ಮುಸ್ಲಿಮರಿಗೆ ಅನುದಾನ ನೀಡಿದ್ರೆ ಯತ್ನಾಳ್‌ಗೆ ಹೊಟ್ಟಿ ಉರಿಯೇಕೆ?: ಎಸ್.ಎಂ.ಪಾಟೀಲ

By Kannadaprabha News  |  First Published Dec 8, 2023, 3:31 PM IST

ಬಜೆಟ್‌ನಲ್ಲಿ ಫಲ ಅನುಭವಿಸುವ ಹಕ್ಕು ಮುಸ್ಲಿಮರಿಗೂ ಇದೆ. ಅವರು ಈ ದೇಶದ ಪ್ರಜೆಗಳಾಗಿದ್ದಾರೆ. ಅವರೂ ತೆರಿಗೆ ಕಟ್ಟುತ್ತಿದ್ದಾರೆ. ಇದನ್ನು ಪ್ರಶ್ನಿಸುವ, ನಿರಾಕರಿಸುವ ಹಕ್ಕು ಇವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಕೆಪಿಸಿಸಿ ರಾಜ್ಯ ವಕ್ತಾರ ಎಸ್.ಎಂ.ಪಾಟೀಲ 


ವಿಜಯಪುರ(ಡಿ.08):  ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯ ಮೌಲ್ವಿಗಳ ಸಭೆಯಲ್ಲಿ ಮುಂದಿನ ಬಜೆಟ್‌ನಲ್ಲಿ ಮುಸ್ಲಿಮರಿಗೆ ₹10 ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿರುವುದು ಶಾಸಕ ಬಸವನಗೌಡ ಯತ್ನಾಳ ಹಾಗೂ ಸುನೀಲಕುಮಾರಗೆ ಹೊಟ್ಟೆಯುರಿ ಏಕೆ ಎಂದು ಅಹಿಂದ ನಾಯಕ ಹಾಗೂ ಕೆಪಿಸಿಸಿ ರಾಜ್ಯ ವಕ್ತಾರ ಎಸ್.ಎಂ.ಪಾಟೀಲ ಗಣೀಹಾರ ಪ್ರಶ್ನಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರು ಈಗೇನು ದುಡ್ಡು ಕೊಟ್ಟೇಬಿಟ್ಟರು ಎನ್ನುವಂತೆ ಇವರು ಆಡುತ್ತಿದ್ದಾರೆ. ಹಾಗೆಯೇ ಇಲ್ಲಿನ ಮೌಲ್ವಿಯೊಬ್ಬರ ಕುರಿತು ಮಾಡಿರುವ ಆರೋಪವೂ ಅಷ್ಟೇ ಬಾಲಿಶವಾಗಿದೆ ಎಂದು ಹೇಳಿದರು.

Tap to resize

Latest Videos

ತನ್ವೀರ್ ಪೀರಾಗೆ ಐಸಿಎಸ್ ಲಿಂಕ್: ಯತ್ನಾಳ್‌ಗೆ ತಲೆ ಕಟ್ಟಿದೆ, ರೌಡಿಶೀಟರ್‌ ಕೇಸ್‌ ಹಾಕಿ, ಮುಸ್ಲಿಂ ನಾಯಕರ ಆಕ್ರೋಶ

ಬಜೆಟ್‌ನಲ್ಲಿ ಫಲ ಅನುಭವಿಸುವ ಹಕ್ಕು ಮುಸ್ಲಿಮರಿಗೂ ಇದೆ. ಅವರು ಈ ದೇಶದ ಪ್ರಜೆಗಳಾಗಿದ್ದಾರೆ. ಅವರೂ ತೆರಿಗೆ ಕಟ್ಟುತ್ತಿದ್ದಾರೆ. ಇದನ್ನು ಪ್ರಶ್ನಿಸುವ, ನಿರಾಕರಿಸುವ ಹಕ್ಕು ಇವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಹೇಳಿದ್ದು ಮುಸ್ಲಿಮರ ತುಷ್ಟೀಕರಣವಲ್ಲ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯಾಗಿ ಅವರು ಮಾತನಾಡಿದ್ದಾರೆ. ಅದು ಒಬ್ಬ ಜನಪ್ರತಿನಿಧಿಯ ಕರ್ತವ್ಯ ಕೂಡ ಹೌದು. ಬಸವನಗೌಡರು ತಲೆ ಮೇಲೆ ಆಕಾಶ ಬಿದ್ದಂತೆ ಆಡುತ್ತಿದ್ದಾರೆ. ಆವರು ಬೇಕಿದ್ದರೆ ಮುಸ್ಲಿಮರ ಕೊಡುಗೆ ಬಗ್ಗೆ ಚೌಕಾಶಿ ಮಾಡಲಿ. ಸಿದ್ದರಾಮಯ್ಯರ ಹಿಂದೆ ಬರೀ ಮುಸ್ಲಿಮರಲ್ಲ. ಎಲ್ಲ ವರ್ಗದ ಜನರಿದ್ದಾರೆ. ಅವರು ಎಲ್ಲ ವರ್ಗದ ಜನರನ್ನು ಸಮಾನ ದೃಷ್ಟಿಯಲ್ಲಿ ಇಟ್ಟುಕೊಂಡು ಮಾತನಾಡುತ್ತಾರೆ ಎಂದು ಗಣೀಹಾರ ಹೇಳಿದರು.

ಮೌಲ್ವಿ ವಿರುದ್ಧ ತನಿಖೆಯಾಗಲಿ:

ಬಸನಗೌಡ ಹೇಳಿರುವಂತೆ ಮೌಲ್ವಿ ತನ್ವೀರ್ ಪೀರಾ ಅವರು ಅಪರಾಧಿಯಾಗಿದ್ದರೆ ಇಷ್ಟು ದಿನವೇಕೆ ಸುಮ್ಮನೆ ಕುಳಿತಿದ್ದರು. 10 ವರ್ಷದಿಂದ ಇಲ್ಲದ ಆರೋಪ ಈಗೇಕೆ ಬಂತು. ಈ ಬಗ್ಗೆ ಸತ್ಯಾಸತ್ಯತೆ ಬಯಲಿಗೆ ಬರಲಿ. ಎಲ್ಲದಕ್ಕೂ ತನಿಖಾ ಸಂಸ್ಥೆಗಳನ್ನು ಬಳಸುವ ಬಿಜೆಪಿ ಈಗೇಕೆ ಸುಮ್ಮನೆ ಕುಳಿತಿದೆ. ಎಲ್ಲ ರೀತಿಯಿಂದಲೂ ತನಿಖೆಯಾಗಲಿ. ಆರೋಪ ಸತ್ಯಕ್ಕೆ ದೂರವಾಗಿದ್ದರೆ ಯತ್ನಾಳರ ಮೇಲೂ ಕ್ರಮವಾಗಲಿ ವಿಜಯಪುರದವರೇ ಆದ ಯತ್ನಾಳ್, ಇಲ್ಲಿನ ಮೌಲ್ವಿಯ ಕುರಿತು ಮಾತಾಡಲು ಇಷ್ಟೇಕೆ ತಡ ಮಾಡಿದರು. ಮೊದಲೇ ಹೇಳಬೇಕಿತ್ತು. ಕೇಂದ್ರ ಸರ್ಕಾರ ಇವರದೇ ಇದೆ. ಬೇಕಾದ ತನಿಖೆ ಮಾಡಿಸಲಿ. ಸದನದ ಹೊರಗೆ ಸಿದ್ದರಾಮಯ್ಯ ಮಾತಾಡಿದ್ದಾರೆ. ಸದನದ ಒಳಗೆ ಏನು ಮಾತನಾಡಬೇಕೆನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲ ಎಂದರು.

click me!