
ಮೈಸೂರು (ಸೆ.18): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಲಿತರನ್ನು ಒಕ್ಕಲೆಬ್ಬಿಸಿ ಮನೆ ನಿರ್ಮಿಸಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಒತ್ತುವರಿಯಾಗಿದೆ ಎನ್ನಲಾದ ನಿವೇಶನದ ಎದುರೇ ದಾಖಲೆ ಬಿಡುಗಡೆಗಳಿಸಿ ತಿರುಗೇಟು ನೀಡಿದರು. ವಿಜಯನಗರದ ಮನೆ ಬಳಿಗೆ ತೆರಳಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಸಿದ್ದರಾಮಯ್ಯ ಅವರು ನಿರ್ಮಿಸಿದ್ದ ಮನೆಯ ಎದುರೇ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆಗೊಳಿಸಿದರು.
ಸಿದ್ದರಾಮಯ್ಯ ಸಾಲ ಮಾಡಿ ಮನೆ ಕಟ್ಟಿದ್ದರು. ಮಾಡಿದ ಸಾಲ ತೀರಿಸಲು ಮನೆ ಮಾರಿದ್ದರು. 25 ವರ್ಷದ ಹಿಂದಿನ ವಿಚಾರವನ್ನು ಈಗ ಯಾಕೆ ವಿವಾದ ಮಾಡುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದರು. 1950 ರಲ್ಲಿ ಸಾಕಮ್ಮ ಅವರ ತಂದೆ ಹೆಸರಲ್ಲಿ 1.20 ಎಕರೆ ಜಾಗ ಇತ್ತು. ಈ ಪೈಕಿ ಸಾಕಮ್ಮ ಅವರಿಗೆ ಸರ್ವೇ ನಂ 70/4ಎ ನಲ್ಲಿ 30 ಗುಂಟೆ ಜಮೀನು ಬಂತು. ಇದು ನೋಟಿಫೈ ಆಗಿರಲಿಲ್ಲ. ಈ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿ 1997 ರಲ್ಲಿ 120×80 ಅಳತೆಯ ಮನೆ ನಿರ್ಮಿಸಿದರು. ಆರ್ಟಿಐ ಕಾರ್ಯಕರ್ತ ಗಂಗರಾಜು ಎಂಡಿಎಗೆ ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಎಂಡಿಎ ದವರು 70/4ಎ ಬದಲು ನೋಟಿಫೈ ಆಗಿದ್ದ 70/4ಬಿ ಮಾಹಿತಿ ನೀಡಿದರು. ಆ ಮಾಹಿತಿಯ ಆಧಾರದ ಮೇಲೆ 2018 ರಲ್ಲಿ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ಸಲ್ಲಿಸಿದರು. ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ ನಡೆದು ಸಿದ್ದರಾಮಯ್ಯ ತಪ್ಪು ಇಲ್ಲ ಅಂತ ತೀರ್ಪು ಬಂತು. ಅದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 2019 ರಲ್ಲಿ ಹೈಕೋರ್ಟ್ ಕೂಡ ಪ್ರಕರಣವನ್ನು ರದ್ದು ಮಾಡಿದೆ. ಸುಪ್ರೀಂಕೋರ್ಟ್ ನಲ್ಲೂ ಪ್ರಕರಣ ಅಡ್ಮಿಟ್ ಆಗಿಲ್ಲ. ಇಷ್ಟೆಲ್ಲ ಮುಗಿದ ಮೇಲೂ ದಲಿತರ ಜಾಗವನ್ನು ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ಕಟ್ಟಿಕೊಂಡಿದ್ದಾರೆ ಅಂತ ಆರೋಪ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಸಿದ್ದರಾಮಯ್ಯನವರೇ ಕಾಂತರಾಜು ವರದಿ ಜಾರಿಗೆ ರಾಯಣ್ಣನ ಧೈರ್ಯವಿಲ್ಲವೇ: ಎಚ್.ವಿಶ್ವನಾಥ್
1998 ರಲ್ಲೇ ಸಿದ್ದರಾಮಯ್ಯ ತಮ್ಮ ಮನೆಯನ್ನು ಖೋಡೆ ಅವರಿಗೆ ಮಾರಾಟ ಮಾಡಿದ್ದಾರೆ. ಸಿದ್ದರಾಮಯ್ಯ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದರು. ಸಾಲ ಪಾವತಿ ಮಾಡುತ್ತಿಲ್ಲ ಅಂತ ಪೇಪರ್ ನೋಟಿಫಿಕೇಷನ್ ಬಂದ ಮೇಲೆ ಬೇಸರದಿಂದ ಮನೆ ಮಾರಾಟ ಮಾಡಿ ಸಾಲ ತೀರಿಸಿದರು. ಈಗ ಸಿದ್ದರಾಮಯ್ಯ ಹೆಸರಲ್ಲಿ ಮನೆ ಇಲ್ಲ. ಆರೋಪ ಮಾಡುವ ಮುನ್ನ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಇಲ್ಲವಾದರೆ ಕುಮಾರಸ್ವಾಮಿ ವಿರುದ್ಧ ನಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಅವರು ಎಚ್ಚರಿಸಿದರು. ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ಮಹೇಶ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.