‘ಡಿ.ಕೆ.ರವಿ ಜನ ಸೇವೆಯೇ ನನಗೆ ಪ್ರೇರಣೆ': RR ನಗರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ'

By Kannadaprabha News  |  First Published Oct 19, 2020, 8:52 AM IST

ಪತಿಯ ಜನ ಸೇವೆಯಲ್ಲಿ ನಾನೂ ಭಾಗಿ ಆಗಿದ್ದೇನೆ| ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ: ಕುಸುಮಾ| ಕೊರೋನಾದಿಂದ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗುತ್ತಿದೆ. ಆರೋಗ್ಯ ಸೇವೆ ಸಿಗುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಇವೆಲ್ಲವನ್ನೂ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ| 

Kusuma Hanumantharayappa Talks Over RR Nagar ByElection grg

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಅ.19):  ನನ್ನ ಪತಿ ಹಾಗೂ ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಜನ ಸೇವೆಯೇ ನಾನು ಜನಸೇವೆಗೆ ಬರಲು ಪ್ರಮುಖ ಪ್ರೇರಣೆ. ಅವರೊಂದಿಗೆ ಕಳೆದ ನನ್ನ ಜೀವನದ ಐದು ವರ್ಷಗಳ ಅಮೂಲ್ಯ ಸಮಯವನ್ನು ಅಳಸಿ ಹಾಕಲು (ಡಿಲೀಟ್‌) ಅಥವಾ ಕಳೆದು ಹಾಕಲು (ಮೈನಸ್‌) ಮಾಡಲು ಆಗುವುದಿಲ್ಲ. ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮಾಡುತ್ತಿದ್ದ ಕೆಲಸಗಳಲ್ಲಿ ನಾನೂ ಭಾಗಿಯಾಗಿದ್ದೇನೆ. ಅದೇ ಪ್ರೇರಣೆಯಿಂದ ರಾಜಕೀಯಕ್ಕೆ ಬಂದಿದ್ದೇನೆ.
ನನ್ನ ತಂದೆಯ ಉತ್ತಮ ಕೆಲಸಗಳು, ನನ್ನ ಸದುದ್ದೇಶಕ್ಕೆ ರಾಜರಾಜೇಶ್ವರಿನಗರ ಜನತೆ ಆಶೀರ್ವಾದ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಸತತ ಎರಡು ಬಾರಿ ಹಾರಿರುವ ಬಾವುಟವನ್ನು ಮತ್ತೊಮ್ಮೆ ಹಾರಿಸುತ್ತೇನೆ. ನಾನು ಗೆದ್ದರೂ, ಸೋತರೂ ಫಲಿತಾಂಶದೊಂದಿಗೆ ಸಂಬಂಧವಿಲ್ಲದೆ ನನ್ನ ಜೀವನ ಪರ್ಯಂತ ಜನಸೇವೆಯಲ್ಲೇ ತೊಡಗಿರುತ್ತೇನೆ.

Tap to resize

Latest Videos

ಹೀಗೆ ವಿಶ್ವಾಸದಿಂದ ನುಡಿದವರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌ (ಕುಸುಮಾ ಹನುಮಂತರಾಯಪ್ಪ). ತಮ್ಮ ರಾಜಕೀಯ ಪ್ರವೇಶದ ಉದ್ದೇಶ, ಉಪ ಚುನಾವಣೆಯ ತಯಾರಿ, ಮುಂದಿನ ಧ್ಯೇಯಗಳ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ್ದಾರೆ.

ಕುಸುಮಾ ಅವರು ರಾಜಕೀಯ ಜೀವನಕ್ಕೆ ಮರಳಿದ್ದು ಏಕೆ?

ನನ್ನ ತಂದೆ ಹನುಮಂತರಾಯಪ್ಪ ಅವರು ರಾಜಕೀಯದಲ್ಲಿರುವವರು. ಡಿ.ಕೆ. ರವಿ ಅವರನ್ನು ಮದುವೆಯಾದ ಬಳಿಕವೂ ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಅವರು ಮಾಡುತ್ತಿದ್ದ ಜನಸೇವೆಯಲ್ಲಿ ನಾನೂ ಭಾಗಿಯಾಗಿದ್ದೆ. ಹಳ್ಳಿ-ಹಳ್ಳಿಗೂ ಓಡಾಡಿದ್ದೇನೆ. ಜನರೊಂದಿಗೆ ಬೆರೆತು ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದ್ದೇನೆ. ಸಮಸ್ಯೆಗಳನ್ನು ಬಗೆಹರಿಸಲು ನನ್ನ ಕೈಲಾದ ಕೆಲಸ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೇನೆ.

ಫುಲ್ ಗರಂ ಆದ್ರು ಆರ್‌ಆರ್‌ ನಗರ ಅಭ್ಯರ್ಥಿ ಕುಸುಮಾ : ಕಾರಣ ಏನು..?

ಅಂದ್ರೆ, ರಾಜಕೀಯ ಪ್ರವೇಶಕ್ಕೆ ಡಿ.ಕೆ. ರವಿಯೇ ಪ್ರೇರಣೆ?

ಅವರೊಂದಿಗೆ ಕಳೆದ ಹಾಗೂ ಅವರ ಜನ ಸೇವೆಯನ್ನು ಹತ್ತಿರದಿಂದ ನೋಡಿದ ದಿನಗಳು ನನಗೆ ಪ್ರೇರಣೆ ಹಾಗೂ ಸ್ಫೂರ್ತಿದಾಯಕ. ನನ್ನ ಜೀವನದಲ್ಲಿ 21 ರಿಂದ 25ವಯಸ್ಸುವರೆಗಿನ 5 ವರ್ಷಗಳನ್ನು ಹಾಗೆಯೇ ಮೈನಸ್‌ ಅಥವಾ ಡಿಲೀಟ್‌ ಮಾಡಲಾಗುವುದಿಲ್ಲ.

ಕಾಂಗ್ರೆಸ್‌ ಪಕ್ಷವೇ ಏಕೆ?

ಕಾಂಗ್ರೆಸ್‌ ಪಕ್ಷ ಎಂದರೆ ನಮ್ಮ ಕುಟುಂಬದ ಪಕ್ಷ. ಜೊತೆಗೆ ಕಾಂಗ್ರೆಸ್‌ನ ಜಾತ್ಯತೀತ ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಳ್ಳುವ ಸಿದ್ಧಾಂತ ನನಗೆ ವೈಯಕ್ತಿಕವಾಗಿ ಒಗ್ಗುವ ಸಿದ್ಧಾಂತ.

ಕ್ಷೇತ್ರದಲ್ಲಿ ಜನರ ಸ್ಪಂದನೆ ಹಾಗೂ ಪಕ್ಷದ ಬೆಂಬಲ ಹೇಗಿದೆ?

ಕೊರೋನಾ ಮಾರ್ಗಸೂಚಿ ಪ್ರಕಾರವೇ ಪ್ರಚಾರ ನಡೆಸುತ್ತಿದ್ದೇನೆ. ಹೋದ ಕಡೆಯಲ್ಲಿ ಎಲ್ಲಾ ಆರ್‌.ಆರ್‌. ನಗರ ಜನತೆ ಸ್ವಂತ ಮಗಳೇ ಚುನಾವಣೆಗೆ ನಿಂತಷ್ಟುಖುಷಿಯಾಗಿ ಸ್ಪಂದಿಸುತ್ತಿದ್ದಾರೆ. ಇನ್ನು ನಮ್ಮ ನಾಯಕರೆಲ್ಲರೂ ಖುದ್ದು ಕ್ಷೇತ್ರಕ್ಕೆ ಬಂದು ನನ್ನ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರು ನನ್ನ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

ನಿಮ್ಮ ಮೇಲೆ ಎಫ್‌ಐಆರ್‌ ದಾಖಲಾಗಿದ್ದು ಏಕೆ?

ನಾಮಪತ್ರ ಸಲ್ಲಿಕೆ ವೇಳೆ ನನ್ನೊಂದಿಗೆ ಅಷ್ಟೊಂದು ಹಿರಿಯ ನಾಯಕರಿದ್ದರೂ ಕುಸುಮಾ ಒಬ್ಬಳೇ ಬ್ಯಾರಿಕೇಡ್‌ ತಳ್ಳಿ ನಿಯಮ ಉಲ್ಲಂಘಿಸಿದ್ದಾಳೆ ಎಂದು ಎಫ್‌ಐಆರ್‌ ಹಾಕಿದ್ದಾರೆ. ಹೆಣ್ಣು ಮಗಳು ಎಂದರೆ ಸುಲಭ ಗುರಿ ಎಂದುಕೊಂಡಿದ್ದಾರೆ. ಇಂತಹವುಗಳಿಗೆ ಹೆದರಿ ಮನೆಯಲ್ಲಿ ಕೂರಲ್ಲ.

RR ನಗರ ಉಪಕದನ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ವಿರುದ್ಧ ಕೇಸ್‌ ಖಂಡಿಸಿ ಕಾಂಗ್ರೆಸ್‌ ಧರಣಿ

ಡಿ.ಕೆ. ರವಿ ಅವರ ಕುಟುಂಬದ ಆರೋಪದ ಬಗ್ಗೆ ಏನು ಹೇಳುತ್ತೀರಿ?

ಮದುವೆಯಾದ 5 ವರ್ಷದಲ್ಲೇ ವಿದುವೆಯಾದಾಗ ನನ್ನ ಜೀವನ ಇಲ್ಲಿಗೇ ಮುಗಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಹೋಗಿದ್ದೆ. ನನ್ನ ನೋವು ಯಾವ ಹೆಣ್ಣು ಮಗಳಿಗೂ ಬೇಡ. ಡಿ.ಕೆ.ರವಿ ಅವರ ಕುಟುಂಬದವರ ಮಾತುಗಳನ್ನು ನಾನು ಆಶೀರ್ವಾದ ಎಂದು ಭಾವಿಸಿ ಮುಂದೆ ಹೋಗುತ್ತೇನೆ. ಇನ್ನು ನನ್ನ ಬಗ್ಗೆ ಟೀಕಿಸುವ ಬೇರೆಯವರು ಒಮ್ಮೆ ನನ್ನ ಸ್ಥಾನದಲ್ಲಿ ನಿಂತು ಯೋಚಿಸಿ ನೋಡಲಿ ಎಂದಷ್ಟೇ ಮನವಿ ಮಾಡುತ್ತೇನೆ.

ನಿಮ್ಮ ಪ್ರಕಾರ ಆರ್‌.ಆರ್‌.ನಗರದ ಸಮಸ್ಯೆಗಳು? ನಿಮ್ಮ ಬಳಿ ಇರುವ ಪರಿಹಾರಗಳೇನು?

ಪ್ರತಿ ವಾರ್ಡ್‌ನಲ್ಲೂ ವಿಭಿನ್ನ ಸಮಸ್ಯೆ ಇದೆ. ಪ್ರಚಾರದ ವೇಳೆ ಹಲವು ಸಮಸ್ಯೆ ಕಣ್ಣಿಗೆ ಬೀಳುತ್ತಿವೆ. ಜನರೂ ಹೇಳಿಕೊಳ್ಳುತ್ತಿದ್ದಾರೆ. ಕೊರೋನಾದಿಂದ ಒಂದೊತ್ತಿನ ಊಟಕ್ಕೂ ಸಮಸ್ಯೆಯಾಗುತ್ತಿದೆ. ಆರೋಗ್ಯ ಸೇವೆ ಸಿಗುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಇವೆಲ್ಲವನ್ನೂ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
 

vuukle one pixel image
click me!
vuukle one pixel image vuukle one pixel image