ಜಾತಿ ರಾಜಕಾರಣಕ್ಕೆ ಕಡಿವಾಣ ಬೀಳಲಿ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

By Kannadaprabha NewsFirst Published Nov 23, 2022, 12:45 PM IST
Highlights

ವಿಧಾನಸಭಾ ಚುನಾವಣೆ ಇನ್ನೂ ನಾಲ್ಕು ತಿಂಗಳಲ್ಲಿ ಬರುತ್ತವೆ. ಪ್ರಜಾಪ್ರಭುತ್ವದ ಮಾಲೀಕನಾಗಿರುವ ಮತದಾರ ಅಭಿವೃದ್ಧಿ ಬಗ್ಗೆ ಚಿಂತಿಸಬೇಕಿದೆ. ಜಾತಿ, ಹಣ, ಹೆಂಡಗಳ ಬಗ್ಗೆ ಯಾರೂ ವಾಲಬಾರದು ಎಂದ ರಾಯರೆಡ್ಡಿ

ಕುಕನೂರು(ನ.23): 1985ರಲ್ಲಿ ನಾನು ಶಾಸಕನಾದಾಗ ಯಲಬುರ್ಗಾ ಕ್ಷೇತ್ರದಲ್ಲಿ ಸ್ಕೂಟರ್‌ನಲ್ಲಿ ಓಡಾಡಿ ಅಭಿವೃದ್ಧಿ ಮಾಡಿದ್ದೇನೆ. ಅವಾಗ ಚುನಾವಣೆಗಳು ನಂಬಿಕೆ, ವಿಶ್ವಾಸದ ಪ್ರತೀಕ ಆಗಿದ್ದವು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ತಾಲೂಕಿನ ರಾಜೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಂಗ್ರೆಸ್‌ ವತಿಯಿಂದ ನಡೆದ ಅಭಿವೃದ್ಧಿಯ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆ ಇನ್ನೂ ನಾಲ್ಕು ತಿಂಗಳಲ್ಲಿ ಬರುತ್ತವೆ. ಪ್ರಜಾಪ್ರಭುತ್ವದ ಮಾಲೀಕನಾಗಿರುವ ಮತದಾರ ಅಭಿವೃದ್ಧಿ ಬಗ್ಗೆ ಚಿಂತಿಸಬೇಕಿದೆ. ಜಾತಿ, ಹಣ, ಹೆಂಡಗಳ ಬಗ್ಗೆ ಯಾರೂ ವಾಲಬಾರದು ಎಂದರು.

ರಾಷ್ಟ್ರದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ಹೆಚ್ಚಿದೆ. ಸೇವಾ ಮನೋಭಾವ ಕಾಣುತ್ತಿಲ್ಲ. ವಾಮಮಾರ್ಗದ, ಜಾತಿ ರಾಜಕಾರಣಕ್ಕೆ ಕಡಿವಾಣ ಬೀಳಬೇಕಿದೆ. ಸ್ವಾತಂತ್ರ್ಯ ಸಿಕ್ಕಾಗ 26 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಇರಲಿಲ್ಲ. ನೀರಾವರಿ, ಸಾರಿಗೆ ಸಮರ್ಪಕವಾಗಿರಲಿಲ್ಲ. ಒಪ್ಪತ್ತಿನ ಊಟಕ್ಕೂ ಜನ ಪರದಾಡುವ ಪರಿಸ್ಥಿತಿ ಇತ್ತು. ಕಾಂಗ್ರೆಸ್‌ ರಾಷ್ಟ್ರದ ಅಭಿವೃದ್ಧಿಗೆ ಸ್ವಾತಂತ್ರ್ಯ ನಂತರ ಶ್ರಮಿಸುತ್ತಾ ಬಂದಿತು. ಇತ್ತೀಚೆಗೆ ಕಾಂಗ್ರೆಸ್‌ ಕೊಡುಗೆ ಏನು ಎಂದು ಪ್ರಶ್ನಿಸುವ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ವಿಧಾನಸಭಾ ಚುನಾವಣೆ 2023: ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿದ್ದರಾಮಯ್ಯ

ಸರ್ವರಿಗೂ ಸಮಾನತೆ ಸಂವಿಧಾನವನ್ನು ಕಾಯ್ದುಕೊಂಡು ಬಂದಿದ್ದೇವೆ. ರಾಷ್ಟ್ರದಲ್ಲಿ ನಿರ್ಮಾಣ ಆಗಿರುವ ಅಣೆಕಟ್ಟುಗಳು ಅವು ಯಾರ ಕೊಡುಗೆ ಹೇಳಲಿ ನೋಡೋಣ. ಸಾರಿಗೆ, ಕೃಷಿ, ಉದ್ಯಮಗಳ ಅಭಿವೃದ್ಧಿ ಮಾಡುತ್ತಾ ಕಾಂಗ್ರೆಸ್‌ ರಾಷ್ಟ್ರಕ್ಕಾಗಿ ಶ್ರಮಿಸಿದೆ ಎಂದರು.

1985ರಲ್ಲಿ ನಾನು ಶಾಸಕನಾದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಾಗಿರಲಿಲ್ಲ. ಅವಾಗ ನನ್ನ ಬಳಿ ಕಾರು ಸಹ ಇರಲಿಲ್ಲ. ನಾನು ಸ್ಕೂಟರಿನಲ್ಲಿ ಓಡಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಗ್ರಾಮಗಳಿಗೆ ತೆರಳುವ ರಸ್ತೆಗಳು ಬಂಡಿದಾರಿ ಆಗಿದ್ದವು. ಜಾಲಿ ಮುಳ್ಳುಗಳಿಂದ ಕೂಡಿದ್ದವು. ಕೆಲವು ಕಳ್ಳಿಸಾಲುಗಳಾಗಿದ್ದವು. ನನ್ನ ಅಧಿಕಾರ ಅವಧಿಯಲ್ಲಿ ಅವುಗಳನ್ನೆಲ್ಲಾ ಡಾಂಬರ್‌ ರಸ್ತೆಗಳನ್ನಾಗಿ ಮಾಡಿದ್ದೇನೆ ಎಂದರು.

ದುಡ್ಡು, ಜಾತಿ, ಗಳಿಕೆಗೋಸ್ಕರ ರಾಜಕೀಯಕ್ಕೆ ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿ, ಗ್ರಾಮಗಳ ಅಭಿವೃದ್ಧಿ ಧ್ಯೇಯದೊಂದಿಗೆ ರಾಜಕೀಯಕ್ಕೆ ಬಂದು ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಮಾಡಿದ್ದೇನೆ ಎಂದರು.

ಯಲಬುರ್ಗಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕುಕನೂರು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಚಂಡೂರು, ಪ್ರಮುಖರಾದ ದಾನರೆಡ್ಡಿ, ದೇವಪ್ಪ ಅರಕೇರಿ, ಮಲ್ಲಿಕಾರ್ಜುನ ಭಜಂತ್ರಿ, ಫಕೀರಸಾಬ್‌ ರಾಜೂರು, ಅರವಿಂದ ಮುಂದಲಮನಿ ಇತರರಿದ್ದರು.
 

click me!