
ಬೆಂಗಳೂರು(ಅ.24): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನ ಸಾಮಾನ್ಯರ ರಕ್ತ ಹೀರುತ್ತಿದ್ದು, ಮುಂದುವರೆದ ಭಾಗವಾಗಿ ಸರ್ಕಾರಿ ಶಾಲಾ ಮಕ್ಕಳಿಂದ ಮಾಸಿಕ 100 ರು. ಸುಲಿಗೆಗೆ ನಿಂತಿದೆ. ಈ ಬಡವರ ವಿರೋಧಿ ಕ್ರಮವು ಸರ್ಕಾರದ ದಾರಿದ್ರ್ಯಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಿಮುಖರಾಗಿದ್ದಾರೆ. ಇದಕ್ಕೆ ಸರ್ಕಾರದ ಶಿಕ್ಷಣ ವಿರೋಧಿ ನೀತಿಗಳೇ ಕಾರಣ ಎಂದು ಟೀಕಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಲು ಏರ್‌ಪೋರ್ಟ್‌ವರೆಗೆ ಬಂದಿದ್ದರು: ಕೆ.ಎಸ್.ಈಶ್ವರಪ್ಪ
ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಅರ್ಧದಷ್ಟುಮುಕ್ತಾಯವಾಗಿದ್ದರೂ ಇನ್ನೂ ಹಲವೆಡೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಸಾಕ್ಸ್ ವಿತರಣೆ ಆಗಿಲ್ಲ. ಪಠ್ಯ ಪರಿಕರಗಳನ್ನು ಪೂರೈಸದಿದ್ದರೆ ಮಕ್ಕಳು ಕಲಿಯುವುದಾದರೂ ಹೇಗೆ? ಸರ್ಕಾರ ಇದರಲ್ಲೂ 40 ಪರ್ಸೆಂಟ್ ಕಮಿಷನ್ ಬೆನ್ನು ಬಿದ್ದಿರುವುದರಿಂದ ವಿಳಂಬ ಆಗುತ್ತಿದೆಯೇ? ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬದವರು. ಅವರಿಂದಲೂ ಹಣ ವಸೂಲಿಗೆ ಇಳಿದಿರುವುದು ಖಂಡನೀಯ. ಇದರ ಹಿಂದೆ ಅವರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಹುನ್ನಾರ ಇದೆ. ಸರ್ಕಾರದ ಬೇಜವಾಬ್ದಾರಿಯಿಂದ ಮಕ್ಕಳು ಶಿಕ್ಷಣ ವಂಚಿತರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ನಮ್ಮ ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಹಾಲು, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ, ವಿದ್ಯಾಸಿರಿ, ಹಾಸ್ಟೆಲ್, ವಿದೇಶ ವ್ಯಾಸಂಗಕ್ಕೆ ಸಾಲಸೌಲಭ್ಯ ಮತ್ತಿತರ ಯೋಜನೆಗಳನ್ನು ಜಾರಿ ಮಾಡಿತ್ತು. ಈಗ ಬಡವರ ವಿರೋಧಿ ಸರ್ಕಾರ ಒಂದೊಂದನ್ನೇ ಕಿತ್ತು ಹಾಕುತ್ತಿದೆ. ಇದೀಗ ಅವರಿಂದ ಹಣವನ್ನೂ ಕೀಳಲು ಯತ್ನಿಸಿರುವುದು ಅನ್ಯಾಯದ ಪರಮಾವಧಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.