ನಿನ್ನ ಭ್ರಷ್ಟಾಚಾರದಿಂದಲೇ ಬೆಂಗಳೂರಿಗೆ ಈ ಸ್ಥಿತಿ: ಸಿಎಂ ವಿರುದ್ಧ ಏಕವಚನದಲ್ಲಿ ಡಿಕೆಶಿ ವಾಗ್ದಾಳಿ

By Kannadaprabha NewsFirst Published Sep 7, 2022, 1:30 AM IST
Highlights

ಕಾಂಗ್ರೆಸ್‌ ಕಾಲದಲ್ಲಿ ಒತ್ತುವರಿ ನಡೆದಿದ್ದರೆ ಜೈಲಿಗೆ ಕಳಿಸಿ, ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ ಹೊರಡಿ, ಕೊಟ್ಟ ಕುದುರೆ ಏರದವ ಧೀರನೂ ಅಲ್ಲ ಶೂರನೂ ಅಲ್ಲ: ಡಿಕೆಶಿ 

ಬೆಂಗಳೂರು(ಸೆ.07): ಬೆಂಗಳೂರಿನ ಮಳೆ ಅವಾಂತರಕ್ಕೆ ಕಾಂಗ್ರೆಸ್‌ ಕಾಲದ ಒತ್ತುವರಿ ಕಾರಣ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಏಕವಚನದಲ್ಲೇ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ನಿನ್ನ ಭ್ರಷ್ಟಾಚಾರ, ನಿನ್ನ ಸರ್ಕಾರ ಭಷ್ಟಾಚಾರ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಬೆಂಗಳೂರಿನ ಇಂದಿನ ಸ್ಥಿತಿ ಕಾರಣ ಎಂಬುದನ್ನು ಗೌರವಾನ್ವಿತ ಮುಖ್ಯಮಂತ್ರಿಗಳು ನೆನಪಿನಲ್ಲಿಟುಕೊಳ್ಳಬೇಕು’ ಎಂದು ಗುಡುಗಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ಕಾಲದಲ್ಲಿ ಒತ್ತುವರಿ ಆಗಿದ್ದರೆ ತನಿಖೆ ಮಾಡಿ ಒತ್ತುವರಿ ಮಾಡಿರುವವರನ್ನು ಜೈಲಿಗೆ ಕಳಿಸಿ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಕೊಟ್ಟಕುದುರೆಯ ಹೇರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ. ಕೆಲಸ ಮಾಡಲು ಆದರೆ ಮಾಡಿ ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಡಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ನೆರೆ ಸಂತ್ರ​ಸ್ತರ ನೆರ​ವಿಗೆ ಸಿಎಂ ಬೊಮ್ಮಾಯಿ ಧಾವಿಸಲಿ: ಡಿಕೆಶಿ

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಆರೋಪದ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಒತ್ತುವರಿ ಆಗಿದ್ದರೆ ತೆರವು ಮಾಡಿ. ಯಾರು ಬೇಡ ಅಂತಾರೆ. ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಲಿ, ಜೈಲಿಗೆ ಒಳುಹಿಸಿ. ಅಧಿಕಾರ ನಿಮ್ಮ ಕೈಯಲ್ಲಿದೆ ಎಂದರು.

ಮೂರು ವರ್ಷಗಳ ಅಧಿಕಾರದಲ್ಲಿ ಏನು ಮಾಡಿದ್ದೀರಿ. ಬೆಂಗಳೂರಿನ ಬ್ರಾಂಡ್‌ ಹಾಳು ಮಾಡಿ ಕರಪಕ್ಷನ್‌ ಕ್ಯಾಪಿಟಲ್‌, ಗಾರ್ಬೇಜ್‌ ಕ್ಯಾಪಿಟಲ್‌ ಎಂಬ ಕಳಂಕ ತಂದಿದ್ದೀರಿ. ದೇಶಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ಐಟಿ ಬಿಟಿ ಕಂಪನಿಗಳಿಗೆ ಒಳ್ಳೆಯ ಸೇವೆ, ಮೂಲಸೌಕರ್ಯ ಒದಗಿಸಲಾಗುತ್ತಿಲ್ಲ ನಿಮ್ಮ ಆಡಳಿತದಲ್ಲಿ. ನಿಮಗೆ ಬಿಬಿಎಂಪಿ ಚುನಾವಣೆ ಮಾಡೋ ಯೋಗ್ಯತೆ ಇಲ್ಲ. ಜನರ ಮೇಲೆ ನಂಬಿಕೆ ಇಲ್ವಾ? ಜನ 40% ಕಮಿಷನ್‌ ತೆಗೆದುಕೊಂಡಿದ್ದೀರಿ ಎಂದು ಉಗಿದ ಮೇಲೆ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತೀರಾ ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಗಳೇ ನಿಮ್ಮ ಕೈಯಲ್ಲಿ ಆಡಳಿತ ನಡೆಸಲು ಆಗಲ್ಲ. ಸಚಿವ ಮಾಧುಸ್ವಾಮಿ ಅವರು ಹೇಳಿದಂತೆ ಸರ್ಕಾರವನ್ನು ತಳ್ಳುತ್ತಿದ್ದೀರಿ. ನಿಮ್ಮ ಕೈಯಲ್ಲಿ ಆಡಳಿತ ಮಾಡಲಾಗಿದ್ದರೆ ರಾಜಿನಾಮೆ ಕೊಟ್ಟು ಬನ್ನಿ ಚುನಾವಣೆಗೆ ಹೋಗೋಣ ಎಂದರು.

ಭಾರತ್‌ ಜೋಡೋ ಯಾತ್ರೆಗೆ ಎಲ್ಲರಿಗೂ ಅವಕಾಶ: ಡಿಕೆಶಿ

ನಾನು ಹೆದರುವ ಮಗ ಅಲ್ಲ: ಡಿಕೆಶಿ

ಬೆಂಗಳೂರು: ಬಿಜೆಪಿ ಸರ್ಕಾರ ಹಿಂದಿನ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳನ್ನು ತನಿಖೆಗೆ ವಹಿಸಲು ಮುಂದಾಗಿದೆಯಲ್ಲ ಎಂಬ ಪ್ರಶ್ನೆಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌, ಬರೀ ಬಾಯಿ ಮಾತಲ್ಲಿ ಹೇಳಿಕೊಂಡು ಕಾಲಹರಣ ಮಾಡುವುದಲ್ಲ. ಒಂದು ನಿಮಿಷವೂ ವ್ಯರ್ಥಮಾಡುವುದು ಬೇಡ. ಕೂಡಲೇ ತನಿಖೆ ಮಾಡಿಸಲಿ ಎಂದರು.

ತಾವು ಹಿಂದೆ ನಿಭಾಯಿಸಿದ್ದ ಇಂಧನ ಇಲಾಖೆಯಲ್ಲೂ ಅಕ್ರಮ ನಡೆದಿದ್ದು ತನಿಖೆ ನಡೆಸುವುದಾಗಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ನಾನು ಗೊಡ್ಡು ಬೆದರಿಕೆಗಳಿಗೆ ಹೆದರುವ ಮಗ ಅಲ್ಲ. ತಕ್ಷಣವೇ ತನಿಖೆ ಮಾಡಿಸಲಿ’ ಎಂದು ಸವಾಲು ಹಾಕಿದರು.
 

click me!