ಬೆಂಗಳೂರಿನ ಆರ್.ಆರ್.ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣ್ಣೀರಿನ ರಾಜಕೀಯ ಶುರುವಾಗಿದ್ದು, ಡಿಕೆ ಶಿವಕುಮಾರ್ ಅವರು ಮುನಿರತ್ನ ಹಾಗೂ ಕುಸುಮಾ ಅವರ ಕಣ್ಣೀರಿನ ವ್ಯತ್ಯಾಸವನ್ನು ತಿಳಿಸಿದ್ದಾರೆ.
ಬೆಂಗಳೂರು, (ಅ.29): ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ತಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ವ್ಯಥೆಪಟ್ಟು ಕಣ್ಣೀರು ಹಾಕಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚರ್ಚ್‍ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸುಮಾ ಅವರ ಕಣ್ಣೀರೇ ಬೇರೆ, ಮುನಿರತ್ನ ಅವರ ಕಣ್ಣೀರೇ ಬೇರೆ. ಕುಸುಮಾ ಅವರು ತಮ್ಮ ಜೀವನದಲ್ಲಿ ನೊಂದು-ಬೆಂದು ಆ ಸಂಕಟಕ್ಕಾಗಿ ಕಣ್ಣೀರು ಹಾಕಿದ್ದಾರೆ. ಮುನಿರತ್ನ ಅವರ ಕಣ್ಣೀರಿಗೆ ಬಹುಶಃ ಅವರ ಆತ್ಮಸಾಕ್ಷಿಯೇ ಕಾರಣ ಇರಬಹುದು ಎಂದರು.
ನಾನು ವೋಟ್‌ಗಾಗಿ ಕಣ್ಣೀರು ಹಾಕಿಲ್ಲ, ತಾಯಿಗಾಗಿ ಕಣ್ಣೀರು ಹಾಕಿದೆ: ಮುನಿರತ್ನ
ಈ ಹಿಂದೆ ಕಾಂಗ್ರೆಸ್ ಪಕ್ಷವೇ ನನ್ನ ಉಸಿರು, ಜೀವ ಎಂದು ಹೇಳಿದ್ದರು. ಅದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುನಿರತ್ನ ವಿರುದ್ಧ ಕೇಸು ದಾಖಲಿಸಿದ್ದಾರೆ. ಪ್ರಧಾನಮಂತ್ರಿಯವರು ಮುನಿರತ್ನ ವಿರುದ್ಧ ಭಾಷಣ ಮಾಡಿದ್ದಾರೆ. ಇದನ್ನೆಲ್ಲಾ ನೆನಪಿಸಿಕೊಂಡು ನಾನು ಮನಃಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇನೆ ಎಂಬ ನೋವಿನಿಂದ ಮುನಿರತ್ನ ಕಣ್ಣೀರು ಹಾಕಿರಬಹುದು. ಏನೇ ಆದರೂ ಮುನಿರತ್ನ ಒಳ್ಳೆಯ ನಟ, ನಿರ್ಮಾಪಕ ಎಂದು ಕುಟುಕಿದರು.
ಬಿಜೆಪಿಯವರ ಪ್ರಶ್ನೆಗಿಂತಲೂ ಮೊದಲು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಸದಾನಂದಗೌಡರು ಮಾಡಿರುವ ಭಾಷಣಕ್ಕೆ ಈಗಲೂ ಬಿಜೆಪಿ ನಾಯಕರು ಬದ್ಧರಾಗಿದ್ದಾರೆಯೇ ಅಥವಾ ಬದಲಾವಣೆಯಾಗಿದ್ದಾರೆಯೇ ಎಂಬುದಕ್ಕೆ ಉತ್ತರ ನೀಡಲಿ. ಪ್ರಮುಖವಾಗಿ ಆ ವಿಷಯ ಚರ್ಚೆಯಾಗಲಿ ಎಂದು ಹೇಳಿದರು.