ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್‌ನಿಂದ ಕರ್ನಾಟಕವಷ್ಟೇ ಅಲ್ಲ, ದೇಶಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಚಿತ್ರದುರ್ಗ/ಬಳ್ಳಾರಿ (ಸೆ.28): ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್‌ನಿಂದ ಕರ್ನಾಟಕವಷ್ಟೇ ಅಲ್ಲ, ದೇಶಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ಮಂಗಳವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಸರ್ಕಾರ ಎಂಬ ಗಿಫ್ಟ್ ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರ ಎಂಬುದನ್ನು ತೊಳೆದು ರಾಜ್ಯದ ಗೌರವ ಉಳಿಸಲಿ ಎಂದರು.
ಡಿಕೆಶಿ ಬೇಲ್ ಮೇಲೆ ಹೊರಗಡೆ ಬಂದಿದ್ದಾರೆ ಎಂಬ ಸಚಿವ ಅಶೋಕ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಮೂರು ವರ್ಷದಿಂದ ವಿಚಾರಣೆ ನಡೆಸುತ್ತಿದ್ದಾರೆ. ಯಾವ ವಿಚಾರಣೆಯಿಂದಲೂ ನನಗೆ ಏನೂ ಮಾಡಲಾಗಿಲ್ಲ. ಮುಂದೆಯೂ ಆಗೋದಿಲ್ಲ. ಬಿಜೆಪಿಗೆ ಹೋಗುವ ಕಾಂಗ್ರೆಸ್ ಶಾಸಕರ ರಕ್ಷಿಸಿ ಇಟ್ಟುಕೊಂಡಿದ್ದೆ ಎಂಬ ಕಾರಣಕ್ಕೆ ಅಧಿಕಾರ ದುರ್ಬಳಕೆ ಮಾಡಿ ನನ್ನ ಮೇಲೆ ಕೇಸು ಹಾಕಿಸಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಯಿತು ಎಂದರು.
ಬೊಮ್ಮಾಯಿ ಜಾತಿ ಮೇಲೆ ಸಿಎಂ ಆಗಿದ್ದಾರಾ?: ಡಿ.ಕೆ.ಶಿವಕುಮಾರ್
ಬಿಜೆಪಿಯವರು ಕಬ್ಬಿಣದಿಂದ ಕತ್ತರಿಸುತ್ತಾರೆ, ರಾಹುಲ್ ಸೂಜಿಯಿಂದ ಜೋಡಿಸ್ತಾರೆ: ಇನ್ನು ಚಿತ್ರದುರ್ಗಕ್ಕೂ ಮುನ್ನ ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ವೀಕ್ಷಣೆ ಮಾಡಿ, ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಬಿಜೆಪಿಯವರು ಕಬ್ಬಿಣದ ಕತ್ತರಿಯಿಂದ ಕತ್ತರಿಸುತ್ತಾರೆ. ರಾಹುಲ್ ಗಾಂಧಿ ಅವರು ಸೂಜಿಯಿಂದ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಾರೆ. ಐಕ್ಯತಾ ಯಾತ್ರೆ ಸಂಬಂಧ ಸಮಾವೇಶವನ್ನು ಬಳ್ಳಾರಿಯಲ್ಲಿ ಮಾತ್ರ ಹಮ್ಮಿಕೊಂಡಿದ್ದೇವೆ. ಎರಡು ದಿನಗಳ ಕಾಲ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿಯೇ ಇರಲಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ಅಕ್ರಮ ಹಣ ಗಳಿಕೆ ವಿಚಾರಣೆ ಅ.18ಕ್ಕೆ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಹಣ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ರೋಸ್ ಅವೆನ್ಯೂ ಇಡಿ ಕೋರ್ಚ್, ಪ್ರಕರಣದ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿದೆ. ಡಿಕೆಶಿ ಮನೆ ಮೇಲೆ ನಡೆದ ಇಡಿ ದಾಳಿ ವೇಳೆ ದೆಹಲಿಯ ಪ್ಲಾಟ್‌ವೊಂದರಲ್ಲಿ ಡಿಕೆಶಿಗೆ ಸೇರಿದ್ದೆನ್ನಲಾದ ಅಕ್ರಮ ಹಣದ ಕುರಿತು ಪ್ರಕರಣ ದಾಖಲಿಸಲಾಗಿತ್ತು.
ಭಾರತ ಐಕ್ಯತಾ ಯಾತ್ರೆಗೆ ಸೋನಿಯಾ, ಪ್ರಿಯಾಂಕಾ ಭಾಗಿ: ಡಿ.ಕೆ.ಶಿವಕುಮಾರ್
ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಪ್ರಕರಣದ ವಿಚಾರಣೆ ನಡೆಯಿತು. ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಡಿಕೆಶಿಯವರು ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆದಿದ್ದರು. ಆದರೆ, ಪ್ರಕರಣದ ಇತರ ಆಪಾದಿತರಾದ ಸಚಿನ್ ನಾರಾಯಣ, ಆಂಜನೇಯ, ರಾಜೇಂದ್ರ, ಸುನೀಲ್ ಶರ್ಮಾ ಅವರು ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿದೆ.