ಲಿಂಗಾಯತರನ್ನು ಬಳಸಿಕೊಂಡು ಕೈ ಬಿಡುವುದೇ ಬಿಜೆಪಿ ಹಿಡನ್‌ ಅಜೆಂಡಾ: ಎಂ.ಬಿ.ಪಾಟೀಲ

By Kannadaprabha NewsFirst Published Apr 23, 2023, 9:00 PM IST
Highlights

ಒಬ್ಬ ಲಿಂಗಾಯತ ಹಿರಿಯ ಮುತ್ಸದ್ದಿ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಹಿಡನ್‌ ಅಜೆಂಡಾ ಬಯಲಾಗಿದೆ ಎಂದು ಹೇಳಿದ ಎಂ.ಬಿ.ಪಾಟೀಲ. 

ವಿಜಯಪುರ(ಏ.23):  ಲಿಂಗಾಯತರನ್ನು ರಾಜಕೀಯ ಉನ್ನತಿಗೆ ಬಳಸಿಕೊಂಡು ಕೈ ಬಿಡುವುದೇ ಬಿಜೆಪಿ ಹಿಡನ್‌ ಅಜೆಂಡಾ ಆಗಿದೆ. ಇದರಿಂದಾಗಿ ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ವಾತಾವರಣದಿಂದ ಆತಂಕಕ್ಕೀಡಾಗಿ ಮರಳಿ ಕಾಂಗ್ರೆಸ್‌ ಮನೆಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ಬಿಜೆಪಿ ದಮನ ಮಾಡುತ್ತಿದೆ. ಈಗ ವೀರೇಂದ್ರ ಪಾಟೀಲರ ಹೆಸರನ್ನು ಪ್ರಸ್ತಾಪಿಸುತ್ತಿದೆ. ವೀರೇಂದ್ರ ಪಾಟೀಲರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿತ್ತು. ಹಾಗಾಗಿ ಬದಲಾಯಿಸಲಾಯಿತು ಎಂದು ಕಾಂಗ್ರೆಸ್‌ ನಡೆಯನ್ನು ಸಮರ್ಥಿಸಿಕೊಂಡರು.

Latest Videos

ಕಾರ್ಯಕರ್ತನ ಮೇಲೆ ಎಂ.ಬಿ. ಪಾಟೀಲ್‌ ದರ್ಪ: ಯುವಕನಿಗೆ ಕಪಾಳ ಮೋಕ್ಷ

ವೀರೇಂದ್ರ ಪಾಟೀಲ ಮುಖ್ಯಮಂತ್ರಿ ಆಗಿದ್ದಾಗ ಕಾರ್ಯನಿರ್ವಹಿಸಲು ತೊಂದರೆಯಾದ ಕಾರಣ ರಾಜ್ಯದ ಹಿತದೃಷ್ಟಿಯಿಂದ ಅವರನ್ನು ಬದಲಾಯಿಸಲಾಯಿತು. ಆದರೆ, ಯಡಿಯೂರಪ್ಪನವರಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಆಪರೇಷನ್‌ ಕಮಲ ಮಾಡಿಸಲು ಯಡಿಯೂರಪ್ಪನವರಿಗೆ ಪ್ರೋತ್ಸಾಹಿಸಿ ಅವರಿಗೆ ಕೆಟ್ಟ ಹೆಸರು ತಂದು ನಂತರ ಅವರನ್ನು ಕೈಬಿಡಲಾಯಿತು. ಒಬ್ಬ ಲಿಂಗಾಯತ ಹಿರಿಯ ಮುತ್ಸದ್ದಿ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಹಿಡನ್‌ ಅಜೆಂಡಾ ಬಯಲಾಗಿದೆ ಎಂದು ಹೇಳಿದರು.

ಆಗಿನ ಪರಿಸ್ಥಿತಿಗೆ ಹೆದರಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿಗೆ ಆಗಿರುವ ಪರಿಸ್ಥಿತಿ ಬಸವರಾಜ ಬೊಮ್ಮಾಯಿ ಅವರಿಗೂ ಬರಲಿದೆ. ಬಿಜೆಪಿ ಹಿಡನ್‌ ಅಜೆಂಡಾ ಈಗ ಸ್ಪಷ್ಟವಾಗುತ್ತಾ ಸಾಗಿದೆ ಎಂದರು.

ದಾರಿ ತಪ್ಪಿಸುತ್ತಿದೆ ಬಿಜೆಪಿ:

ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಎಐಸಿಸಿಯಿಂದ ವೀಕ್ಷಕರು ಆಗಮಿಸುತ್ತಾರೆ. ಎಲ್ಲ ಶಾಸಕರ ಒಟ್ಟಾಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾ ಬರಲಾಗುತ್ತಿದೆ. ಈ ಸಂಪ್ರದಾಯ ಜನರಿಗೂ ಗೊತ್ತಿದೆ. ಆದರೂ ಬಿಜೆಪಿ ಈ ವಿಷಯದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಹಿಡನ್‌ ಅಜೆಂಡಾ ಬಗ್ಗೆ ಲಿಂಗಾಯತರಿಗೆ ಅರಿವಾಗಿದೆ ಎಂದರು.

ಸಿಎಂ ಹುದ್ದೆಗೆ ನಾನೂ ಸಮರ್ಥ ನಾಯಕ

ನಮ್ಮ ಹೈಕಮಾಂಡ್‌ ಬಯಸಿದರೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಡಾ.ಜಿ.ಪರಮೇಶ್ವರ, ನಾನು, ಕೃಷ್ಣ ಭೈರೇಗೌಡ ಹೀಗೆ ಅನೇಕ ಸಮರ್ಥ ನಾಯಕರಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ನಾನೂ ಒಬ್ಬ ಸಮರ್ಥ ನಾಯಕ ಎಂದು ಹೇಳಬಲ್ಲೆ. ಹೈಕಮಾಂಡ್‌ ಬಯಸಿದರೆ ನಾನೂ ಸಿಎಂ ಆಗಬಹುದು ಎಂದು ಮುಖ್ಯಮಂತ್ರಿ ಆಗುವ ತಮ್ಮ ಮನದಿಂಗಿತವನ್ನು ಬಹಿರಂಗಪಡಿಸಿದರು.

'ಮೋದಿ ಬಂದರೂ ಕ್ಷೇತ್ರದ ಜನ ನನ್ನ ಕೈಬಿಡಲ್ಲ'

ಮಹಾತ್ಮ ಗಾಂಧೀಜಿ, ಇಂದಿರಾಗಾಂಧಿ, ರಾಜೀವ ಗಾಂಧಿ ಅವರು ಅಲಂಕರಿಸಿದ ಹುದ್ದೆಯಲ್ಲಿ ಈಗ ಖರ್ಗೆ ಇದ್ದಾರೆ. ಪಕ್ಷದ ವರಿಷ್ಠರು ಖರ್ಗೆ ಅವರನ್ನು ಮುಖ್ಯಮಂತ್ರಿ ಅಲ್ಲ. ಪ್ರಧಾನಮಂತಿಯನ್ನೇ ಮಾಡಬಹುದು. ಅಷ್ಟುದೊಡ್ಡ ಹುದ್ದೆಯಲ್ಲಿ ಅವರು ಇದ್ದಾರೆ. ಅವರಿಗೆ ಮುಖ್ಯಮಂತ್ರಿ ಸಣ್ಣ ಸ್ಥಾನ. ಆದರೂ ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದು ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!