MLC Election Result ಮೊದಲ ಬಾರಿಗೆ ಸ್ಪರ್ದಿಸಿ ಗೆದ್ದ 6 ಮಂದಿ, 4ನೇ ಗೆಲುವು ಕಂಡ ಕೋಟ!

By Kannadaprabha News  |  First Published Dec 15, 2021, 4:00 AM IST
  • ಸೂರಜ್‌ ರೇವಣ್ಣ ಸೇರಿದಂತೆ ಆರು ಮಂದಿ ಇದೇ ಮೊದಲ ಬಾರಿ ಸ್ಪರ್ಧೆ
  • ನಾಲ್ಕನೇ ಬಾರಿ ಗೆದ್ದ ಸಿಂಪಲ್ ಸಚಿವ ಕೋಟಾ ಶ್ರೀನಿವಾಸ್‌
  • ರೋಚಕ ಮೈಸೂರು ಫಲಿತಾಂಶ, ಇಬ್ಬರ ಬಿಟ್ಟು 3ನೇ ವ್ಯಕ್ತಿಗೆ ಗೆಲುವು

ಬೆಂಗಳೂರು(ಡಿ.15): ಈ ಬಾರಿಯ ವಿಧಾನ ಪರಿಷತ್‌(MLC Election) ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಎಚ್‌.ಡಿ.ರೇವಣ್ಣ ಅವರ ಪುತ್ರ ಸೂರಜ್‌ ರೇವಣ್ಣ(suraj revanna) ಸೇರಿದಂತೆ ಆರು ಮಂದಿ ಇದೇ ಮೊದಲ ಬಾರಿಗೆ ಪಕ್ಷದ ಚಿನ್ನೆಯಡಿ ಚುನಾವಣೆ ಎದುರಿಸಿ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಹಾಸನದಲ್ಲಿ ಸೂರಜ್‌ ರೇವಣ್ಣ, ಮಂಡ್ಯದಲ್ಲಿ ದೀನೇಶ್‌ ಗೂಳಿಗೌಡ, ಶಿವಮೊಗ್ಗದಲ್ಲಿ ಡಿ.ಎಸ್‌.ಅರುಣ್‌, ಬೆಳಗಾವಿಯಲ್ಲಿ ಚನ್ನರಾಜ ಹಟ್ಟಿಹೊಳಿ, ಬಳ್ಳಾರಿಯಲ್ಲಿ ಎಂ.ವೈ.ಸತೀಶ್‌ ಹಾಗೂ ಬೀದರ್‌ನಲ್ಲಿ ಭೀಮರಾವ್‌ ಪಾಟೀಲ್‌ ಅವರಿಗೆ ಇದೇ ಮೊದಲ ಪಕ್ಷಾಧಾರಿತ ಚುನಾವಣೆ ಹಾಗೂ ಮೊದಲ ಗೆಲುವು.

ಡಿಸಿಸಿ ಬ್ಯಾಂಕ್‌ನಂಥ ಚುನಾವಣೆಗಳನ್ನು ಹೊರತುಪಡಿಸಿ ಇವರ್ಯಾರು ಯಾವುದೇ ಸ್ಥಳೀಯ ಸಂಸ್ಥೆಗಳಾಗಲಿ, ವಿಧಾನಸಭೆ, ವಿಧಾನ ಪರಿಷತ್‌ ಅಥವಾ ಲೋಕಸಭೆಗೆ ನಡೆಯುವ ಚುನಾವಣೆಗಾಗಲಿ ಸ್ಪರ್ಧಿಸಿಲ್ಲ.

Tap to resize

Latest Videos

undefined

HD Kumaraswamy: ಕಾರ್ಯಕರ್ತರು, ಮುಖಂಡರು, ಹಿತೈಷಿಗಳಲ್ಲಿ ಎಚ್‌ಡಿಕೆ ಒಂದು ಕಳಕಳಿಯ ಮನವಿ

ನಾಲ್ಕನೇ ಬಾರಿ ಗೆದ್ದ ಕೋಟಾ ಶ್ರೀನಿವಾಸ್‌
ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲವು ಸಾಧಿಸಿರುವ ಸಿಂಪಲ್‌ ಸಚಿವ ಎಂದೇ ಖ್ಯಾತರಾಗಿರುವ ಕೋಟ ಶ್ರೀನಿವಾಸ ಪೂಜಾರಿ(kota srinivas poojary) ಅವರಿಗೆ ಇದು ನಾಲ್ಕನೇ ಗೆಲುವು. 3672 ಮತ ಪಡೆದು ಗೆದ್ದಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದವರು. ಪೂಜಾರಿ ಅವರು 2008, 2012, 2016ರಲ್ಲಿ ಎಂಎಲ್‌ಸಿಯಾಗಿದ್ದರು.

ಈ ಮೊದಲು ಮೂರು ಬಾರಿ ಕೂಡ ದ.ಕ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಮೂಲತಃ ಕೃಷಿಕರಾದ ಶ್ರೀನಿವಾಸ ಪೂಜಾರಿ ಹಾವ್ಯಾಸಿ ಫೋಟೋಗ್ರಾಫರ್‌ ಕೂಡ ಆಗಿದ್ದರು. ರಾಜಕೀಯಕ್ಕೆ ಧುಮುಕಿದ ಬಳಿಕ 1993ರಲ್ಲಿ ಕೋಟತಟ್ಟು ಗ್ರಾಮ ಪಂಚಾಯ್ತಿ ಸದಸ್ಯರಾದರು, 1996ರಲ್ಲಿ ತಾಲೂಕು ಪಂಚಾಯ್ತಿ ಸದಸ್ಯ, 2005ರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಕಾಂಗ್ರೆಸ್‌ನ ಬ್ಲೇಸಿಯಸ್‌ ಡಿಸೋಜಾ ನಿಧನದಿಂದ ತೆರವಾದ ಸ್ಥಾನಕ್ಕೆ 2008ರಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾದರು. 2012ರಲ್ಲಿ ಅವಿರೋಧ ಆಯ್ಕೆಯಾಗಿದ್ದರು. 2016ರಲ್ಲೂ ಗೆದ್ದ ಅವರು ಇದೀಗ 2021ರಲ್ಲಿ ಮತ್ತೆ ಗೆಲುವು ಸಾಧಿಸುವ ಮೂಲಕ ನಾಲ್ಕನೆ ಬಾರಿ ಮೇಲ್ಮನೆ ಪ್ರವೇಶಿಸುತ್ತಿದ್ದಾರೆ.

MLC Poll Result: ಬಿಜೆಪಿ ವಿರುದ್ಧ ತಿರುಗಿಬಿದ್ದ ಜಾರಕಿಹೊಳಿ, ಸೋಲಿಗೆ ಸ್ಫೋಟಕ ಕಾರಣ ಕೊಟ್ರು

ರೋಚಕ ಮೈಸೂರು ಫಲಿತಾಂಶ
ಮೈಸೂರು-ಚಾಮರಾಜನಗರ(Mysore Chamarajanagar) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ದ್ವಿಸದಸ್ಯತ್ವದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಜತೆಗೆ ಬಿಜೆಪಿ ಅಭ್ಯರ್ಥಿ ಆರ್‌.ರಘು ಅವರು ಗೆಲ್ಲುವುದು ಖಚಿತ ಎಂದೇ ಬಹುತೇಕ ಭಾವಿಸಲಾಗಿತ್ತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ಮತಎಣಿಕೆ ಕಾರ್ಯ ಮುಗಿದಾಗ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ಅವರು ವಿಜಯಮಾಲೆ ಧರಿಸಿದರು. ಮೊದಲ ಪ್ರಾಶಸ್ತ್ಯ ಮತಗಳಲ್ಲಿ 2ನೇ ಸ್ಥಾನ ಪಡೆದ ಬಿಜೆಪಿ ಅಭ್ಯರ್ಥಿ ಆರ್‌.ರಘು ಅವರು 2ನೇ ಪ್ರಾಶಸ್ತ್ಯದ ಮತಗಳಿಂದ ಜಯ ಸಾಧಿಸುತ್ತಾರೆಂಬ ವಿಶ್ವಾಸದಲ್ಲಿ ಬಹುತೇಕ ಬಿಜೆಪಿ ಕಾರ್ಯಕರ್ತರಿದ್ದರು. ಆದರೆ, 2ನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಜೆಡಿಎಸ್‌ 1 ಸಾವಿರ ಅಧಿಕ ಮತ ಪಡೆದಿದ್ದರಿಂದ ದಳ ಗೆದ್ದಿತು. ಬಿಜೆಪಿ ಸೋತಿತು.

ಸಿದ್ದು ಆಪ್ತ ತಿಮ್ಮಯ್ಯಗೆ ಭರ್ಜರಿ ಗೆಲುವು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ ಮೈಸೂರು ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಅವರ ಆಪ್ತರಾಗಿರುವ ಡಾ. ಡಿ.ತಿಮ್ಮಯ್ಯ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಅರವತ್ತರ ದಶಕದಲ್ಲಿಯೇ ಎಂಬಿಬಿಎಸ್‌ ಓದಿದ್ದ ತಿಮ್ಮಯ್ಯ ಅವರು ಹುಣಸೂರಿನವರೇ ಆದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸರ ಕೃಪೆಯಿಂದ ನೇರ ನೇಮಕಾತಿ ಮೂಲಕ ಸರ್ಕಾರಿ ಸೇವೆಗೆ ಸೇರಿದವರು. ನಿವೃತ್ತಿಯ ಬಳಿಕ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು ಕೆಲಕಾಲ ಬಿಜೆಪಿಯಲ್ಲಿದ್ದರು. ಬಳಿಕ ಕಾಂಗ್ರೆಸ್‌ ಸೇರಿದ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು. ದಲಿತರಲ್ಲಿ ಎಡಗೈ ಸಮೂದಾಯಕ್ಕೆ ಸೇರಿದವರು. ಆ ಕಾರಣದಿಂದಾಗಿಯೇ ಇದೇ ಜನಾಂಗಕ್ಕೆ ಸೇರಿದ ಹಾಲಿ ಸದಸ್ಯ ಆರ್‌. ಧರ್ಮಸೇನ ಅವರ ಬದಲಿಗೆ ಇವರಿಗೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಅವರು ಟಿಕೆಟ್‌ ನೀಡಿದ್ದರು. ಇದೀಗ ತಮ್ಮ ಆಪ್ತನನ್ನು ಮೈಸೂರಿನಲ್ಲಿ ಗೆಲ್ಲಿಸುವಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ.
 

click me!