
ಹಾವೇರಿ (ಅ.25): ಇಷ್ಟುದಿನ ಸಿಎಂ ಕುರ್ಚಿಗಾಗಿ ತಮ್ಮೊಳಗೇ ಕನಸು ಕಾಣುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಬಹಿರಂಗವಾಗಿಯೇ ಸಂಘರ್ಷಕ್ಕೆ ಇಳಿದಿದ್ದಾರೆ. ಎಲ್ಲ ಚುನಾವಣೆಗಳಲ್ಲಿ ಸೋತರೂ ಆ ಪಕ್ಷದ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಇಷ್ಟುದಿನ ಸಿಎಂ ಕುರ್ಚಿಗಾಗಿ ಕನಸು ಕಾಣುತ್ತಿದ್ದರು. ಕನಸು ಕಾಣುತ್ತಲೇ ಈಗ ಬಹಿರಂಗವಾಗಿ ಬಡಿದಾಡುವ ಮಟ್ಟಕ್ಕೆ ಇಳಿದಿದ್ದಾರೆ. ರಾಜ್ಯದ ಜನತೆ ತಿರಸ್ಕಾರ ಮಾಡಿದರೂ ಕುರ್ಚಿಗಾಗಿ ನಾಚಿಕೆಗೆಟ್ಟವರಂತೆ ವರ್ತಿಸುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಶಿಷ್ಯ ಜಮೀರ್ ಕೂಡ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದಾರೆ.
ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು, ಈ ವೇಳೆ ಸಿದ್ದುಗೆ ಟಾಂಗ್ ಕೊಟ್ಟ ಈಶ್ವರಪ್ಪ ..
ಅತ್ತ ಸೌಮ್ಯ ರೆಡ್ಡಿ ಅವರು ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎನ್ನುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ಮೇಲೆ ಸಿಎಂ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮತ್ತೊಬ್ಬ ನಾಯಕ ಎಚ್.ಕೆ.ಪಾಟೀಲ್ ಹೇಳುತ್ತಾರೆ. ಅಧಿಕಾರ ನಡೆಸಲು ಅಯೋಗ್ಯರು ಎಂದು ಜನರು ಹೇಳಿದ ಮೇಲೂ ಸಿಎಂ ಕುರ್ಚಿ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಹಾಗೂ ನಾಲ್ಕು ಪರಿಷತ್ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಇದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.