ಚುನಾವಣಾ ಸಮರ: ಕೋವಿಡ್ ಸೋಂಕಿತರಿಂದ ಮತದಾನ

By Kannadaprabha NewsFirst Published Oct 29, 2020, 8:06 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಮತದಾನ ಪ್ರಕ್ರಿಯೆಗಳು ನಡೆದಿದ್ದು, ಮತ್ತೊಂದು ಚುನಾವಣೆಗೆ ರಾಜ್ಯ ಸಿದ್ದವಾಗಿದೆ

ಬೆಂಗಳೂರು (ಅ.29):  ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆದ ಮತದಾನದ ವೇಳೆ ಕೆಲ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಆಡಳಿತರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಸೇರಿದಂತೆ 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿ ಮತಪೆಟ್ಟಿಗೆ ಸೇರಿದೆ. ನವೆಂಬರ್‌ 2ರಂದು ಮತಎಣಿಕೆ ನಡೆಯಲಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ.75ರಷ್ಟುಮತದಾನವಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ.70.11, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.73.32 ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇ.66ರಷ್ಟುಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ನ.2ರಂದು ಪ್ರಕಟವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಫಲಿತಾಂಶದತ್ತ ಚಿತ್ತನೆಟ್ಟಿದೆ.

'ಜಯಚಂದ್ರರನ್ನು ಮುದಿ ಎತ್ತು ಅನ್ನೋದಾದರೆ ಮೋದಿ, ಬಿಎಸ್‌ವೈ, ದೇವೇಗೌಡ್ರು ಎಳಸು ಎತ್ತುಗಳೇ'?

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗೆ ನಾಲ್ಕು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೇಲ್ಮನೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಬೇಕು ಎಂದು ನಿರೀಕ್ಷಿಸಿದ್ದರೆ, ಪಕ್ಷೇತರರು ಮೇಲ್ಮನೆಗೆ ಪ್ರವೇಶಿಸುವ ಕನಸು ಕಂಡಿದ್ದಾರೆ. ಮತದಾನದ ವೇಳೆ ಮತದಾರರ ಹೆಸರು ನಾಪತ್ತೆ ಸೇರಿದಂತೆ ಸಣ್ಣಪುಟ್ಟಗೊಂದಲ ಉಂಟಾದ ಪ್ರಸಂಗಗಳು ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ವರದಿಯಾಗಿವೆ.

ಗಣ್ಯರಿಂದ ಮತಚಲಾವಣೆ: ಸಚಿವರು, ಶಾಸಕರು, ಶಿಕ್ಷಕ ಮತ್ತು ಪದವೀಧರರು ಬೆಳಗ್ಗೆಯಿಂದಲೇ ಆಯಾ ತಾಲೂಕು ಕೇಂದ್ರದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಅತ್ಯಂತ ಉತ್ಸಾಹದಿಂದಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ವಿಧಾನ ಪರಿಷತ್‌ ಸದಸ್ಯರಾದ ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್‌, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ, ಪುತ್ರ ಶಾಕೀರ ಸನದಿ, ಸಂಕಲ್ಪ ಶೆಟ್ಟರ್‌, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳದಲ್ಲಿ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಗದಗದಲ್ಲಿ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ತುಮಕೂರಲ್ಲಿ ಸಂಸದ ಬಿ.ಎಸ್‌.ಬಸವರಾಜು, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮತದಾನ ಮಾಡಿದರು.

ಸಣ್ಣಪುಟ್ಟಘರ್ಷಣೆ: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿದ್ದರೆ, ದಾವಣಗೆರೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆದಿದೆ. ಅಲ್ಲದೇ, ಇತರೆಡೆಯೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಘಟನೆಗಳು ಜರುಗಿವೆ. ಪದವೀಧರ ಮತ್ತು ಶಿಕ್ಷಕ ಮತದಾರರಿಂದ ಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರಕ ಕೊರೋನಾ ಸೋಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣಾ ಇದಾಗಿದೆ. ಮಾಸ್ಕ್‌ ಕಡ್ಡಾಯ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ನ.2ರಂದು ನಾಲ್ಕೂ ಮತಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರದ ಮತ ಎಣಿಕೆಯು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯು ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಜರುಗಲಿದೆ. ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಜರುಗಲಿದೆ.

ಅಣ್ಣಿಗೇರಿಯಲ್ಲಿ ಕೋವಿಡ್‌ ಸೋಂಕಿತರಿಂದ ಹಕ್ಕು ಚಲಾವಣೆ

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಅಣ್ಣಿಗೇರಿ ಪುರಸಭೆಯ ಮತಗಟ್ಟೆಸಂಖ್ಯೆ 50ರಲ್ಲಿ ಇಬ್ಬರು ಕೋವಿಡ್‌ ಸೋಂಕಿತರು ಪಿಪಿಇ ಕಿಟ್‌ ಧರಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್‌ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು. ಹೋಂ ಐಸೋಲೇಷನ್‌ನಲ್ಲಿದ್ದ ಒಬ್ಬರು ಹಾಗೂ ಕೋವಿಡ್‌ ಕೇರ್‌ ಸೆಂಟರಿನಲ್ಲಿ ಇದ್ದ ಒಬ್ಬರು ಮತದಾನ ಮಾಡಿದರು. ಇವರು ಮತಗಟ್ಟೆಗೆ ಬಂದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮತದಾನದ ನಂತರ ಮತಗಟ್ಟೆಯನ್ನು ಪುನಃ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಯಿತು.

click me!