ಅಧಿಕಾರ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್ ವಿಫಲ: ಕೆ.ಎಸ್.ಈಶ್ವರಪ್ಪ ಲೇವಡಿ

Published : Dec 23, 2025, 05:26 AM IST
KS Eshwarappa

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಕ್ಕಾಗಿ ಜನರು ಪಶ್ಚಾತ್ತಾಪ ಪಡುವಂತ್ತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶಿವಮೊಗ್ಗ (ಡಿ.23): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಕ್ಕಾಗಿ ಜನರು ಪಶ್ಚಾತ್ತಾಪ ಪಡುವಂತ್ತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಧಿಕಾರಕ್ಕಾಗಿ ಸಿಎಂ ಮತ್ತು ಡಿಸಿಎಂ ಸಂಘರ್ಷಕಕ್ಕೆ ಇಳಿದಿದ್ದಾರೆ. ಈ ಸಂಘರ್ಷದಿಂದ ರಾಜ್ಯದ ಜನತೆ ಗೊಂದಲಕ್ಕೀಡಾಗಿದ್ದಾರೆ. ಮಠದ ಸ್ವಾಮೀಜಿಗಳನ್ನು ಜಾತಿಗೆ ಸೀಮಿತಗೊಳಿಸಿ, ಅವರ ಪಕ್ಷದಲ್ಲಿಯೇ ಮಂತ್ರಿಗಳು, ಶಾಸಕರು, ಕಾರ್ಯಕರ್ತರನ್ನು ಮೂರು ಗುಂಪುಗಳನ್ನಾಗಿ ಮಾಡಿದ್ದಾರೆ.

ಅಧಿಕಾರ ಹಂಚಿಕೆಯ ಗೊಂದಲ ಬಗೆಹರಿಯುವಂತೆ ಕಾಣುವುದಿಲ್ಲ. ಎಐಸಿಸಿಯು ಕೂಡ ದುರ್ಬಲವಾಗಿದೆ. ಸಿಎಂ ಮತ್ತು ಡಿಸಿಎಂ ಇಬ್ಬರ ಮಾತಿನಲ್ಲೂ ತಾಳಮೇಳ ಇಲ್ಲ, ಕಾಂಗ್ರೆಸ್ ಪಕ್ಷಕ್ಕೆ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ತೀರ್ಮಾನ ಮಾಡುವುದು ನಾನಲ್ಲ, ಹೈಕಮಾಂಡ್ ಮಾಡುತ್ತದೆ ಎಂದು ಹೇಳುವುದರ ಮೂಲಕ ಎಐಸಿಸಿ ಅಧ್ಯಕ್ಷರಾದರೂ ಕಾಂಗ್ರೆಸ್‌ನಲ್ಲಿ ಖರ್ಗೆಯವರಿಗೆ ಯಾವುದೇ ಬೆಲೆ ಇಲ್ಲ ಎಂದು ಒಪ್ಪಿಕೊಂಡಂತಾಗಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಎಂದರೆ ಕೇವಲ ಗಾಂಧಿ ಕುಟುಂಬದ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಎಂಬಂತಾಗಿದೆ.

ಅದರೂ ರಾಜ್ಯದಲ್ಲಿನ ಅಧಿಕಾರ ಹಂಚಿಕೆಯ ಗೊಂದಲ ನಿವಾರಿಸುವಲ್ಲಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ವಿಫಲವಾಗಿದೆ ಹಾಗೂ ಹೈಕಮಾಂಡ್ ದುರ್ಬಲಗೊಂಡಂತಾಗಿದೆ ಎಂದರು. ಕೇವಲ ಡಿನ್ನರ್ ಮೀಟಿಂಗ್, ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಕಾಲಾಹರಣ ಮಾಡುತ್ತಿರುವ ಇವರು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ, ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾ ಜನರ ಮನಸ್ಸಿನಲ್ಲಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಯ ಗೊಂದಲಕ್ಕೆ ತೆರೆ ಎಳೆದು ಸರ್ಕಾರ ಸರಿಯಾದ ಆಡಳಿತ ನಡೆಸುವತ್ತ ಗಮನ ಕೊಡುವಂತಾಗಲಿ ಎಂದು ಹೇಳಿದರು.

ತುರ್ತು ಪರಿಸ್ಥಿತಿಗಿಂತ ಘೋರ

ಕಾಂಗ್ರೆಸ್ ನಾಯಕರು ಈಗ ತಮ್ಮ ಕುರ್ಚಿಗಾಗಿ ಮಸೀದಿ ಮತ್ತು ಚರ್ಚಿಗೆ ಹೋಗದೆ ಹಿಂದೂ ದೇವಾಲಯಗಳಿಗೆಹೋಗಿ ಹೋಮ-ಹವನ ಮಾಡಿಸುವುದನ್ನು ನೋಡಿದರೆ ಇವರ ನಾಟಕ ಅರ್ಥವಾಗುತ್ತದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರ ಅಂಗೀಕರಿಸಿರುವ ದ್ವೇಷ ಭಾಷಣ ವಿರೋಧಿ ಮಸೂದೆ ತುರ್ತು ಪರಿಸ್ಥಿತಿಗಿಂತ ಘೋರವಾದ ಪರಿಣಾಮಗಳನ್ನು ಬೀರಬಹುದಾದ ಒಂದು ಕರಾಳ ಕಾನೂನು. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ತಂದಿರುವ ಕರಾಳ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕೆಂದು, ಪ್ರಜಾಪ್ರಭುತ್ವ ವಿರೋಧಿ ಮತ್ತು ರಾಷ್ಟ್ರಭಕ್ತರಿಗೆ ಅನ್ಯಾಯವಾಗುವ ಈ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಶ್ರೀಕಾಂತ್, ಬಾಲು, ಚನ್ನಬಸಪ್ಪ, ಲಿಂಗ ಮೂರ್ತಿ, ಶಂಕ್ರಾನಾಯ್ಕ, ರಾಜಣ್ಣ, ಕುಬೇರಪ್ಪ, ಚನ್ನಬಸಪ್ಪ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌
‘ನರೇಗಾ’ ಬದಲಾವಣೆ ವಿರುದ್ಧ ಹೋರಾಟ, ಇದು ಐತಿಹಾಸಿಕ ಪ್ರಮಾದ: ಸಚಿನ್‌ ಪೈಲಟ್