ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಬೆಂಗಳೂರು [ಮಾ.13]: ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಯುಗಾದಿ ಹಬ್ಬದ ನಂತರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುವ ಸಂಭವವಿದೆ. ಅಷ್ಟೇ ಅಲ್ಲ, ಪದಗ್ರಹಣದ ನಂತರ ಕಾಂಗ್ರೆಸ್ ಪಕ್ಷದ ಪರ ಸಂಚಲನ ಮೂಡಿಸಲು ಈ ಹಿಂದೆ ಎಸ್.ಎಂ. ಕೃಷ್ಣ ನಡೆಸಿದ್ದ ರಾಜ್ಯ ಪ್ರವಾಸ ಮಾದರಿಯಲ್ಲಿ ಪಾಂಚಜನ್ಯ- 2 ಯಾತ್ರೆಯನ್ನು ನಡೆಸುವ ಇರಾದೆಯೂ ಶಿವಕುಮಾರ್‌ಗೆ ಇದೆ ಎನ್ನಲಾಗಿದೆ.
ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಆಗ್ರಹದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಅದ್ಧೂರಿ ಪದ ಗ್ರಹಣ ಸಮಾರಂಭ ನಡೆಸಿ ಅಧಿಕಾರ ವಹಿಸಿಕೊಳ್ಳಲು ಶಿವಕುಮಾರ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಸಮಾರಂಭಕ್ಕೆ ರಾಜ್ಯದ ಎಲ್ಲಾ ನಾಯಕರನ್ನು ಆಹ್ವಾನಿಸಲಿದ್ದಾರೆ.
ಜತೆಗೆ ದೆಹಲಿ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಈ ಮೂವರ ಪೈಕಿ ಒಬ್ಬರನ್ನು ಕರೆಸುವ ಉದ್ದೇಶ ಅವರಿಗೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 1 - 2 ದಿನಗಳಲ್ಲಿ ಅವರು ದೆಹಲಿಗೆ ತೆರಳಲಿದ್ದು, ದೆಹಲಿಯ ವರಿಷ್ಠರ ಭೇಟಿ ಮಾಡಿ ತಮ್ಮ ಪದಗ್ರಹಣ ಸಮಾರಂಭಕ್ಕೆ ಆಹ್ವಾನ ನೀಡಲಿದ್ದಾರೆ. ವರಿಷ್ಠರ ಸಮಯಾವಕಾಶ ದೊರೆತ ಕೂಡಲೇ ಪದ ಗ್ರಹಣ ಸಮಾರಂಭಕ್ಕೆ ಮಹೂರ್ತ ವನ್ನು ಅವರು ನಿಗದಿಪಡಿಸಲಿದ್ದಾರೆ
ಎನ್ನಲಾಗಿದೆ. ಸಾವಿರಾರು ಕಾರ್ಯಕರ್ತರ ಸಮ್ಮುಖ ಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪಾಂಚಜನ್ಯ- 2 : ಒಂದು ಬಾರಿ ಪದಗ್ರಹಣ ಮಾಡಿದ ನಂತರ ರಾಜ್ಯಾದ್ಯಂತ ಪ್ರವಾಸದ ಕಾರ್ಯಕ್ರಮವನ್ನು ಅವರು ರೂಪಿಸಲಿದ್ದಾರೆ. ಮೂಲಗಳ ಪ್ರಕಾರ ಪ್ರಸ್ತುತ ಬಿಜೆಪಿಯಲ್ಲಿರುವ ಎಸ್.ಎಂ. ಕೃಷ್ಣ ಅವರು ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆಸಿದ ಪಾಂಚಜನ್ಯ ಮಾದರಿಯಲ್ಲಿ ಶಿವಕುಮಾರ್ ಕೂಡ ಪಾಂಚಜನ್ಯ - 2 ನಡೆಸುವ ಇರಾದೆ ಹೊಂದಿದ್ದಾರೆ. ರಾಜ್ಯದ ಎಲ್ಲಾ ಹಿರಿಯ ನಾಯಕರೊಂದಿಗೆ ವಾಹನವೊಂದರಲ್ಲಿ ರಾಜ್ಯದ
ಪ್ರತಿಯೊಂದು ಜಿಲ್ಲೆಯಲ್ಲೂ ಪ್ರವಾಸ ಮಾಡುವುದು ಮತ್ತು ಸಭೆಗಳನ್ನು ನಡೆಸಿ ಒಂದು ಸಂಚಲನ ಹುಟ್ಟುಹಾಕುವುದು ಶಿವಕುಮಾರ್ ಉದ್ದೇಶ.
ಕೆಪಿಸಿಸಿಗೆ ಡಿಕೆಶಿ ಹೊಸ ಸಾರಥಿ: ಜೆಡಿಸ್, ಬಿಜೆಪಿಗೆ ಶುರುವಾಯ್ತಾ ಭೀತಿ?
ಇದಕ್ಕೆ ರಾಜ್ಯದ ಇತರ ನಾಯಕರ ಸ್ಪಂದನೆ ಹೇಗೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕು. ಒಂದು ವೇಳೆ ಈ ಪಾಂಚಜನ್ಯ- 2ನಡೆಸಲು ಸಾಧ್ಯವಾಗದಿದ್ದರೆ ವಿಭಾಗ ಮಟ್ಟದಲ್ಲಿ ದೊಡ್ಡ ಸಮಾರಂಭಗಳನ್ನು ನಡೆಸುವ ಮೂಲಕ ಕಾಂಗ್ರೆಸ್ ಪರ ಅಲೆ ಸೃಷ್ಟಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆಯನ್ನು ಬಲಗೊಳಿಸಲು ಹಾಗೂ ಬಿಜೆಪಿ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಎಂಬ ಬಗ್ಗೆ ಅರಿವು ಮೂಡಿಸಲು ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ತಲಾ 1 ಸಾವಿರ ಕಾರ್ಯಕರ್ತರಿಗೆ ಕಾರ್ಯಾಗಾರವನ್ನು ನಡೆಸುವ ಉದ್ದೇಶ ಹೊಂದಿದ್ದಾರೆ.
ಕೆಪಿಸಿಸಿಯ ಸಾಮಾಜಿಕ ಜಾಲ ನಿರ್ವಹಣೆಯ ಹೊಣೆಯನ್ನು ಜಾಗತಿಕ ಮಟ್ಟದ ಸಂಸ್ಥೆಯೊಂದಕ್ಕೆ ವಹಿಸುವ ಮೂಲಕ ಬಿಜೆಪಿಯ ಸಾಮಾಜಿಕ ಜಾಲ ತಂತ್ರಗಾರಿಕೆಗೆ ಟಕ್ಕರ್ ನೀಡಲು ಉದ್ದೇಶಿಸಿದ್ದಾರಂತೆ.
ಇದು ಶಿವಕುಮಾರ್ ಸದ್ಯಕ್ಕೆ ಹಾಕಿಕೊಂಡಿರುವ ಯೋಜನೆಗಳು. ಗ್ರಾಮ ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಪ್ರಚಾರ ಹಾಗೂ ಸಮಾರಂಭ ತೀವ್ರಗೊಳಿಸುವ ಉದ್ದೇಶ ಅವರಿಗೆ ಇದೆ ಎಂದು ಮೂಲಗಳ ತಿಳಿಸಿವೆ. ಒಂದು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶಿವಕುಮಾರ್ ಅವರು ಇಡೀ ಕಾಂಗ್ರೆಸ್ ವ್ಯವಸ್ಥೆಗೆ ಬದಲಾವಣೆ ತರುವ ಉದ್ದೇಶವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಮೊಟ್ಟ ಮೊದಲಿಗೆ ಹೊಸ ಪದಾಧಿಕಾರಿಗಳನ್ನು ಶೀಘ್ರ ನೇಮಕ ಮಾಡಿಕೊಳ್ಳಲಿದ್ದಾರೆ. ಇದಾದ ನಂತರ ಹೊಸ ಪಡೆ ಸೃಷ್ಟಿ ಉದ್ದೇಶ ಹೊಂದಿದ್ದಾರೆ.