
ಬೆಂಗಳೂರು (ಆ.21): ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳ ಮುಂದೆ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರೂ ಜಗತ್ತಿಗೆ ಸತ್ಯ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಮಾತುಕತೆ ಅವರಿಬ್ಬರಿಗೆ ಮಾತ್ರ ಗೊತ್ತಿದ್ದು, ಅವರು ಈಗ ಪಶ್ಚಾತ್ತಾಪದ ಬಗ್ಗೆ ಮಾತನಾಡಿದ್ದರೂ ಸತ್ಯ ಜಗತ್ತಿಗೆ ಗೊತ್ತು ಎಂದರು.
ಸಿದ್ದರಾಮಯ್ಯ ಮತ್ತು ಜಗದ್ಗುರುಗಳ ನಡೆದ ಸಂಭಾಷಣೆ ಅದು. ರಂಭಾಪುರಿ ಪೀಠದ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಶ್ಚಾತ್ತಾಪವಾಗಿದೆ ಎಂದು ಹೇಳಿದ್ದಾರೆಂದು ಶ್ರೀಗಳು ತಿಳಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರೂ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಇಬ್ಬರ ನಡುವಿನ ಮಾತುಕತೆ ಬಗ್ಗೆ ನಾನು ಮಾತನಾಡಿದರೆ ಬೇರೆಯದೇ ಅರ್ಥವಾಗುತ್ತದೆ. ಆದ ಕಾರಣ ಏನೂ ಹೇಳುವುದಿಲ್ಲ. ಆದರೆ ಆ ಸಂದರ್ಭದಲ್ಲಿ ಏನು ನಡೆಯಿತು ಎಂಬುದು ಎಲ್ಲರಿಗೂ ಗೊತ್ತು ಎಂದು ತಿಳಿಸಿದರು.
ಸಿದ್ದುಗೆ ಮೊಟ್ಟೆ ಎಸೆತ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಧರ್ಮ ವಿಚಾರದಲ್ಲಿ ಪಶ್ಚಾತ್ತಾಪವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಲಿಂಗಾಯತ ಧರ್ಮದ ವಿಚಾರದಲ್ಲಿ ಏನಾಯಿತು ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ. ಗುರುಗಳು ಶುಕ್ರವಾರ ಒಂದು ಹೇಳಿದ್ದು, ಶನಿವಾರ ಒಂದು ಹೇಳಿದ್ದಾರೆ. ಅವರಿಬ್ಬರ ನಡುವೆ ಏನು ಸಂಭಾಷಣೆ ನಡೆದಿದೆ ಎನ್ನುವುದು ಗೊತ್ತಿಲ್ಲ ಎಂದು ನುಡಿದರು.
ಎಲ್ಲಾ ಸರ್ಕಾರಿ ಯೋಜನೆಗಳನ್ನೂ ಡಿಬಿಟಿ ವ್ಯಾಪ್ತಿಗೆ ತನ್ನಿ: ರಾಜ್ಯದಲ್ಲಿ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗೆ ತಲುಪಿಸುವ ನೇರ ನಗದು ವರ್ಗಾವಣೆ (ಡಿಬಿಟಿ) ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಈ ವೇದಿಕೆಯನ್ನು ಇನ್ನಷ್ಟುಬಲಪಡಿಸಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾಧ್ಯವಿರುವ ಎಲ್ಲ ಯೋಜನೆಗಳನ್ನೂ ಡಿಬಿಟಿ ವ್ಯಾಪ್ತಿಗೆ ತರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ‘ಗ್ರಾಮ ಒನ್’ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಗ್ರಾಮ ಒನ್ ಅಡಿ ಸೇರ್ಪಡೆಗೊಳಿಸುವಂತೆ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇ-ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.ಬಿ.ಟಿ. ವೇದಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ.
ಜನೋತ್ಸವ ಮತ್ತೆ ಮುಂದೂಡಿಕೆ: ಗಣೇಶ ಹಬ್ಬದ ಬಳಿಕ ಆಚರಣೆಗೆ ಪಕ್ಷದ ನಿರ್ಧಾರ
2021-22 ರಲ್ಲಿ 1.76 ಕೋಟಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ 3.53 ಕೋಟಿ ವ್ಯವಹಾರ (ಟ್ರಾನ್ಸಾಕ್ಷನ್ಸ್) ಮಾಡಿದ್ದು, 11,708.75 ಕೋಟಿ ರು. ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. 2022-23ನೇ ಸಾಲಿನಲ್ಲಿ ಈ ವರೆಗೆ 62.87 ಲಕ್ಷ ಫಲಾನುಭವಿಗಳಿಗೆ 3114.55 ಕೋಟಿ ರು. ವರ್ಗಾಯಿಸಲಾಗಿದೆ. ಡಿಬಿಟಿ ವೇದಿಕೆಯನ್ನು ಇನ್ನಷ್ಟು ಬಲಪಡಿಸಿ, ಇತ್ತೀಚೆಗೆ ನೇಕಾರರ ಮಕ್ಕಳಿಗೂ ವಿಸ್ತರಿಸಿರುವ ವಿದ್ಯಾನಿಧಿ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾಧ್ಯವಿರುವ ಎಲ್ಲ ಯೋಜನೆಗಳನ್ನು ಡಿಬಿಟಿ ವ್ಯಾಪ್ತಿಗೆ ತರುವಂತೆ ಸೂಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.