
ಬೆಂಗಳೂರು (ನ.29) : ರಾಜ್ಯ ರಾಜಕಾರಣದಲ್ಲಿ ಕಳೆದ ಎರಡು ದಿನಗಳಿಂದ ಬಿಜೆಪಿಗೆ ಮಂಡ್ಯದ ರೌಡಿ ಫೈಟರ್ ರವಿ ಸೇರ್ಪಡೆ ಮತ್ತು ಚಾಮರಾಜಪೇಟೆಯಲ್ಲಿ ರೌಡಿಶೀಟರ್ ಸೈಲೆಂಟ್ ರವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿಯದ್ದು ರೌಡಿ ಸಂಸ್ಕೃತಿ ಎಂದು ಕಾಂಗ್ರೆಸ್ ನಾಯಕರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಒಂದು ಕಾಲದಲ್ಲಿ ಕೊತ್ವಾಲ್ ನೆಚ್ಚಿನ ಶಿಷ್ಯರಾಗಿದ್ದವರು ತಿಹಾರ್ ಜೈಲಿನಿಂದ ನೇರವಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರ 'ಆ ದಿನಗಳು' ಮರೆತು ಹೋಗಿದೆಯಾ? ಎಂದು ಟಾಂಗ್ ಕೊಟ್ಟಿದೆ.
ಈ ಬಗ್ಗೆ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣವಾದ ಟ್ವಿಟರ್ ಖಾತೆಯ ಮೂಲಕ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ಮುಂದುವರೆಸಿದೆ. ರಾಜ್ಯದಲ್ಲಿ ಗೂಂಡಾಗಿರಿ, ರೌಡಿಸಂಗಳನ್ನೇ ಮೇರಿಟ್ ಅಂತ ಪರಿಗಣಿಸಿ, ವಿರೋಧದ ನಡುವೆಯೂ ನಲಪಾಡ್ ಇತ್ತೀಚೆಗೆ ರಾಜ್ಯ ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾದರು. ನಿಮಗೆ ಯೂತ್ ಕಾಂಗ್ರೆಸ್ ಅಧ್ಯಕ್ಷರ 'ಆ ದಿನಗಳು' ಮರೆತು ಹೋಗಿದೆಯಾ? ಎಂದು ಪ್ರಶ್ನಿಸಲಾಗಿದೆ.
ಪೊಲೀಸರಿಗೆ ಸಿಗದ ರೌಡಿ ಶೀಟರ್ ಸಂಸದರ ಕಾರ್ಯಕ್ರಮದಲ್ಲಿ ಹಾಜರ್!
ಮುಂದುವರೆದು ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕೊಲೆ ಆರೋಪಿ ವಿನಯ್ ಕುಲಕರ್ಣಿ, ಗೂಂಡಾಗಿರಿಯ ಮೊಹಮ್ಮದ್ ನಲಪಾಡ್ ರಾಜ್ಯ ಕಾಂಗ್ರೆಸ್‌ನ ನಾಯಕರು! ಇಂತಹ ಕಾಂಗ್ರೆಸ್ ರೌಡಿಗಳನ್ನು ಖಂಡಿಸುತ್ತದೆಯಂತೆ! ಮೊದಲು ನಿಮ್ಮ ಪಕ್ಷದ ನಾಯಕರ 'ಆ ದಿನಗಳು' ಹೇಗಿವೆ ಅಂತ ನೋಡಿ. ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪರ ವಿರೋಧಗಳು ವ್ಯಕ್ತವಾಗುತ್ತಿದ್ದು, ಇಂತಹ ಸರ್ಕಾರಗಳು ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ.
ರೌಡಿಶೀಟರ್ ಸೇರ್ಪಡೆ ಬಗ್ಗೆ ಅಶ್ವತ್ಥನಾರಾಯಣ ಸಮರ್ಥನೆ
ನಾನು ಸ್ಪಷ್ಟನೆ ಮಾಡಿಕೊಂಡಿಲ್ಲ: ನಿನ್ನೆ ನಮ್ಮ ಪಕ್ಷ ಸೇರಿಸದವರನ್ನು ನಾನು ಹೆಚ್ಚಿನ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ನಾನು ಪಕ್ಷ ಸೇರಿದ ಮಲ್ಲಿಕಾರ್ಜುನ ಬಗ್ಗೆ ಹೇಳಿದ್ದೇನೆ. ನಾನು ಬೇರೆ ಯಾರನ್ನು ಸಮರ್ಥನೆ ಮಾಡಿಕೊಳ್ಳಲು ವಕ್ತಾರ ಅಲ್ಲ. ಸೈಲೆಂಟ್ ಸುನೀಲ್ ಕಾರ್ಯಕ್ರಮಕ್ಕೂ ಪಾರ್ಟಿಗೂ ಸಂಬಂಧ ಇಲ್ಲ. ಸುನೀಲ್ ರಕ್ತದಾನ ಶಿಬಿರ ಮಾಡಿದ್ದರು. ಆ ಕಾರ್ಯಕ್ರಮಕ್ಕೆ ನಮ್ಮ ಇಬ್ಬರು ಪ್ರತಿನಿಧಿಗಳು ಹೋಗಿದ್ದರು. ನಾವು ಕಾನೂನಿಗೆ ಬೆಲೆ ಕೊಡುತ್ತೇವೆ. ಇದನ್ನೇ ನಮ್ಮ ಪಕ್ಷದ ಅಧ್ಯಕ್ಷರು ಕೂಡ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಪೊಲೀಸ್ ಬಳಿ ಕೇಳಿ. ಕಾನೂನು ಚೌಕಟ್ಟನ್ನು ನಾವು ಪರಿಪಾಲನೆ ಮಾಡುತ್ತೇವೆ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.