
ಮದ್ದೂರು (ಫೆ.12): ‘ಮದ್ದೂರಿನಲ್ಲಿ ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿಯಾಗಲಿ. ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಮತ ನೀಡಿ. ನಿಮ್ಮ ಮಗನ ಆಡಳಿತವನ್ನು ನೀವು ನೋಡಬೇಕು. ಅದಕ್ಕಾಗಿ ನಿಮ್ಮ ಮನೆಯ ಮಗನಿಗೆ ಬೆಂಬಲ ನೀಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಆ ಮೂಲಕ ಮದ್ದೂರು ಜನತೆಯ ಮುಂದೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು. ಶನಿವಾರ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಅದು ಕೇವಲ ಕನಸು. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ.
ರಾಜ್ಯ, ರಾಷ್ಟ್ರದ ಹಿತ ಕಾಪಾಡಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಸಮುದ್ರ ಪಾಲಾಗುವ ಕಾವೇರಿ ನೀರನ್ನು ಉಳಿಸಲು ಮೇಕೆದಾಟು ಯೋಜನೆ ಜಾರಿಗೊಳಿಸುವ ಅವಶ್ಯಕತೆ ಇದೆ. ಈ ಬಗ್ಗೆ ತಾಂತ್ರಿಕವಾಗಿ ಚರ್ಚೆ ಮಾಡಿದ್ದೇನೆ. ಈ ಯೋಜನೆ ಪೂರ್ಣ ಮಾಡುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಮೇಲಿದೆ ಎಂದರು. ಇದಕ್ಕೂ ಮೊದಲು, ಮದ್ದೂರಿಗೆ ಬಂದ ಡಿಕೆಶಿಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಹಾರ ಹಾಕಿ, ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ಪಟ್ಟಣದ ಹಳೇ ಎಂ.ಸಿ.ರಸ್ತೆ ಮೂಲಕ ತಾಲೂಕು ಕ್ರೀಡಾಂಗಣದವರೆಗೆ ಬಸ್ ಮೂಲಕ ರೋಡ್ ಶೋ ನಡೆಸಲಾಯಿತು.
ಬಿಜೆಪಿ, ಜೆಡಿಎಸ್ ಕಾಲದ ಸಾಕ್ಷಿ ಗುಡ್ಡೆಗಳೇನು: ಡಿಕೆಶಿ ಪ್ರಶ್ನೆ
ಕಳೆದ ಲೋಕಸಭಾ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್ ಅವರಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು ಎಂಬ ಸುಮಲತಾ ಆರೋಪಕ್ಕೆ ತಿರುಗೇಟು ನೀಡಿ, ನಾನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿಗೆ ಬೆಂಬಲವಾಗಿ ನಿಂತು ಸಚಿವನಾಗಿದ್ದೆ. ಮಂಡ್ಯದಲ್ಲಿ ಏಳು ಮಂದಿ ಜೆಡಿಎಸ್ ಶಾಸಕರಿದ್ದರೂ, ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಆಶೀರ್ವಾದ ಮಾಡಿದ್ದೆ. ಹೀಗಾಗಿ, ಕುಮಾರಸ್ವಾಮಿಗೆ ದ್ರೋಹ ಮಾಡಲು ಇಷ್ಟವಿಲ್ಲದೆ ಚುನಾವಣೆಯಲ್ಲಿ ಬೇರೆ ಕ್ಷೇತ್ರದಲ್ಲಿ ನಿಲ್ಲುವಂತೆ ಸುಮಲತಾ ಅವರಿಗೆ ತಿಳಿಸಿದ್ದು ನಿಜ ಎಂದು ಒಪ್ಪಿಕೊಂಡರು.
ಇನ್ನು ಗಂಡೇ ಆಗಿಲ್ಲ ಆಗಲೇ ನಿಂತುಕೊಳ್ಳಲು ಬಂದಿದ್ದಾನೆ: ಸಮಾವೇಶದಲ್ಲಿ ಮಾತನಾಡುವ ವೇಳೆ ಹಿಂಬದಿ ನಿಲ್ಲಲು ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಗುರುಚರಣ್ ಮುಂದಾದಾಗ, ಇನ್ನೂ ಗಂಡೇ ಆಗಿಲ್ಲ. ಆಗಲೇ ನಿಲ್ಲಲು ಬಂದಿದ್ದೀಯಾ. ಈಗ ನೀನಿನ್ನೂ ಅಭ್ಯರ್ಥಿ ಆಗಿಲ್ಲ, ಹೋಗಿ ಕುಳಿತುಕೋ ಎಂದರು. ನಂತರ ಜನರತ್ತ ತಿರುಗಿ, ಇನ್ನು ಅಭ್ಯರ್ಥಿಯೇ ಘೋಷಣೆಯಾಗಿಲ್ಲ. ಆಗಲೇ ನಿಲ್ಲಲು ಬಂದಿದ್ದಾನೆ ಎನ್ನುವ ಮೂಲಕ ಮದ್ದೂರು ಅಭ್ಯರ್ಥಿ ಬದಲಾವಣೆ ಬಗ್ಗೆ ಸುಳಿವು ನೀಡಿದರು.
ಗುಟ್ಟು ಬಿಡಲಿಲ್ಲ: ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಿಸಿಸುವಂತೆ ವೇದಿಕೆ ಮೇಲೆ ಆಗಮಿಸಿದ ಕಾರ್ಯಕರ್ತನೊಬ್ಬ ಡಿಕೆಶಿಗೆ ಮನವಿ ಮಾಡಿದಾಗ, ನಿಮ್ಮ ಆಟ ಬಿಡಿ, ಕಾಂಗ್ರೆಸ್ ಅಭ್ಯರ್ಥಿ ನಾನೇ. ಹಸ್ತ ಅಭ್ಯರ್ಥಿ ಎಂದು ಕೆಲಸ ಮಾಡಿ. ಸೀಟನ್ನು ನಾವು ಯಾರಿಗೂ ಮಾರಿಕೊಳ್ಳಲ್ಲ. ನೀವು ಕೆಲಸ ಮಾಡಿ ಎಂದು ಹೇಳುವುದರೊಂದಿಗೆ ಅಭ್ಯರ್ಥಿ ವಿಷಯವಾಗಿ ಗೊಂದಲಕ್ಕೆ ತೆರೆ ಎಳೆಯಲೇ ಇಲ್ಲ. ನಾನೇ ಅಭ್ಯರ್ಥಿ ಎನ್ನುವ ಮೂಲಕ ಮತ್ತೆ ಗೊಂದಲ ಮೂಡಿಸಿದರು.
ಬಿಜೆಪಿ, ಜೆಡಿಎಸ್ ಷಡ್ಯಂತ್ರ ನಡೆಯೋಲ್ಲ: ಪಿ.ಎಂ.ನರೇಂದ್ರಸ್ವಾಮಿ
ಈಗಾಗಲೇ ಡಿ.ಕೆ.ಸುರೇಶ್ ಲೋಕಸಭಾ ಸದಸ್ಯರಾಗಿರುವುದರಿಂದ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಸುವ ಅವಕಾಶಗಳಿಲ್ಲ. ನನ್ನನ್ನು ಹೊರತುಪಡಿಸಿ ನಮ್ಮ ಕುಟುಂಬದ ಯಾರೂ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದಿಲ್ಲ.
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.