2023ರ ವಿಧಾನಸಭೆ ಚುನಾವಣೆ ಬಳಿಕ ವೀರಶೈವ-ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನ ನೀಡುವ ಕುರಿತು ಹೋರಾಟ ರೂಪಿಸಲಾಗುವುದು. ಎಲ್ಲ ಮಠಾಧೀಶರನ್ನು ಒಟ್ಟಾಗಿ ಸೇರಿಸಿಕೊಂಡು ಹೋರಾಟ ರೂಪಿಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದ್ದಾರೆ.
ಹುಬ್ಬಳ್ಳಿ (ಆ.21): 2023ರ ವಿಧಾನಸಭೆ ಚುನಾವಣೆ ಬಳಿಕ ವೀರಶೈವ-ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನ ನೀಡುವ ಕುರಿತು ಹೋರಾಟ ರೂಪಿಸಲಾಗುವುದು. ಎಲ್ಲ ಮಠಾಧೀಶರನ್ನು ಒಟ್ಟಾಗಿ ಸೇರಿಸಿಕೊಂಡು ಹೋರಾಟ ರೂಪಿಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದ್ದಾರೆ. ಜತೆಗೆ ಈ ಹಿಂದೆ ಕೂಡ ನಾವು ಧರ್ಮ ಒಡೆಯುವ ಕೆಲಸ ಮಾಡಿಲ್ಲ; ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಈ ನಿಟ್ಟಿನಲ್ಲಿ ಮತ್ತೆ ಹೋರಾಟ ಮಾಡುತ್ತೇವೆ.
ಆದರೆ 2023ರ ಚುನಾವಣೆ ಬಳಿಕ ಎಲ್ಲ ಮಠಾಧೀಶರು, ವಿರಕ್ತಮಠ, ಪಂಚಪೀಠಾಧಿಪತಿಗಳು, ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುತ್ತೇವೆ. ಎಲ್ಲರನ್ನು ಒಟ್ಟಾಗಿ ಸೇರಿಸಿ ಚರ್ಚೆ ಮಾಡುತ್ತೇವೆ. ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಪ್ರಯತ್ನ ಮಾಡುತ್ತೇವೆ ಎಂದರು. ಅದು ಒಂದೇ ಸಲಕ್ಕೆ ಸಿಗುವುದೂ ಇಲ್ಲ. ಒಂದು ವರ್ಷ ಹೋಗುತ್ತದೆಯೋ, ಐದು ವರ್ಷ ಹೋಗುತ್ತದೆಯೋ ಗೊತ್ತಿಲ್ಲ. ಅದರಲ್ಲಿ ನಾವು ಯಶಸ್ವಿಯಾಗುತ್ತೇವೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಎಷ್ಟುಬೇಕಾದರೂ ಸಮಯ ಹೋಗಲಿ.
ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡದಂತೆ ರಾಹುಲ್ ಗಾಂಧಿ ಸೂಚನೆ: ಎಂ.ಬಿ.ಪಾಟೀಲ್
ಆದರೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಒಮ್ಮತದ ಅಭಿಪ್ರಾಯದೊಂದಿಗೆ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳಿಗೂ ಸೌಲಭ್ಯ ಸಿಗಬೇಕು ಎಂದು ಹೋರಾಟ ಮಾಡುತ್ತೇವೆ ಎಂದು ಪುನರುಚ್ಛರಿಸಿದರು. ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಹೆಚ್ಚಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದಲ್ಲಿ ಲಿಂಗಾಯತ ಸಮಾಜದ 99 ಉಪಪಂಗಡಗಳಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಶೈಕ್ಷಣಿಕ, ಉದ್ಯೋಗ ಸೇರಿದಂತೆ ಎಲ್ಲ ರಂಗದಲ್ಲೂ ಸೌಲಭ್ಯಗಳು ದೊರೆಯಬೇಕು ಎಂದು ಎಂ.ಬಿ. ಪಾಟೀಲ ಹೇಳಿದರು.
ಸಿದ್ದುಗೆ ಸ್ಪಷ್ಟನೆ ಕೇಳಿ: ಧರ್ಮ ಒಡೆಯುವ ಕೆಲಸ ಮಾಡಿದ್ದಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರಂತೆ ಎಂಬ ಪ್ರಶ್ನೆಗೆ, ಅವರು ರಂಭಾಪುರಿ ಶ್ರೀಗಳನ್ನು ಭೇಟಿಯಾಗಿದ್ದಾರೆ. ಆದರೆ ಅವರಿಬ್ಬರ ನಡುವೆ ಏನೇನು ಮಾತುಕತೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಆ ಬಗ್ಗೆ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ಹೇಳಬೇಕು. ಆದರೆ ನಾವು ಆಗ ಧರ್ಮ ಒಡೆಯುವ ಕೆಲಸ ಮಾತ್ರ ಮಾಡಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಉದ್ಯೋಗ, ಶೈಕ್ಷಣಿಕ ಸೌಲಭ್ಯ ಸಿಗಬೇಕು. ಸಮಾಜಕ್ಕೆ ಒಳ್ಳೆಯದಾಗಬೇಕು ಎಂಬ ಕಾರಣಕ್ಕಾಗಿ ಆ ಪ್ರಯತ್ನ ಮಾಡಲಾಗಿತ್ತಷ್ಟೇ ಎಂದರು. ಆಗ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗದ ಕಾರಣ ಪಂಚಮಸಾಲಿ ಸಮಾಜದವರು 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಜಂಗಮರು ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ಹೋರಾಟಕ್ಕಿಳಿದಿದ್ದಾರೆ ಎಂದು ನುಡಿದರು.
ಇಬ್ಬರದು ತಪ್ಪು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆಎಸೆದಿರುವುದು ಚಿಲ್ಲರೆ ಕೆಲಸ. ಅವರು ಮೊಟ್ಟೆಎಸೆದರು ಎಂದು ನಮ್ಮವರು ಸಾವರ್ಕರ್ ಭಾವಚಿತ್ರಕ್ಕೆ ಸುಟ್ಟಿದ್ದು ತಪ್ಪು. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಹಾಗಂತ ಅವರು ಮೊಟ್ಟೆಎಸೆಯುವುದು. ಇವರು ಭಾವಚಿತ್ರ ಸುಡುವುದು ಸರಿಯಲ್ಲ. ಯಾರೂ ಈ ರೀತಿ ಮಾಡಬಾರದು ಎಂದರು. ಸಾವರ್ಕರ್ ಜೈಲಲ್ಲಿ ಇದ್ದಾಗ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಅದು ಬೇರೆ ವಿಚಾರ. ಆದರೆ ಅವರ ಭಾವಚಿತ್ರ ಸುಡುವುದು ಸರಿಯಲ್ಲ ಎಂದು ನುಡಿದರು. ಬಿಜೆಪಿ, ಆರ್‌ಎಸ್‌ಎಸ್‌ಗೆ ಸಂವಿಧಾನ, ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ.
ಮಾಜಿ ಸಚಿವ MB Patil ಮನೆಯಲ್ಲಿ ವಾಚ್, ವಿದೇಶಿ ಕರೆನ್ಸಿ ಕದ್ದ ಕೆಲಸಗಾರ!
ಆರ್‌ಎಸ್‌ಎಸ್ ಕಚೇರಿ ಮೇಲೆ 52 ವರ್ಷ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಏನು ಎನ್ನುವುದನ್ನು ಕಾಂಗ್ರೆಸ್ ಕಲಿಯಬೇಕಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಎಂ.ಬಿ. ಪಾಟೀಲ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ವಿಪ ಮಾಜಿ ಸದಸ್ಯರಾದ ನಾಗರಾಜ ಛಬ್ಬಿ, ವೀರಣ್ಣ ಮತ್ತಿಕಟ್ಟಿ, ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಮುಖಂಡರಾದ ಪ್ರಕಾಶಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.