ಡಬ್ಬಲ್ ಎಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ, ರಾಜ್ಯಪಾಲರ ಭಾಷಣಕ್ಕೆ ಸಿದ್ದು ಕೆಂಡ

Published : Feb 14, 2022, 07:27 PM IST
ಡಬ್ಬಲ್ ಎಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ, ರಾಜ್ಯಪಾಲರ ಭಾಷಣಕ್ಕೆ ಸಿದ್ದು ಕೆಂಡ

ಸಾರಾಂಶ

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಅವರ ಭಾಷಣ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿದೆ ಎಂದ ಸಿದ್ದರಾಮಯ್ಯ

ಬೆಂಗಳೂರು, (ಫೆ.14): ಇಂದು(ಸೋಮವಾರ) ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಅವರ ಭಾಷಣ ಮಂಡಿಸಿದ್ದಾರೆ. ರಾಜ್ಯಪಾಲರ ಭಾಷಣ ಅಂದರೆ ಸರ್ಕಾರ ಬರೆದುಕೊಡುವ ಪದ್ಧತಿ. ಅವರ ಭಾಷಣ ಮೂಲಕ ರಾಜ್ಯಪಾಲರ ಮತ್ತು ಜನರ ದಿಕ್ಕು ತಪ್ಪಿಸಿದ್ದಾರೆ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಡಬ್ಬಲ್ ಎಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ. ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ನಾಡಿನ ಜನರ ದಿಕ್ಕು ತಪ್ಪಿಸಿದೆ. ರಾಜ್ಯಪಾಲರ ಭಾಷಣ ಕೇಳಿದರೆ ಈ ಸರ್ಕಾರಕ್ಕೆ ಯಾವ ಗೊತ್ತು ಗುರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

60 ದಿನ ಕಲಾಪ ನಡೆಸಲು ಸರ್ಕಾರಕ್ಕೆ ಹೊರಟ್ಟಿ ಸೂಚನೆ

ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಇಂದಿನ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವೇ ಇಲ್ಲ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ.   ಸರ್ಕಾಗಳಿಗೆ ತನ್ನದೇ ಆದ ಆದ್ಯತೆಗಳಿರುತ್ತವೆ. ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ  ಕಾರ್ಯಕ್ರಮಗಳಿಗೆ ಒತ್ತು ಕೊಡುವುದಾಗಿದೆ. ಈ ಸರ್ಕಾರ ಸಂಪೂರ್ಣವಾಗಿ ಇವೆರಡನ್ನೂ ಮರೆತಿದೆ ಎಂದು ಸ್ಪಷ್ಟವಾಗುತ್ತಿದೆ ಎಂದರು. 

ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ. 
ರಾಜ್ಯಪಾಲರ ಭಾಷಣದಲ್ಲಿ 116 ಪ್ಯಾರಾಗಳಿವೆ. ಅದರಲ್ಲಿ 23 ಪ್ಯಾರಾಗಳು ಕೋವಿಡ್ ಮತ್ತು ಪ್ರವಾಹಕ್ಕೆ ಸಂಬಂಧಪಟ್ಟಿವೆ. ಇನ್ನುಳಿದಂತೆ ಸುಮಾರು 30 ಪ್ಯಾರಾಗಳು ಹಳೆಯ ಭರವಸೆಗಳಾಗಿವೆ. ಬಾಕಿ ಉಳಿದವು ನಮ್ಮ ಸರ್ಕಾರದ ಸಾಧನೆಗಳು ಮತ್ತು ಹೆಸರು ಬದಲಿಸಿದ ಯೋಜನೆಗಳ ಮಾಹಿತಿ ಎಂದು ಹೇಳಿದರು.

ರಾಜ್ಯಪಾಲರ ಭಾಷಣದ ಮೂಲಕ ಈ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದವರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು, ರೈತರು, ಕುಶಲ ಕರ್ಮಿಗಳು, ಸಣ್ಣ ಮಧ್ಯಮ ಸೂಕ್ಷ್ಮ ಕೈಗಾರಿಕೆಗಳನ್ನು ನಡೆಸುವವರು, ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರಿಗೆ ಏನನ್ನೂ ಮಾಡಿಲ್ಲ ಎಂಬುದನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ, ನಿರುದ್ಯೋಗವನ್ನು ಪರಿಹರಿಸಲು ಈ ಸರ್ಕಾರ ಏನನ್ನೂ ಮಾಡಿಲ್ಲ. ಕಲ್ಯಾಣ ಕರ್ನಾಟಕ ಮಂಡಳಿಗೆ ಸಂಬಂಧಪಟ್ಟ ಹಾಗೆ ಹೆಸರು ಬದಲಾಯಿಸಿದ್ದು, ಕಛೇರಿ ಸ್ಥಳಾಂತರಿಸಿದ್ದನ್ನೆ ಸಾಧನೆ ಎಂದು ಹೇಳಿಕೊಂಡಿದೆ.
ನೀರಾವರಿ ಯೋಜನೆಗಳು ಮೂಲೆ ಗುಂಪಾಗಿದೆ. ಗ್ರಾಮ ಒನ್ ಬಗ್ಗೆ ಭರ್ಜರಿ ಪ್ರಚಾರ ತೆಗೆದುಕೊಳ್ಳುತ್ತಿರುವುದು ಮಾತ್ರವಲ್ಲ ರಾಜ್ಯಪಾಲರ ಬಾಯಲ್ಲೂ ಹೇಳಿಸಿದ್ದಾರೆ, ಆದರೆ ಈ ಯೋಜನೆ ನಮ್ಮ ಸರ್ಕಾರದ  ಬಾಪೂಜಿ ಸೇವಾ ಕೇಂದ್ರಗಳ ನಕಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಅಮೃತ ಗ್ರಾಮ ಪಂಚಾಯತಿ ಯೋಜನೆ ಅಡಿ ಗ್ರಾಮ ಪಂಚಾಯತಿಗಳಿಗೆ 25 ಲಕ್ಷ ಕೊಡುವುದನ್ನೆ ಸರ್ಕಾರ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ನಮ್ಮ ಸರ್ಕಾರ ಇದ್ದಾಗ ಸಾವಿರ ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿದ್ದೆವು. 
ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಕ್ಸಿಜನ್, ಆಂಬುಲೆನ್ಸ್, ಔಷಧಿ, ವೆಂಟಿಲೇಟರ್ ಸೌಲಭ್ಯ ಸಿಗದೆ ಲಕ್ಷಾಂತರ ಜನ ಮರಣ ಹೊಂದಿದರು. ಈ ಸಾವುಗಳ ಬಗೆಗೆ ಒಂದು ಸಣ್ಣ ಪಶ್ಚಾತ್ತಾಪವೂ ಬಿಜೆಪಿ ಸರ್ಕಾರಕ್ಕೆ ಇಲ್ಲ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಅವರು ಸಾಯುವಂತೆ ಮಾಡಿದ್ದನ್ನೇ ಸಾಧನೆ ಎಂದು ಹೇಳುವುದಾದರೆ ಮರಣ ಹೊಂದಿದ ನಾಲ್ಕು ಲಕ್ಷ ದುರ್ದೈವಿಗಳ ಆತ್ಮಗಳಿಗೆ ಏನನ್ನಿಸಬೇಡ? ಎಂದು ಪ್ರಶ್ನಿಸಿದರು.

ತಂದೆ-ತಾಯಿಯರನ್ನು, ದುಡಿಯುವ ಮಕ್ಕಳನ್ನು, ಗಂಡ ಹೆಂಡತಿಯರನ್ನು ಕಳೆದುಕೊಂಡು ಅನಾಥರಾಗಿರುವ ಕುಟುಂಬದ ಸದಸ್ಯರುಗಳಿಗೆ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಅವಮಾನ ಮಾಡಿದೆ. ಪತ್ರಕರ್ತರಿಗೆ ಮಾನ್ಯತೆ ಪತ್ರ ಹಾಗೂ ಬಸ್ ಪಾಸ್ ಸೌಲಭ್ಯವನ್ನು ಈ ಹಿಂದಿನಿಂದಲೂ ಒದಗಿಸಲಾಗುತ್ತಿದೆ. ಆದರೂ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಇದು ತನ್ನ ಸಾಧನೆ ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಎಂದು ವ್ಯಂವ್ಯವಾಡಿದರು.

ಇಂದು ರೈತರಾದಿಯಾಗಿ ಸಮಸ್ತ ದುಡಿಯುವ ವರ್ಗದ ಜನ, ದಲಿತರು ಮತ್ತು ಮಹಿಳಾ ಸಮುದಾಯ ಎಲ್ಲರೂ ಭೀಕರ ಸಂಕಷ್ಟದಲ್ಲಿದ್ದಾರೆ ಎಂಬುದು ಈ ಸರ್ಕಾರಕ್ಕೆ ಇನ್ನೂ ಮನದಟ್ಟಾಗಿಲ್ಲವೋ ಅಥವಾ ಉದ್ದೇಶಪೂರ್ವಕವಾಗಿಯೇ ಈ ವರ್ಗಗಳನ್ನು ಸರ್ಕಾರ ದಮನ ಮಾಡುತ್ತಿದೆಯೋ? ನಾನು ನನ್ನ ರಾಜಕೀಯ ಜೀವನದಲ್ಲೇ ಇಷ್ಟೊಂದು ಕೆಟ್ಟದಾದ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಅರ್ಥವಾಗಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌