
ರಾಜ್ಯ ಕಾಂಗ್ರೆಸ್ ಪಾಲಿನ ಟ್ರಬಲ್‌ಶೂಟರ್ ಹಾಗೂ ಉಪ ಚುನಾವಣೆ ಸ್ಪೆಷಲಿಸ್ಟ್ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಪಟ್ಟಅಲಂಕರಿಸಿದ ನಂತರದ ಮೊದಲ ಚುನಾವಣಾ ಸವಾಲು ಎದುರಾಗಿದೆ. ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳ ರೂಪದಲ್ಲಿ ಎದುರಾಗಿರುವ ಸವಾಲನ್ನು ಮೆಟ್ಟಿನಿಂತು ಶತಾಯಗತಾಯ ಗೆಲುವು ಸಾಧಿಸಲು ಹಾಗೂ ಈ ಮೂಲಕ ತಮ್ಮ ನಾಯಕತ್ವ ಸಾಬೀತುಪಡಿಸಲು ಡಿ.ಕೆ. ಶಿವಕುಮಾರ್ ಉತ್ಸುಕರಾಗಿದ್ದಾರೆ. ಹೀಗಾಗಿಯೇ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಸಂಪೂರ್ಣ ಹೊಣೆ ಹೊತ್ತು ಶತಾಯಗತಾಯ ತನ್ನ ಅಭ್ಯರ್ಥಿ ಗೆಲ್ಲಿಸಲು ಹೋರಾಟ ನಡೆಸಿದ್ದಾರೆ. ಚುನಾವಣಾ ಫಲಿತಾಂಶ, ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿದ್ದಾರೆ.
* ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ. ಒತ್ತಡವಿದೆಯೇ?
ಹಾಗೇನೂ ಇಲ್ಲ. ಹಿಂದಿನ ಅವಧಿಯಲ್ಲಿ ಮಾಡಿರುವ ಮಹಾ ಅಪರಾಧಗಳನ್ನು ತಿದ್ದುಕೊಳ್ಳಲು ಅವಕಾಶ ಸಿಕ್ಕಿದೆ. ಜನರಿಗೆ ಎಲ್ಲವನ್ನೂ ಮನದಟ್ಟು ಮಾಡಿಕೊಡುತ್ತಿದ್ದೇವೆ. ಮುಂದಿನದನ್ನು ಜನ ತೀರ್ಮಾನಿಸುತ್ತಾರೆ.
* ಏನದು ಮಹಾಪರಾಧ?
ಮುನಿರತ್ನ ಅಂತಹವರನ್ನು ಉತ್ತೇಜಿಸಿ ನಾವು ದೊಡ್ಡ ತಪ್ಪು ಮಾಡಿದ್ದೇವೆ. ಮೊದಲು ನಮಗೆ ಇವರು ಇಷ್ಟರ ಮಟ್ಟಿಗೆ ಭ್ರಷ್ಟಎಂಬುದು ಗೊತ್ತಿರಲಿಲ್ಲ. ಈಗ ಸೋಲಿಸಲು ಹೋರಾಡುತ್ತಿದ್ದೇವೆ.
* ರಾಜರಾಜೇಶ್ವರಿನಗರ ಕಣ ಡಿ.ಕೆ. ಬ್ರದರ್ಸ್ ವರ್ಸಸ್ ಮುನಿರತ್ನ ಎಂಬಂತಾಗಿದೆ?
ನೆವರ್, ಮುನಿರತ್ನ ಹಾಗೂ ನನಗೆ ಯಾವುದೇ ರೀತಿಯಲ್ಲೂ ಹೋಲಿಕೆಯಲ್ಲ. ಇದು ಕುಸುಮಾ ಹಾಗೂ ಮುನಿರತ್ನ ನಡುವಿನ ಸ್ಪರ್ಧೆ.
* ಬಿಜೆಪಿ ಅಭ್ಯರ್ಥಿಯು ಕಾಂಗ್ರೆಸ್ ಅಭ್ಯರ್ಥಿಯ ಬದಲು ನಿಮ್ಮನ್ನು ಗುರಿಯಾಗಿಸಿಕೊಂಡೇ ಟೀಕಿಸುತ್ತಿದ್ದಾರಲ್ಲ?
ಅವರಿಗೆ ಕಾಂಗ್ರೆಸ್ ಅಥವಾ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಲು ಧಮ್ ಇಲ್ಲ. ಇವರೊಬ್ಬರು ಮಾತ್ರವಲ್ಲ ಬಿಜೆಪಿಯ ಹಲವು ನಾಯಕರು ಬಾಯಿ ಚಪಲಕ್ಕೆ ಹಾಗೂ ಪಕ್ಷದಲ್ಲಿ ಪದೋನ್ನತಿ ಪಡೆಯುವುದಕ್ಕೆ ನನ್ನ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
* ಕುಣಿಗಲ್ ಶಾಸಕ ಬಿಟ್ಟು ಉಳಿದ ಎಲ್ಲ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಜೊತೆ ಇದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ?
ಅಲ್ಲಾ ಸ್ವಾಮಿ. ಹುಟ್ಟಿದ್ದೇ ನಾನೊಬ್ಬ, ಸಾಯುವಾಗಲೂ ನಾನೊಬ್ಬನೇ. ನನ್ನ ಜೊತೆ ಜನರು ಇರಬೇಕು ಎಂದು ನಾನು ಯಾವತ್ತೂ ಹೇಳಿಲ್ಲ. ಇದೇ ಬಿಜೆಪಿ ಅಭ್ಯರ್ಥಿಯ ಹಿಂದಿನ ಭಾಷಣಗಳ ವಿಡಿಯೋ ನೋಡಿ. ಡಿ.ಕೆ. ಶಿವಕುಮಾರ್ ಅವರಿಂದಲೇ ನಾನು ಗೆದ್ದಿದ್ದು. ಡಿಕೇಶಿಯೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಅದರ ಬಗ್ಗೆಯೂ ಉತ್ತರಿಸಲಿ.
* ಕಾಂಗ್ರೆಸ್ ನಾಯಕರಿಂದಲೇ ಮುಂದಿನ ಸಿಎಂ ಹೇಳಿಕೆಗಳು ಬರುತ್ತಿವೆಯಲ್ಲ. ಇದರಿಂದ ಪಕ್ಷಕ್ಕೆ ನಷ್ಟಆಗ್ತಿಲ್ವಾ?
ಇದು ಮುಂದಿನ ಸಿಎಂ ಬಗ್ಗೆ ಚರ್ಚಿಸುವ ಸಮಯವಲ್ಲ. ಮುಂದೆ ಇಂತಹ ಹೇಳಿಕೆ ಬಾರದಂತೆ ಎಚ್ಚರ ವಹಿಸೋಣ. ಮೊದಲು ಪಕ್ಷದ ಕೆಲಸ ಮಾಡೋಣ ಪಕ್ಷವನ್ನು ಗೆಲ್ಲಿಸೋಣ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಈ ಹಂತದಲ್ಲಿ ಚರ್ಚೆ ಮಾಡುವುದು ಏನೂ ಇಲ್ಲ ಮಾಡಲೂಬಾರದು.
* ಆದರೂ ನಿಮ್ಮ ಬೆಂಬಲಿಗರು ನೀವೇ ಸಿಎಂ ಎನ್ನುತ್ತಿದ್ದಾರೆ. ನೇರವಾಗಿ ಹೇಳಿ ನೀವು ಆಕಾಂಕ್ಷಿ ಅಲ್ಲವೇ?
ಅದನ್ನು ಚರ್ಚೆ ಮಾಡಲು ಇದು ಸಮಯವಲ್ಲ.
* ಆರ್.ಆರ್.ನಗರದಲ್ಲಿ ಡಿ.ಕೆ. ಶಿವಕುಮಾರ್ ಒಕ್ಕಲಿಗ ಕಾರ್ಡ್ ಪ್ರಬಲವಾಗಿ ಪ್ಲೇ ಮಾಡ್ತಿದಾರೆ?
ನಾನು ಯಾವತ್ತೂ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ನನಗೆ ಪಕ್ಷವೇ ಜಾತಿ, ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ.
* ಶಿವಕುಮಾರ್ ಒಕ್ಕಲಿಗ ನಾಯಕರಾಗಲು ಎಚ್.ಡಿ. ಕುಮಾರಸ್ವಾಮಿ ಜೊತೆ ಪೈಪೋಟಿಗೆ ಬಿದ್ದಿದ್ದಾರೆ?
ನನಗೆ ಕುಮಾರಸ್ವಾಮಿ ಮಾತ್ರವಲ್ಲ ಯಾರ ಬಳಿಯೂ ಜಗಳ ಮಾಡಲು ಇಷ್ಟವಿಲ್ಲ. ಜೆಡಿಎಸ್ ಅಥವಾ ಬಿಜೆಪಿಯವರ ಮೇಲೆ ನಾನು ಜಗಳ ಮಾಡುವುದಿಲ್ಲ. ನನ್ನದು ಸಿದ್ಧಾಂತದ ಆಧಾರಿತ ಹೋರಾಟ. ಪಕ್ಷದ ನಾಯಕರ ವಿರುದ್ಧವಲ್ಲ. ಪಕ್ಷದ ಸಿದ್ಧಾಂತದ ವಿರುದ್ಧ ಹೋರಾಡುತ್ತೇನೆ.
* ಆರ್.ಆರ್. ನಗರದಲ್ಲಿ ಜೆಡಿಎಸ್ ನಾಯಕರನ್ನೆಲ್ಲಾ ಸೆಳೆದು ಜೆಡಿಎಸ್ ಮುಗಿಸುತ್ತಿದ್ದೀರಿ ಎಂಬ ಆರೋಪವಿದೆ?
ನಾನು ಯಾರನ್ನೂ ಮುಗಿಸುತ್ತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಬರ ಮಾಡಿಕೊಂಡಿದ್ದೇನೆ ಅಷ್ಟೇ.
* ಎರಡು ಬಾರಿ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರ. ಕಾಂಗ್ರೆಸ್ ನಾಯಕರಿಗೆ ಪ್ರಚಾರಕ್ಕೇ ಬಿಡುತ್ತಿಲ್ಲ ಎಂದು ದೂರು ನೀಡಿದ್ದೀರಿ?
ಬಿಜೆಪಿ ಅಭ್ಯರ್ಥಿ ಬೆಂಬಲಿಗರು ದೌರ್ಜನ್ಯ ತೋರಿಸಲು ಪ್ರಯತ್ನಿಸಿದರು. ಸಿದ್ದರಾಮಯ್ಯ ಅವರ ಬಳಿ ಆ ರೀತಿ ನಡೆದುಕೊಂಡಿದ್ದರು. ನಾವು ಕೂಡಲೇ ಪ್ರತಿಭಟಿಸಿದ್ದೇವೆ ಕಾನೂನು ಕ್ರಮಕ್ಕೂ ಮುಂದಾಗಿದ್ದೇವೆ. ನಮ್ಮ ಹತ್ತಿರ ದೌರ್ಜನ್ಯ ನಡೆಯಲ್ಲ ಸುಮ್ಮನಾಗಿದ್ದಾರೆ.
ಕುಸುಮಾ ಸ್ಪರ್ಧೆಯಿಂದ ಕೈ ಪರ ಅಲೆ ಸೃಷ್ಟಿ: ಸಂಸದ ಡಿ.ಕೆ.ಸುರೇಶ್ .
* ಮುನಿರತ್ನ ಪರ ಮತ ಕೇಳಿದ್ದವರು ನೀವು. ಈಗ ಮತ ಹಾಕಬೇಡಿ ಎನ್ನುತ್ತಿದ್ದೀರಿ?
ನಾನಲ್ಲ. ಪ್ರಧಾನಮಂತ್ರಿ ನರೇಂದ್ರಮೋದಿ ಅವರೇ ಬಂದು ಈಗಿನ ಬಿಜೆಪಿ ಅಭ್ಯರ್ಥಿ ವಿರುದ್ಧ ದೊಡ್ಡ ಆರೋಪ ಮಾಡಿದ್ದರು. ಈಗಿನ ಮುಖ್ಯಮಂತ್ರಿಗಳೇ ರಾಜ್ಯಪಾಲರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಪ್ರಕರಣ ಹಿಂಪಡೆದಿದ್ದು ಏಕೆ ಕೇಳಿ. ಅದು ಮಾತ್ರವಲ್ಲ ಮುನಿರತ್ನ ಬಿಜೆಪಿಯ 1,700 ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮುನಿರತ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಬಳಿಕವಾದರೂ ಬಿಜೆಪಿಯವರ ಮೇಲಿನ ಪ್ರಕರಣ ಹಿಂಪಡೆಯಬಹುದಿತ್ತು. ಆದರೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆದಿಲ್ಲ. ಅವರು ನೀಡಿರುವ ಕಿರುಕುಳದಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಮುನಿರತ್ನ ಪರ ಇಲ್ಲ.
ಬಿಜೆಪಿ ಅಭ್ಯರ್ಥಿ ಪರ 'ಡಿ' ಬಾಸ್ ಪ್ರಚಾರ: ಡಿಕೆಶಿ ಹೇಳಿದ್ದು ಹೀಗೆ...! ...
* ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಕಣ್ಣೀರ ಮತಯಾಚನೆಯಲ್ಲಿ ತೊಡಗಿದ್ದಾರೆ. ವ್ಯತ್ಯಾಸವೇನು?
ಮುನಿರತ್ನ ಹಾಗೂ ಕುಸುಮಾ ಇಬ್ಬರ ಕಣ್ಣೀರಿಗೂ ಸಾಕಷ್ಟು ವ್ಯತ್ಯಾಸವಿದೆ. ಮುನಿರತ್ನದು ಸಿನಿಮಾ ಕಣ್ಣೀರು. ಕುಸುಮಾ ಅವರದ್ದು ಹೃದಯಕ್ಕೆ ನೋವಾದ ಕಣ್ಣೀರು. ಈ ವ್ಯತ್ಯಾಸ ಜನರಿಗೆ ಅರ್ಥವಾಗಿದೆ.
* ಶಿರಾದಲ್ಲಿ ಕಾಂಗ್ರೆಸ್‌ನ ಆಂತರಿಕ ತಿಕ್ಕಾಟ ಬಗೆಹರಿದೆಯಾ?
ಹೌದು, ನಾನೇ ತುಮಕೂರು ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಕರೆದು ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗಲು ಸೂಚಿಸಿದ್ದೆ. ಸಭ್ಯ ಹಾಗೂ ಅನುಭವಿ ನಾಯಕರಾದ ಟಿ.ಬಿ. ಜಯಚಂದ್ರ ಅವರಿಗೆ ಟಿಕೇಟ್ ನೀಡಿದ್ದೇವೆ. ಹೀಗಾಗಿ ಅಲ್ಲಿ ಗೆಲುವು ನಿಶ್ಚಿತ.
* ಉಪ ಚುನಾವಣೆ ಹೊಸ್ತಿಲಲ್ಲೇ ಸಿಬಿಐ ದಾಳಿ ಆಯಿತಲ್ಲಾ?
ಇದು ಮಾತ್ರವಲ್ಲ ಇನ್ನೂ ಆಗುತ್ತಲೇ ಇರುತ್ತದೆ. ಕಿರುಕುಳ ನೀಡುವುದೇ ಬಿಜೆಪಿ ಆಸ್ತಿ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾವು ಹೋರಾಟ ಮಾಡುತ್ತೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.