ಮೂರೂ ಕಡೆ ಕಾಂಗ್ರೆಸ್‌ಗೇ ಜಯ: ಡಿ.ಕೆ. ಶಿವಕುಮಾರ್‌

By Kannadaprabha News  |  First Published Apr 15, 2021, 8:59 AM IST

ಬೆಲೆ ಏರಿಕೆ ಮಾಡಿ ಸರ್ಕಾರದಿಂದ ಸಂಕಷ್ಟದಲ್ಲಿರುವವರ ಸುಲಿಗೆ| ಈ ವೈಫಲ್ಯ ಬಿಚ್ಟಿಟ್ಟು ಎಲ್ಲೆಡೆ ಗೆಲುವು ಸಾಧಿಸುತ್ತೇವೆ| ನಮ್ಮಲ್ಲಿ ಯಾವ ಬಣವೂ ಇಲ್ಲ, ‘ಕಾಂಗ್ರೆಸ್‌ ಬಣ’ ಮಾತ್ರ| ‘ಕನ್ನಡಪ್ರಭ’ಕ್ಕೆ ಡಿ.ಕೆ. ಶಿವಕುಮಾರ್‌ ಸಂದರ್ಶನ| 
 


ಬೆಂಗಳೂರು(ಏ.15): ಡಿ.ಕೆ. ಶಿವಕುಮಾರ್‌ ಕೆಪಿಸಿಸಿಗೆ ಅಧ್ಯಕ್ಷರಾದ ಬಳಿಕ ಎದುರಾಗಿರುವ ಎರಡನೇ ಉಪ ಚುನಾವಣೆಯಿದು. ಮೊದಲ ಉಪ ಚುನಾವಣೆ ಸೋಲಿನ ಕಹಿ ಮರೆತು ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆಯ ಮೂರೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಟೊಂಕ ಕಟ್ಟಿನಿಂತಿದ್ದಾರೆ. ರಾಜ್ಯ ಕಂಡ ಅತಿ ಕೆಟ್ಟ ಸರ್ಕಾರಕ್ಕೆ ಜನರು ಉಪ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿರುವುದು ಉಪ ಚುನಾವಣೆ ಫಲಿತಾಂಶದಿಂದ ಜಗಜ್ಜಾಹೀರಾಗಲಿದೆ ಎಂಬ ವಿಶ್ವಾಸದಲ್ಲಿ ಶಿವಕುಮಾರ್‌ ಇದ್ದಾರೆ.

ಸೋಮವಾರ ಮಸ್ಕಿ ಕ್ಷೇತ್ರದ ಚುನಾವಣಾ ಪ್ರಚಾರದ ನಡುವೆ ‘ಕನ್ನಡಪ್ರಭಕ್ಕೆ’ ನೀಡಿದ ವಿಶೇಷ ಸಂದರ್ಶನದಲ್ಲಿ ಚುನಾವಣೆ ಸಿದ್ಧತೆ, ಪ್ರಚಾರ, ಫಲಿತಾಂಶ ಹಾಗೂ ಫಲಿತಾಂಶದ ಪರಿಣಾಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Tap to resize

Latest Videos

ಉಪ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ದೊರೆವ ಜನಾದೇಶವಾಗಲಿದೆಯೇ?

-ಹೌದು, ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಮೂಲಕ ರಾಜ್ಯದಲ್ಲಿರುವ ಜನವಿರೋಧಿ ಸರ್ಕಾರ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸಲಿದ್ದಾರೆ.

ಉಪ ಚುನಾವಣೆ : ಮಸ್ಕಿಯಲ್ಲಿ ಕಮಲ ಅರಳುವುದು ಖಚಿತ

ಯಾವ ವಿಶ್ವಾಸದಲ್ಲಿ ಈ ಮಾತು ಹೇಳುತ್ತಿದ್ದೀರಿ?

-ರಾಜ್ಯ ಸರ್ಕಾರ ಕೊರೋನಾ ನಿರ್ವಹಣೆ ಮಾಡುತ್ತಿರುವ ರೀತಿಗೆ ಜನರು ಆಕ್ರೋಶಗೊಂಡಿದ್ದಾರೆ. ಚುನಾವಣೆಗೆ ಮೊದಲು ಹಾಗೂ ಕೊರೋನಾ ವೇಳೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ವಿಶೇಷವಾಗಿ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರಿಂದ ಬೆಲೆ ಏರಿಕೆಯ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ.

ಹಾಗಾದರೆ, ಕೊರೋನಾ ನಿರ್ವಹಣೆ ವೈಫಲ್ಯ, ಬೆಲೆ ಏರಿಕೆ. ಇವರಡೇ ಚುನಾವಣೆ ವಿಷಯವೇ?

-ಬೆಲೆ ಏರಿಕೆ ಜನರ ಜೀವನವನ್ನೇ ನಾಶ ಮಾಡುತ್ತಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ, ಅಡುಗೆ ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ದರ ಏರಿಕೆಯಿಂದ ವಿಶೇಷವಾಗಿ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಹಣಕ್ಕಾಗಿ ಸ್ವಾಭಿಮಾನ ಹಾಗೂ ಜನಾದೇಶ ಮಾರಿಕೊಂಡ ಪ್ರತಾಪ್‌ಗೌಡ ಪಾಟೀಲ್‌ಗೆ ತಕ್ಕ ಪಾಠ ಕಲಿಸುವಂತೆ ಮನವಿ ಮಾಡುತ್ತಿದ್ದೇವೆ.

ಕಾಂಗ್ರೆಸ್‌ ಪ್ರತಿಪಕ್ಷವಾಗಿ ಸರ್ಕಾರದ ವೈಫಲ್ಯವನ್ನು ಜನತೆ ಮುಂದಿಡಲು ವಿಫಲವಾಗಿದೆ?

-ನಮ್ಮ ಹೋರಾಟವನ್ನು ನಾವು ಪ್ರಬಲವಾಗಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ದಿನಕ್ಕೊಂದು ಪ್ರಬಲ ಹೋರಾಟ ನಡೆಯುತ್ತಿದೆ. ಜಾತಿ ಹೋರಾಟಗಳು, ಕಾರ್ಮಿಕರ ಹೋರಾಟಗಳು, ಮುಷ್ಕರಗಳು ನಡೆಯುತ್ತಲೇ ಇವೆ. ಇವು ಯಾವೂ ಸಹ ರಾಜಕೀಯ ಪಕ್ಷಗಳು ಎತ್ತಿ ಕಟ್ಟಿಮಾಡಿಸುತ್ತಿರುವ ಹೋರಾಟವಲ್ಲ. ಜನರೇ ಸ್ವಯಂ ಪ್ರೇರಿತವಾಗಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ನಾವೂ ಸಹ ನಮ್ಮ ಹೋರಾಟ ಮಾಡುತ್ತಿದ್ದೇವೆ.

ಬೆಳಗಾವಿ ಉಪಕದನ: 'ಕಾಂಗ್ರೆಸ್‌ಗೆ ಸೋಲು ಖಚಿತ, ಸುರ್ಜೇವಾಲಗೆ ನಿರಾಸೆಯಾಗೋದು ಗ್ಯಾರೆಂಟಿ'

ಸಿದ್ದರಾಮಯ್ಯ ಬೆಂಬಲಿಗರು ಈಗಲೂ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎನ್ನುತ್ತಾರೆ. ನೀವು ಪೈಪೋಟಿಯಲ್ಲಿ ನಾನಿಲ್ಲ ಎನ್ನುತ್ತಿರಿ. ಏಕೆ?

-ಕಾಂಗ್ರೆಸ್‌ ಪಕ್ಷದಲ್ಲಿ ಯಾವ ಬಣವೂ ಇಲ್ಲ. ಯಾರ ನಡುವೆಯೂ ಪೈಪೋಟಿ ಇಲ್ಲ. ನಮ್ಮಲ್ಲಿ ಇರುವುದು ಒಂದೇ ಬಣ ಕಾಂಗ್ರೆಸ್‌ ಬಣ. ನಾವೆಲ್ಲರೂ ಒಟ್ಟಾಗಿ ಹೋಗುತ್ತಿದ್ದೇವೆ. ರಾಜ್ಯದ ಜನತೆ ನಮ್ಮ ಪಕ್ಷದ ಜೊತೆ ನಿಲ್ಲುತ್ತಾರೆ ಅಷ್ಟೇ.

ಬೆಳಗಾವಿ ಕ್ಷೇತ್ರದ ಕಣ ಹೇಗಿದೆ. ಲಖನ್‌ ಜಾರಕಿಹೊಳಿ ಅವರು ಬಿಜೆಪಿ ಬೆಂಬಲಿಸುತ್ತಿರುವುದು ಕಾಂಗ್ರೆಸ್‌ಗೆ ನಷ್ಟವಲ್ಲವೇ?

- ಬೆಳಗಾವಿ ಕ್ಷೇತ್ರ ಕೂಲ್‌ ಆಗಿದೆ. ಉಳಿದ ಎರಡು ವಿಧಾನಸಭಾ ಕ್ಷೇತ್ರಗಳಷ್ಟುಬಿಸಿ ಇಲ್ಲ. ಮತದಾರರು ಗೌಪ್ಯತೆ ಕಾಪಾಡುತ್ತಿದ್ದು, ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ. ಲಖನ್‌ ಜಾರಕಿಹೊಳಿ ಎಂದೂ ನಮ್ಮ ಕಾರ್ಯಕರ್ತರೇ ಅಲ್ಲ. ಅವರಿಗೆ ಒಮ್ಮೆ ಟಿಕೆಟ್‌ ನೀಡಿದ್ದೆವು ಅಷ್ಟೇ.

ಮಸ್ಕಿಯ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು ಎನ್ನುತ್ತಿದ್ದೀರಿ ಏಕೆ?

- ಚುನಾವಣಾ ಪ್ರಚಾರ ಸಭೆಗೆ ಬರಲು ಹಣ ಹಂಚಿದ್ದನ್ನು ನೀವೂ ನೋಡಿದ್ದೀರಿ. ಮಾಜಿ ಶಾಸಕ ನಂದೀಶ್‌ ರೆಡ್ಡಿ ಸಾವಿರ ರು. ನೋಟುಗಳನ್ನು ಹಂಚಿದ್ದಾರೆ. ಬರೀ ಹಣ ಹಂಚಿಕೆ ಹಾಗೂ ಅಧಿಕಾರದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಜನರು ಅಮಾಯಕರಲ್ಲ.

ಬಸವ ಕಲ್ಯಾಣದಲ್ಲಿ ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ಗೆ ಹಿನ್ನಡೆ ಅಲ್ಲವೇ?

- ಅದು ಜೆಡಿಎಸ್‌ ರಾಜಕೀಯ ತಂತ್ರ. ಅಲ್ಪಸಂಖ್ಯಾತರು ಪ್ರಜ್ಞಾವಂತರಾಗಿದ್ದಾರೆ. ಅವರಿಗೆ ಎಲ್ಲಾ ವಿಚಾರವೂ ಗೊತ್ತಿದೆ. ಹೀಗಾಗಿ ಅವರೇ ಸೂಕ್ತ ತೀರ್ಮಾನ ಮಾಡುತ್ತಾರೆ.

ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ಕ್ರಮಗಳು ತೃಪ್ತಿ ತಂದಿದೆಯೇ?

- ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರಿಯಾಗಿ ನಿಯಂತ್ರಣ ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಲಸಿಕೆ ಹಾಕುತ್ತಿದ್ದಾರೆ. ಲಸಿಕೆ ಹಾಕಿದವರಿಗೇ ಕೊರೋನಾ ಬರುತ್ತಿದೆ. ದಿನದಿಂದ ದಿನಕ್ಕೆ ಕೊರೋನಾ ಹಾಗೂ ಸಾವು ಹೆಚ್ಚಾಗುತ್ತಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ.

ಸಾರಿಗೆ ನೌಕರರ ಮುಷ್ಕರ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆಯೇ?

- ಇಂತಹ ನಿರ್ದಯಿ ಸರ್ಕಾರವನ್ನು ನಾನು ಹಿಂದೆ ನೋಡಿಲ್ಲ. ಕನಿಷ್ಠ ಸೌಜನ್ಯಕ್ಕೂ ನೌಕರರನ್ನು ಕರೆದು ಮಾತನಾಡಿಲ್ಲ. ನೌಕರರನ್ನು ನಿರ್ಲಕ್ಷ್ಯಿಸಿ ನಿಗಮಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆಯೇ.

ಅಂತಿಮವಾಗಿ ಉಪಚುನಾವಣೆಯಲ್ಲಿ ಜನರ ತೀರ್ಪು ಏನಾಗಲಿದೆ ಮತ್ತು ಏಕೆ?

- ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸ್ಪಷ್ಟಬಹುಮತದಿಂದ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿ ಹಾಗೂ ಆಡಳಿತವೇ ಇದಕ್ಕೆ ಕಾರಣ.
 

click me!