಗೆ ಈಗ ಉತ್ತರ ನೀಡಬೇಕಾಗಿದೆ. ಮಾಜಿ ಶಾಸಕ ಮುನಿರತ್ನ ಈ ಹಿಂದೆ ತಾನು ಗೆದ್ದಿದ್ದು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರಿಂದ ಎಂದು ಹೇಳಿಕೊಳ್ಳುತ್ತಿದ್ದರು. ರಾಜೀನಾಮೆ ಬಳಿಕ ಮಾತು ಬದಲಾಯಿಸಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಮೇಲೆ 1,000 ಕ್ಕೂ ಹೆಚ್ಚು ಪ್ರಕರಣಗಳು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ 700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ಅಂತ್ಯ ಹಾಡಬೇಕಾಗಿದೆ’ ಎಂದರು.
‘ಕ್ಷೇತ್ರದಲ್ಲಿ ಸಹೋದರಿ ಕುಸುಮಾ ಅವರೊಂದಿಗೆ ಇದು ನನ್ನ ಮೊದಲ ಸಭೆಯಾಗಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಸಾಕಷ್ಟುನೊಂದು ಬೆಂದ ಜನ ಸೇರಿದ್ದೀರಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಾಕಷ್ಟುತೊಂದರೆಯಾಗುತ್ತಿದೆ. ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗ ಇಷ್ಟುದಿನ ಕಣ್ಣಿಗೆ ಬಟ್ಟೆಕಟ್ಕೊಂಡು ಗಾಂಧಾರಿಯಂತೆ ಸುಮ್ಮನಿದ್ದೆ. ಇನ್ನು ಮುಂದೆ ಕೈ ಕಟ್ಟಿಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದರು.