ಡಬಲ್‌ ಇಂಜಿನ್‌ ಸರ್ಕಾರ ನುಡಿದಂತೆ ನಡೆದಿಲ್ಲ: ಡಿ.ಕೆ.ಶಿವಕುಮಾರ್‌

By Govindaraj SFirst Published Nov 25, 2022, 1:30 AM IST
Highlights

ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಹಲವು ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಈ ಡಬಲ್‌ ಇಂಜಿನ್‌ ಸರ್ಕಾರ ನುಡಿದಂತೆ ನಡೆದಿದೆಯಾ? ಪ್ರತಿ ಬಾರಿ ಕೋಮುಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ, ಬಸವಣ್ಣ, ಕನಕದಾಸ, ಕುವೆಂಪು, ಸಂತ ಶಿಶುನಾಳರ ಈ ನಾಡಿನಲ್ಲಿ ನೆಮ್ಮದಿಯಿಂದ ಜನರು ಬದುಕಲು ಬಿಡುತ್ತಿಲ್ಲ. 

ಕುಮಟಾ (ನ.25): ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಹಲವು ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಈ ಡಬಲ್‌ ಇಂಜಿನ್‌ ಸರ್ಕಾರ ನುಡಿದಂತೆ ನಡೆದಿದೆಯಾ? ಪ್ರತಿ ಬಾರಿ ಕೋಮುಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ, ಬಸವಣ್ಣ, ಕನಕದಾಸ, ಕುವೆಂಪು, ಸಂತ ಶಿಶುನಾಳರ ಈ ನಾಡಿನಲ್ಲಿ ನೆಮ್ಮದಿಯಿಂದ ಜನರು ಬದುಕಲು ಬಿಡುತ್ತಿಲ್ಲ. ಜನ ಉದ್ಯೋಗಕ್ಕಾಗಿ ವಲಸೆ ಹೋಗುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ಐದು ವರ್ಷಗಳ ಹಿಂದೆ ನಡೆದ ಪರೇಶ್‌ ಮೇಸ್ತ ಸಾವಿನ ಪ್ರಕರಣದ ಸತ್ಯಾಸತ್ಯತೆ ತಿಳಿಸುವ ನಿಟ್ಟಿನಲ್ಲಿ ಇಲ್ಲಿಯ ಮಣಕಿ ಮಹಾತ್ಮಾ ಗಾಂಧಿ ಮೈದಾನದಲ್ಲಿ ಗುರುವಾರ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ರಾಜಕಾರಣ ನಿಂತ ನೀರಲ್ಲ, ಬದಲಾವಣೆ ಆಗುತ್ತಿರುತ್ತದೆ. ರಾಜ್ಯದಲ್ಲಿ ಜನರು ಬದಲಾವಣೆ ಬಯಸಿದ್ದು, ವಿದ್ಯಾವಂತರೇ ಇಂದು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಿದ್ದಾರೆ. ಇದು ಬಿಜೆಪಿಯ ಕೊನೆಯ ಆಟ. ಮುಂದಿನ ಬಾರಿ ಮತ್ತೆ ಅದು ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ 140-150 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಭವಿಷ್ಯ ನುಡಿದರು.

Uttara Kannada: ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್

ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಿಲ್ಲ: ಡಬಲ್‌ ಇಂಜಿನ್‌ ಸರ್ಕಾರ ನುಡಿದಂತೆ ನಡೆದಿದೆಯಾ? ಬಿಜೆಪಿಯ ಪ್ರಣಾಳಿಕೆಯಲ್ಲಿ ಏನಿತ್ತು? ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಆದಾಯ ದ್ವಿಗುಣಗೊಳಿಸಿಲ್ಲ. ಈ ಭಾಗದ ಬಹುದಿನಗಳ ಬೇಡಿಕೆಯಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಲು ಅದಕ್ಕೆ ಸಾಧ್ಯವಾಗಿಲ್ಲ. ಕೋವಿಡ್‌ ಪೀಡಿತರ ಆಸ್ಪತ್ರೆ ವೆಚ್ಚ ಭರಿಸಿಲ್ಲ. ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ಆಕ್ಸಿಜನ್‌ ದುರಂತದಲ್ಲಿ ಸತ್ತವರಿಗೆ ಸರ್ಟಿಫಿಕೇಟ್‌ ಕೂಡ ಕೊಟ್ಟಿಲ್ಲ. ಅಷ್ಟೇಕೆ, ಬಾಡಿಗೆ ವಾಹನ ಚಾಲಕರಿಗೆ ಪ್ಯಾಕೇಜ್‌ ಪರಿಹಾರ ಕೂಡ ಕೊಟ್ಟಿಲ್ಲ ಎಂದು ದೂರಿದರು.

ಬಿಜೆಪಿ ಹೇಗಾದರೂ ಮಾಡಿ ಚುನಾವಣೆ ಗೆಲ್ಲುವ ಯತ್ನ ಮಾಡುತ್ತಿದೆ. ಓಟರ್‌ ಲಿಸ್ಟ್‌ನಿಂದ 27 ಲಕ್ಷ ಜನರನ್ನು ತೆಗೆದು ಹಾಕಿದೆ. ತಮಗೆ ಬೇಕಾದವರನ್ನು ಮಾತ್ರ ಇಟ್ಟು ಉಳಿದವರ ಹೆಸರನ್ನು ಡಿಲೀಟ್‌ ಮಾಡಿದೆ. ಇ.ವಿ. ಯಂತ್ರಗಳನ್ನೂ ಬದಲಿಸುವ ಕೆಲಸ ಮಾಡಲಾಗುತ್ತಿದೆ. ದೆಹಲಿಗೆ ಹೋಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ಕೊಟ್ಟಿದ್ದೇವೆ. ಅಲ್ಲಿಂದಲೇ ನೇರವಾಗಿ ಕುಮಟಾಕ್ಕೆ ಬಂದಿದ್ದೇನೆ ಎಂದರು. ಪರೇಶ ಮೇಸ್ತ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಂಡರು. ಜನರನ್ನು ತಪ್ಪು ದಾರಿಗೆ ಎಳೆದು ಮತ ಪಡೆದುಕೊಂಡರು. ಬಿಜೆಪಿಯವರು ಈ ಪ್ರಕರಣದ ಫಲಾನುಭವಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಏನಾಗಿದೆ ಎನ್ನುವುದನ್ನು ಈ ಜಿಲ್ಲೆಯ ಜನ ಚೆನ್ನಾಗಿ ತಿಳಿದಿದ್ದಾರೆ. ಹೀಗಾಗಿ, ಮತ್ತೆ ಬಿಜೆಪಿ ಕೈಗೆ ಅಧಿಕಾರ ಕೊಡಬೇಡಿ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಗೈರು: ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಗುರುವಾರ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜನಜಾಗೃತಿ ಸಮಾವೇಶಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗೈರಾಗಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪ್ರಯಾಣ ರದ್ದಾಯಿತು. ಹೀಗಾಗಿ, ಅವರು ಸಮಾವೇಶಕ್ಕೆ ಗೈರಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಪಕ್ಷ ವಿಷಯಗಳನ್ನು ತಿರುಚಿ ಜನರ ದಿಕ್ಕು ತಪ್ಪಿಸುತ್ತಿದೆ: ಬಿ.ಎಸ್‌.ಯಡಿಯೂರಪ್ಪ

28ರಿಂದ ಕಾಂಗ್ರೆಸ್‌ ಮತ್ತೆ ಪಾದಯಾತ್ರೆ: ಕೆಪಿಸಿಸಿಯ ವಿವಿಧ ಮುಂಚೂಣಿ ಘಟಕಗಳು ಈ ತಿಂಗಳ 28ರಿಂದ ಐದು ದಿನಗಳ ಕಾಲ ಎಂಟು ಜಿಲ್ಲೆಗಳಲ್ಲಿ ತಲಾ 10 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿವೆ. ಚಿತ್ರದುರ್ಗದಲ್ಲಿ ಯಾತ್ರೆ ಆರಂಭವಾಗಿ, ಡಿ.2ರಂದು ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ. ‘ಭಾರತ್‌ ಜೋಡೋ’ ಯಾತ್ರೆಗೆ ಪೂರಕವಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.

click me!