ಕರ್ನಾಟಕದಲ್ಲಿ ರಾಹುಲ್‌ ಯಾತ್ರೆ ವೇಳೆ ಬಿಜೆಪಿ ಪೋಸ್ಟರ್‌ ವಾರ್‌

By Govindaraj SFirst Published Sep 28, 2022, 6:20 AM IST
Highlights

‘ಪೇ ಸಿಎಂ’ ಪೋಸ್ಟರ್‌ಗಳ ಮೂಲಕ ಸಾಕಷ್ಟು ಮುಜುಗರ ಉಂಟು ಮಾಡಿದ್ದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ಎದುರೇಟು ನೀಡಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ. 

ಚಾಮರಾಜನಗರ/ಬೆಂಗಳೂರು (ಸೆ.28): ‘ಪೇ ಸಿಎಂ’ ಪೋಸ್ಟರ್‌ಗಳ ಮೂಲಕ ಸಾಕಷ್ಟು ಮುಜುಗರ ಉಂಟು ಮಾಡಿದ್ದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ಎದುರೇಟು ನೀಡಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ. ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಭಾರತ್‌ ಜೋಡೋ’ ಯಾತ್ರೆ ಕರ್ನಾಟಕವನ್ನು ಪ್ರವೇಶಿಸುವ ವೇಳೆ ರಾಜ್ಯದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲು ನಿರ್ಧರಿಸಿದೆ. ಕಾಂಗ್ರೆಸ್‌ ಜೋಡೋ ಯಾತ್ರೆಯ ಉದ್ದಕ್ಕೂ ಕಾಂಗ್ರೆಸ್‌ನ ಹಗರಣಗಳ ಬ್ಯಾನರ್‌ಗಳನ್ನು ಹಾಕುವ ಮೂಲಕ ಕಾಂಗ್ರೆಸ್‌ ಯಾತ್ರೆಯನ್ನು ಬಿಜೆಪಿ ಎದುರಿಸಲಿದೆ ಎಂದು ಚಾಮರಾಜನಗರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್‌ ತಿಳಿಸಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು ವಿಭಜನೆ ಮಾಡಿದ್ದರ ಪಾಪ ತೊಳೆದುಕೊಳ್ಳಲು ಈಗ ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಯಾತ್ರೆಯನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ 21 ಕಿ.ಮೀ. ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಜೋಡೋ ಪಾದಯಾತ್ರೆ ನಡೆಯುವ ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನ ಹಗರಣಗಳ ಬ್ಯಾನರ್‌ಗಳನ್ನು ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಹುಲ್ ಕಾಲ್ನಡಿಗೆ ಬಿಜೆಪಿಗೆ ನಡುಕ: ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್

ಕಾಂಗ್ರೆಸ್‌ ಪಕ್ಷ ಕಳೆದ ವಾರ ನಡೆಸಿದ ‘ಪೇ ಸಿಎಂ’ ಪೋಸ್ಟರ್‌ ಅಭಿಯಾನದಿಂದ ಬಿಜೆಪಿ ಪಾಳೆಯದಲ್ಲಿ ತೀವ್ರ ಚರ್ಚೆ ನಡೆದಿತ್ತು. ಕಾಂಗ್ರೆಸ್‌ನ ಈ ತಂತ್ರಕ್ಕೆ ಪ್ರತಿತಂತ್ರ ರೂಪಿಸದಿದ್ದರೆ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜನರು ಕಾಂಗ್ರೆಸ್‌ನ ಆರೋಪವನ್ನೇ ನಂಬುವ ಪರಿಸ್ಥಿತಿ ಎದುರಾಗಬಹುದು. ಆ ಪಕ್ಷಕ್ಕೆ ಆದಷ್ಟುಶೀಘ್ರ ತಿರುಗೇಟು ನೀಡಬೇಕು ಎಂಬ ಅಭಿಪ್ರಾಯ ರೂಪದ ನಿರ್ದೇಶನವನ್ನು ರಾಜ್ಯ ನಾಯಕರು ನೀಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸಂಚರಿಸುವ ಸಂದರ್ಭವನ್ನು ಬಳಸಿಕೊಳ್ಳಲು ಬಿಜೆಪಿ ನಾಯಕರು ನಿರ್ಧರಿಸಿ ಆಯಾ ಜಿಲ್ಲಾ ಘಟಕಗಳಿಗೆ ಸೂಚನೆ ರವಾನಿಸಿದ್ದರು. ಭಾರತ್‌ ಜೋಡೋ ಯಾತ್ರೆ ಈ ತಿಂಗಳ 30ರಂದು ಚಾಮರಾಜನಗರ ಜಿಲ್ಲೆ ಮೂಲಕ ಕರ್ನಾಟಕ ಪ್ರವೇಶಿಸಲಿದ್ದು, ಸುಮಾರು 22 ದಿನಗಳ ಕಾಲ ರಾಜ್ಯದಲ್ಲಿ ಸಂಚರಿಸಲಿದೆ. ಯಾತ್ರೆ ಸಂಚರಿಸುವ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಇರಿಸು ಮುರುಸಾಗುವಂತೆ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಪ್ರದರ್ಶಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Chamarajanagar: ಐಕ್ಯತೆ ಮೂಡಿಸಲು ಭಾರತ್‌ ಜೋಡೋ ಪಾದಯಾತ್ರೆ: ಆರ್‌.ಧ್ರುವನಾರಾಯಣ

ಭಾರತ್‌ ಜೋಡೊ ಯಾತ್ರೆ 30ರಂದು ರಾಜ್ಯಕ್ಕೆ: ಸೆ. 30ರಂದು ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆಯ ಮೂಲಕ ರಾಜ್ಯಕ್ಕೆ ಆಗಮಿಸಲಿದ್ದು, ಇಲ್ಲಿಂದ ಸಾಕಷ್ಟುಜನರು ಯಾತ್ರೆಗೆ ಸಾಥ್‌ ನೀಡಲು ಪಂಚಾಯಿತಿ ಮಟ್ಟದಿಂದ ಕಾಂಗ್ರೆಸ್‌ ಕಾರ್ಯಕರ್ತರು ಹೋಗಲಿದ್ದಾರೆ ಎಂದು ಜೈವಿಕ ಇಂಧನ ಮಂಡಳಿ ರಾಜ್ಯ ಮಾಜಿ ಉಪಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು. ನಗರದಲ್ಲಿ ನಡೆದ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ತಾಲೂಕಿನಲ್ಲಿ ಕಾರ್ಯಕರ್ತರು ಭಾರತ್‌ ಜೋಡೊ ಕಾರ್ಯಕ್ರಮವು ಸುಮಾರು 21 ದಿನಗಳ ಕಾಲ ರಾಜ್ಯಾದಂತ ನಡೆಯಲಿದೆ ಇದಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

click me!