
ಬೆಂಗಳೂರು/ಮೈಸೂರು(ಮಾ.29): ನಾವು ಮೂರು ತಿಂಗಳು ಮೊದಲೇ ಚುನಾವಣೆಗೆ ರೆಡಿ ಇದ್ದೇವೆ, ಅವರು ಹೇಗಾದರೂ ಮಾಡಿಕೊಳ್ಳಲಿ, ಇವತ್ತಿನಿಂದ ಸರ್ಕಾರದ ಕೊನೆಯ ಕ್ಷಣ ಆರಂಭವಾಗಿದೆ. ಬಿಜೆಪಿಯವರು 60-65 ಸೀಟಿಗೆ ಬಂದು ನಿಲ್ತಾರೆ. ನಾವು ನಿಚ್ಚಳವಾದ ಬಹುಮತ ಪಡೆತ್ತೇವೆ. ಎಷ್ಟು ಬೇಗ ಚುನಾವಣೆ ಆಗತ್ತೆ ಅಷ್ಟು ಕಾಂಗ್ರೆಸ್‌ಗೆ ಒಳ್ಳೆದು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ವಿಧಾನಸಭಾ ಚುನಾವಣೆ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರ ಅಧಿಕಾರವನ್ನು ಮಿಷನರಿಯನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬೇಕೋ ಅಷ್ಟು ಮಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಇಲ್ಲ. ಕೋರ್ಟ್‌ಗೆ ಹೋದರೆ ಯಾವುದೂ ನಿಲ್ಲುವುದಿಲ್ಲ. ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡ್ತೇವೆ. ಮನೆ ಆಸ್ತಿನ ಹಂಚಿಕೊಂಡಂಗೆ ಇವರು ಕೊನೆ ಕ್ಷಣದಲ್ಲಿ ಹಂಚಿಕೊಳ್ಳಲು ಹೊರಟಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.
'ನಾನು ನಿಮ್ಮ ಮಗ, ರೈತನ ಮಗ, ನನಗೊಂದು ಅವಕಾಶ ಕೊಡಿ', ಒಕ್ಕಲಿಗ ಪ್ಲೇ ಕಾರ್ಡ್ ಬಳಸಿದ ಡಿಕೆಶಿ
ಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ. ಅವರಿಗೆ ಬಹುಮತ ಬಂದಿತ್ತಾ. ಬಿಜೆಪಿಗೆ ಹೋಗಿದ್ದು ನಮ್ಮ ಶಾಸಕರು ತಾನೇ, ಬಿಜೆಪಿಯಿಂದ ಅವರಾಗೆ ಬರುತ್ತಿದ್ದಾರೆ. ನಮಗೆ ಟಿಕೆಟ್ ಸಹ ನೀಡದಷ್ಟು ರಶ್ ಇದೆ. ಸಿಎಂ ಯಾವ ಪಕ್ಷದಲ್ಲಿ ಇದ್ದವರು, ಈಗ ಯಾವ ಪಕ್ಷಕ್ಕೆ ಬಂದು ಸಿಎಂ ಆಗಿದ್ದಾರೆ. ಸಾಕಷ್ಟು ಜನರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನಾನು ಅವರ ಹೆಸರು ಹೇಳಲು ರೆಡಿ ಇಲ್ಲ. ಅವರಿಗೆ ನಾನು ತೊಂದರೆ ಮಾಡಲ್ಲ ಹೇಳುವ ಮೂಲಕ ಸಿಎಂ ಬೊಮ್ಮಾಯಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸದಾಶಿವ ವರದಿಯಲ್ಲಿ ಏನಿದೆ ತೆಗೆದು ನೋಡಿ ಅದನ್ನು ನಾವೇ ಅದನ್ನು ಮಾಡಿದ್ದು, ಎಲ್ಲಿ ಭಾಗ ಮಾಡಿದ್ದಾರೆ ಸಮುದಾಯಗಳನ್ನು ವರದಿಯಲ್ಲಿ ತೋರಿಸಲಿ. ಕಾನೂನಿಗೆ ವಿರುದ್ಧವಾದ ಕೆಲಸಗಳನ್ನೇ ಬಿಜೆಪಿಯವರು ಮಾಡಿದ್ದಾರೆ. ಯಡಿಯೂರಪ್ಪನವರ ಸ್ವಂತ ಊರಿನಲ್ಲಿಯೇ ಸಮಯದಾಯದ ಆಕ್ರೋಶ ಎಷ್ಟಿದೆ ನೋಡಿದ್ದೀರಲ್ಲಾ, ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡ್ತೇವೆ. ಓಬಿಸಿ ರಿಪೋರ್ಟ್, ಎಸ್.ಸಿ ಎಸ್ಟಿ ರಿಪೋರ್ಟ್ ಎಲ್ಲಾ ತೆಗೆದು ಜನರ ಮುಂದಿಡಿ. ಯಾಕೆ ಜನರ ಮುಂದೆ ವರದಿಗಳನ್ನು ಇಟ್ಟಿಲ್ಲ?. ಎಸ್.ಎಂ ಕೃಷ್ಣ ಕಾಲದಲ್ಲಿ ನಾವು ಸದಾಶಿವ ಆಯೋಗವನ್ನ ಮಾಡಿದ್ದೇವೆ. ಜೇನುಗೂಡಿಗೆ ಕೈ ಹಾಕಿದ್ದೀವಿ ಅಂದಿದ್ದೀರಲ್ಲ ಜೇನುಗೂಡಲ್ಲ ಕಡುಜೇನಿಗೆ ಕೈ ಹಾಕಿದ್ದೀರಿ ಅಂತ ಸಿಎಂ ವಿರುದ್ಧ ಡಿಕೆಶಿ ಕೆಂಡಕಾರಿದ್ದಾರೆ.
ಕರ್ನಾಟಕದಲ್ಲಿ ಫ್ರೀ ಅಂಡ್ ಫೇರ್ ಎಲೆಕ್ಷನ್‌ಗೆ ಸಹಕಾರ ನೀಡಬೇಕು: ಸಿಎಂ ಬೊಮ್ಮಾಯಿ
ಇದೇ ನನ್ನ ಕೊನೆ ಚುನಾವಣೆ
ಮೈಸೂರು: ಇದೇ ನನ್ನ ಕೊನೆ ಚುನಾವಣೆ, ಇದೇ ಕೊನೆ ಚುನಾವಣೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಎರೆಡೆರೆಡು ಬಾರಿ ಉಚ್ಚರಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಈ ಚುನಾವಣೆಯ ನಂತರ ಚುನಾವಣಾ ರಾಜಕೀಯದಿಂದ ನಾನು ನಿವೃತ್ತಿ ಆಗುತ್ತಿದ್ದೇನೆ. ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿಯಾಗಬೇಕೆಂಬುದು ನನ್ನ ಬಯಕೆಯಾಗಿದೆ. ಹೀಗಾಗಿ ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಹೀಗಾಗಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದೆ. ಈ ಬಾರಿ ನನಗೆ ಯಾವ ಅನುಮಾನಗಳು ಇಲ್ಲ. ಆದರೇ ಕೋಲಾರದ ಜನ ಒತ್ತಾಯದಿಂದ ಕರೆಯುತ್ತಿರುವ ಕಾರಣ ಅಲ್ಲೂ ನಿಲ್ಲಲೂ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು. ನನಗೆ ಕ್ಷೇತ್ರ ಇಲ್ಲ ಎನ್ನುವುದೆಲ್ಲ ಅರ್ಥ ಇಲ್ಲದ ಮಾತು. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇನೆ. ನನಗೆ 25 ಕ್ಷೇತ್ರದಲ್ಲೂ ಗೆಲ್ಲುವ ಅವಕಾಶ ಇರುವ ಕಾರಣ ನನಗೆ ಆಹ್ವಾನಿಸುತ್ತಿದ್ದಾರೆ. ಯಾರಾದ್ರೂ ಸೋಲುತ್ತಾರೆ ಎಂದರೆ ಆಹ್ವಾನ ಮಾಡುತ್ತಾರಾ? ಅಂತ ಪ್ರಶ್ನಿಸಿದ್ದಾರೆ.
ಇನ್ನು ಚುನಾವಣೆ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚುನಾವಣೆಗೆ ಕಾಂಗ್ರೆಸ್ ಯಾವಾಗಲೋ ಸಿದ್ಧವಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಆಶಯಗಳ ಮೇಲೆ ವಿಶ್ವಾಸ ಇದೆ. ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ. ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಚುನಾವಣೆ ನಡೆಯಬೇಕು.. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ವಹಿಸಬೇಕು. ಆಡಳಿತ ಪಕ್ಷದವರು ಹೆಚ್ಚಾಗಿ ಚುನಾವಣಾ ಅಕ್ರಮ ಮಾಡುತ್ತಾರೆ. ಅವರ ಮೇಲೆ ಚುನಾವಣಾ ಆಯೋಗ ಹೆಚ್ಚಿನ ಗಮನ ಇಡಬೇಕು ಅಂತ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.