
ಬೆಂಗಳೂರು(ಅ. 25): ನನ್ನನ್ನು ನಿಮ್ಮ ಮನೆಮಗಳೆಂದು ತಿಳಿದು ಈ ಚುನಾವಣೆಯಲ್ಲಿ ಗೆಲ್ಲಿಸಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಗೆದ್ದ ಮೇಲೆ ಹಣ, ಅಧಿಕಾರದಾಸೆಗೆ ಕ್ಷೇತ್ರದ ಜನರ ಪ್ರೀತಿ, ಆಶೀರ್ವಾದವನ್ನು ಮಾರಿಕೊಳ್ಳುವಂತಹವಳು ನಾನಲ್ಲ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.
ಶನಿವಾರ ಕ್ಷೇತ್ರದ ಎಚ್‌ಎಂಟಿ ವಾರ್ಡ್ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರುಗಳೊಂದಿಗೆ ಕುಸುಮಾ ಅವರು ಭರ್ಜರಿ ಪ್ರಚಾರ ನಡೆಸಿ ಮತಯಾಚಿಸಿದರು.
ತೆರೆದ ವಾಹನದಲ್ಲಿ ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿ ಕುಸುಮಾ, ಪೀಣ್ಯ ತಲುಪಿದಾಗ ಅಲ್ಲಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ದೇವಾಲಯದ ಮುಂದೆಯೇ ಜನರನ್ನುದ್ದೇಶಿಸಿ ಮಾತನಾಡಿದರು. ನನ್ನನ್ನು ನಿಮ್ಮ ಮನೆ ಮಗಳೆಂದು ಭಾವಿಸಿ ಇದೊಂದು ಬಾರಿ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನ ಸೇವೆಗೆ ಅವಕಾಶ ಮಾಡಿಕೊಡಿ. ಈ ಆಂಜನೇಯ ದೇವರ ಮುಂದೆಯೇ ನಾನು ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ನಾನು ಯಾವತ್ತೂ ಹಣ, ಅಧಿಕಾರದಾಸೆಗೆ ಜನರು ನೀಡಿದ ಆಶೀರ್ವಾದ, ಪ್ರೀತಿ, ವಿಶ್ವಾಸವನ್ನು ಮಾರಿಕೊಳ್ಳುವವಳಲ್ಲ. ಕಷ್ಟ, ಸುಖ ಯಾವುದೇ ಇರಲಿ ಸದಾ ಜನರೊಂದಿಗೆ ಇದ್ದು ಅವರ ಕಷ್ಟಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.
RR ನಗರ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್‌ಗೆ ಶಾಕ್
ದೀಪ ಹಚ್ಚೋಣ:
ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾತ್ರವಲ್ಲ ನಿಮ್ಮ ಮನೆಮಗಳಾಗಿ ಮತ ಭಿಕ್ಷೆ ಕೇಳಲು ಬಂದಿದ್ದೇನೆ. ಒಂದೇ ಒಂದು ಅವಕಾಶ ಮಾಡಿ ಕೊಟ್ಟು ನೋಡಿ ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತೇನೆ. ಯುವಕರು, ಮಹಿಳೆಯರು, ಮಕ್ಕಳು, ವಯೋವೃದ್ಧರು ಎಲ್ಲರ ಏಳಿಗೆಗೆ ದುಡಿಯುತ್ತೇನೆ. ಜನರ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ತರುವ ಕೆಲಸ ಮಾಡುವುದಿಲ್ಲ. ಬಿಜೆಪಿಯವರು ಬೆಂಕಿ ಹಚ್ಚುವ ಮಾತುಗಳನ್ನಾಡುತ್ತಿದ್ದಾರೆ. ನಾವು ಆ ಬೆಂಕಿ ಹಾರಿಸಿ ದೀಪ ಹಚ್ಚುವ ಕೆಲಸ ಮಾಡೋಣ. ನನ್ನನ್ನು ಗೆಲ್ಲಿಸುವುದರೊಂದಿಗೆ ನಮ್ಮ ಪಕ್ಷಕ್ಕೂ ಶಕ್ತಿ ತುಂಬಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ಕ್ಷೇತ್ರದ ಜನರು ಈ ಹಿಂದೆ ವಿಧಾನಸಭೆ, ಲೋಕಸಭೆ, ಸ್ಥಳೀಯ ಕಾರ್ಪೊರೇಷನ್ ಚುನಾವಣೆ ಎಲ್ಲದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದೀರಿ. ತಮ್ಮ ವಿಶ್ವಾಸಕ್ಕೆ ಬದ್ಧವಾಗಿ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಿ ಅಭಿವೃದ್ಧಿ ಮಾಡಿದೆ. ಆದರೆ, ನಮ್ಮ ಪಕ್ಷದಿಂದ ಗೆದ್ದ ಅಭ್ಯರ್ಥಿ ದ್ರೋಹ ಮಾಡಿ ಹೋಗಿದ್ದಾರೆ. ಅವರು ಮಾಡಿರುವ ದ್ರೋಹಕ್ಕೆ ತಕ್ಕ ಪಾಠ ಕಲಿಸುವ ಕಾಲ ಇದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.