ಸುಳ್ಳು ಭರವಸೆ, ಭ್ರಷ್ಟಾಚಾರ ಬಿಜೆಪಿ ಸಾಧನೆ: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Feb 7, 2023, 2:00 AM IST
Highlights

ಹಿಂದುಗಳು ಮುಂದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಎಲ್ಲಾ ಸಮುದಾಯದವರು ಒಂದು ಎಂದು ಕಾಂಗ್ರೆಸ್‌ ಹೇಳುತ್ತಿದೆ. ಬೆಲೆ ಏರಿಕೆ, ಸುಳ್ಳು ಭರವಸೆ, ಭ್ರಷ್ಟಾಚಾರವೇ ಬಿಜೆಪಿ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಪಾದಿಸಿದರು. 

ಹಿರಿಯೂರು (ಫೆ.07): ಹಿಂದುಗಳು ಮುಂದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಎಲ್ಲಾ ಸಮುದಾಯದವರು ಒಂದು ಎಂದು ಕಾಂಗ್ರೆಸ್‌ ಹೇಳುತ್ತಿದೆ. ಬೆಲೆ ಏರಿಕೆ, ಸುಳ್ಳು ಭರವಸೆ, ಭ್ರಷ್ಟಾಚಾರವೇ ಬಿಜೆಪಿ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಪಾದಿಸಿದರು. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಸೋಮವಾರ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಬರೀ ಮೂಗಿಗೆ ತುಪ್ಪ ಸವರುತ್ತಲೇ ಬಂದ ಬಿಜೆಪಿ ಕೊನೆಗೂ ಅವರನ್ನು ಮಂತ್ರಿ ಮಾಡಲಿಲ್ಲ. ಬಿಜೆಪಿಗೆ ಯಾದವ ಸಮಾಜದ ಮೇಲೆ ನಂಬಿಕೆಯಿಲ್ಲ. 

ಆದರೆ, ಕಾಂಗ್ರೆಸ್‌ ಆ ಸಮುದಾಯದ ನಾಗರಾಜ, ಜಯಮ್ಮ ಬಾಲರಾಜ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಅಧಿಕಾರ ನೀಡಿತು. ಕಾಂಗ್ರೆಸ್‌ ಎಲ್ಲಾ ವರ್ಗದ ಬಗ್ಗೆ ಚಿಂತಿಸುತ್ತದೆ ಎಂದರು. ಬರೀ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ಹಾಕಿದರಾ? ಕಪ್ಪು ಹಣ ವಾಪಸ್‌ ತಂದರಾ? ಯಾವುದೂ ಇಲ್ಲ. ನರೇಗಾ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಹೀಗೆ ಎಲ್ಲದರಲ್ಲೂ ಅನುದಾನ ಕಡಿತಗೊಳಿಸಿದ್ದಾರೆ. ಮಕ್ಕಳ ಸ್ಕಾಲರ್‌ಶಿಫ್‌, ಸಮವಸ್ತ್ರ, ಶೂ ಎಲ್ಲದರಲ್ಲೂ ವಂಚಿಸಿದ್ದಾರೆ. ಒಂದೂವರೆ ಲಕ್ಷ ಕೋಟಿಯಷ್ಟುಹಣದ ಭ್ರಷ್ಟಾಚಾರ ನಡೆದಿದೆ. ಅವರ ಪಕ್ಷದ ಶಾಸಕರೇ ಆದ ಗೂಳಿಹಟ್ಟಿಶೇಖರ್‌ ಭ್ರಷ್ಟಾಚಾರದ ಆಪಾದನೆ ಮಾಡಿದ್ದಾರೆ. ಕಂಟ್ರಾಕ್ಟರ್‌ ಸಂಘದ ಆರೋಪಗಳನ್ನು ನೀವೇ ನೋಡಿದ್ದೀರಿ. ಇದೊಂದು ಭ್ರಷ್ಟಸರ್ಕಾರ ಎಂದರು.

ಒಂದು ಪೋಡಿಗೆ 40 ಸಾವಿರ ಲಂಚ ಕೊಡಬೇಕಿದೆ: ಡಿ.ಕೆ.ಶಿವಕುಮಾರ್‌ ಕಿಡಿ

ಕುಮಾರಸ್ವಾಮಿ ಅಧಿಕಾರಕ್ಕೆ ಬರುವುದಿಲ್ಲ: ಕುಮಾರಸ್ವಾಮಿಯವರು ಅಧಿಕಾರಕ್ಕೆ ಬರುವುದಿಲ್ಲ. ಕುಮಾರಸ್ವಾಮಿಯವರ ಭರವಸೆಗಳ ಬಗ್ಗೆ ಯೋಚಿಸಬೇಡಿ. ಅಧಿಕಾರ ಸಿಗದಿದ್ದರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದಾರೆ. ಆದ್ದರಿಂದ ದಳದ ಕಾರ್ಯಕರ್ತರು ತಡ ಮಾಡದೇ ಬಂದು ಕಾಂಗ್ರೆಸ್‌ ಸೇರಿಕೊಳ್ಳಿ ಎಂದರು. ಈ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಯಾವುದೇ ಗೊಂದಲ ಇಲ್ಲ. ಗಂಡು ರೆಡಿ ಇದೆ. ಪಕ್ಷದ ಟೋಪಿ ಇಟ್ಟು ಬಿಡುತ್ತೇವೆ. ಅವರೇ ಅಭ್ಯರ್ಥಿ. ಜನರ ಅಭಿಪ್ರಾಯ, ತಾಲೂಕು ಮತ್ತು ಜಿಲ್ಲಾ ಸಮಿತಿಗಳ ಅಭಿಪ್ರಾಯ ಆಧರಿಸಿ ಟಿಕೆಟ್‌ ನೀಡುತ್ತೇವೆ. ಈ ಬಾರಿ ಪಕ್ಷ ಗೆಲ್ಲಿಸಿ ಭ್ರಷ್ಟ ಬಿಜೆಪಿ ಪಕ್ಷದ ಆಡಳಿತ ಕೊನೆಗಾಣಿಸಿ ಎಂದು ಹೇಳಿದರು.

ಗೂಳಿಹಟ್ಟಿ ಆರೋಪದ ಬಗ್ಗೆ ತನಿಖೆ ಯಾಕಿಲ್ಲ?: ಪರಿಶಿಷ್ಟಜಾತಿ ಮೀಸಲಾತಿ ಕ್ಷೇತ್ರ ಚಿತ್ರದುರ್ಗದಿಂದ ಲೋಕಸಭೆಗೆ ಆಯ್ಕೆಯಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪರಿಶಿಷ್ಟಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಯೋನ್ಮುಖರಾಗದೇ ನಿರ್ಲಕ್ಷ್ಯ ತಾಳಿದ್ದಲ್ಲದೆ, ಲೋಕಸಭೆಯಲ್ಲೂ ಸಹ ಮೀಸಲಾತಿಯ ಬಗ್ಗೆ ಚರ್ಚಿಸಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು. ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ 4500 ಕೋಟಿ ಟೆಂಡರ್‌ ಅಕ್ರಮವಾಗಿದೆ ಎಂದು ಸರ್ಕಾರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರೂ ಸಿಎಂ ತನಿಖೆಗೆ ಆದೇಶಿಸದ ಮರ್ಮವೇನು? ರಾಜ್ಯದಲ್ಲಿ ಬಡವರ ಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ ಸರ್ಕಾರವೆಂದರೆ ಅದು ಕಾಂಗ್ರೆಸ್‌ ಮಾತ್ರ. ಜನತೆಗೆ ನಿರಂತರವಾಗಿ ಸೌಲಭ್ಯಗಳನ್ನು ನೀಡಿ ನೆರವಾಗುವ ಕಾಂಗ್ರೆಸ್‌ ಪಕ್ಷಕ್ಕೆ ಜನ ಈ ಬಾರಿ ಆಶೀರ್ವಾದಿಸಬೇಕು. 

ಎಲ್ಲರೂ ಒಗ್ಗಟಾಗಿದ್ದೇವೆ, ಮುನಿಯಪ್ಪ, ಪರಮೇಶ್ವರ್‌ಗೆ ಮುನಿಸಿಲ್ಲ: ಡಿ.ಕೆ.ಶಿವಕುಮಾರ್‌

ಭಾರತ್‌ ಜೋಡೋ ಯಾತ್ರೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಅತಿಹೆಚ್ಚಿನ ಸಂಖ್ಯೆಯ ಜನರು ಸೇರಿ ಈಯಾತ್ರೆ ಯಶಸ್ವಿಗೊಳಿಸಿದ್ದು, ಜಿಲ್ಲೆಯ ಜನತೆಗೆ ಕೆಪಿಸಿಸಿ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಭ್ರಷ್ಟಾಚಾರದ ಕೂಪವಾಗಿರುವ ಬಿಜೆಪಿ ಸರ್ಕಾರದ ವಿರುದ್ದ ಶೇ.40ರಷ್ಟು ಆರೋಪವನ್ನು ರಾಜ್ಯ ಗುತ್ತಿಗೆದಾರರ ಸಂಖ್ಯೆ ಆರೋಪಿಸಿದೆ. ಅದಕ್ಕೆ ಕೆಪಿಸಿಸಿ ಧ್ವನಿಗೂಡಿಸಿದೆ ಅಧಿಕಾರಕ್ಕೆ ಬಂದರೆ ಬಿಜೆಪಿಯ ಟೆಂಡರ್‌ ರದ್ದುಪಡಿಸಿ ತನಿಖೆ ನಡೆಸುವುದಾಗಿ ತಿಳಿಸಿದರು. 2023ರಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಪಕ್ಷದ ಅಧಿಕಾರಕ್ಕೆ ಬಂದಕೂಡಲೇ 10 ಕೆ.ಜಿ. ಉಚಿತ ಅಕ್ಕಿ ನೀಡುವುದಲ್ಲದೆ, ನರೇಗಾ ಕಾಮಗಾರಿಗೆ ಪೂರ್ಣಪ್ರಮಾಣದಲ್ಲಿ ಅನುದಾನ ನೀಡುವುದು ಎಂದರು.

click me!