ದೇವೇಗೌಡ ಖಡಕ್ ಸೂಚನೆ: ಪಕ್ಷದಿಂದ ಉಚ್ಛಾಟನೆ ಆಗ್ತಾರಾ ಜೆಡಿಎಸ್ ಶಾಸಕ?

By Suvarna NewsFirst Published Sep 7, 2021, 4:35 PM IST
Highlights

* ಶಾಸಕ ‌ಶ್ರೀನಿವಾಸ ಗೌಡ ವಿರುದ್ಧ ಕ್ರಮಕ್ಕೆ ದೇವೇಗೌಡ ಖಡಕ್ ಸೂಚನೆ
* ಪಕ್ಷದ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದ ಕೋಲಾರ ಜೆಡಿಎಸ್‌ ಶಾಸಕ ‌ಶ್ರೀನಿವಾಸ ಗೌಡ 
* ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚಿಸಿದ ದೇವೇಗೌಡ
 

ಬೆಂಗಳೂರು, (ಸೆ.07): ತಮ್ಮದೇ ಪಕ್ಷ ಹಾಗೂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಪದೇ-ಪದೇ ಬಹಿರಂಗ ಟೀಕೆ ಮಾಡುತ್ತಿರುವ ಜೆಡಿಎಸ್‌ ಶಾಸಕ ‌ಶ್ರೀನಿವಾಸ ಗೌಡ ವಿರುದ್ಧದ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಕೋಲಾರ ಜೆಡಿಎಸ್‌ ಶಾಸಕ ‌ಶ್ರೀನಿವಾಸ ಗೌಡ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯಾಧ್ಯಕ್ಷರಿಗೆ ಎಚ್‌ಡಿ ದೇವೇಗೌಡ ಅವರು ಸೂಚನೆ ಕೊಟ್ಟಿದ್ದಾರೆ. ಹಾಗಾದ್ರೆ, ಶ್ರೀನಿವಾಸ ಗೌಡ ಅವರು ಜೆಡಿಎಸ್‌ನಿಂದ ಉಚ್ಛಾಟನೆಯಾಗ್ತಾರಾ ಎನ್ನುವ ಚರ್ಚೆಗಳು ಶುರುವಾಗಿವೆ.

ರಮೇಶ್ ಕುಮಾರ್ ಬೆನ್ನಿಗೆ ನಿಂತು ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ

ಇನ್ನು ಈ  ಬಗ್ಗೆ ಇಂದು (ಸೆ.07) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಕಾಂಗ್ರೆಸ್ ಮುಖಂಡರ ಜತೆ ಸೇರಿಕೊಂಡು ಜೆಡಿಎಸ್ ಪಕ್ಷಕ್ಕೆ ಹಾನಿಯಾಗುವಂತೆ ಮಾತನಾಡುತ್ತಿರುವ ಕೋಲಾರ ಶಾಸಕ ಕೆ.‌ಶ್ರೀನಿವಾಸ ಗೌಡ ವಿರುದ್ಧ ಕ್ರಮ ಜರುಗಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೋಲಾರ ಶಾಸಕರ ವಿಚಾರದಲ್ಲಿ ಇನ್ನು ಸಹಿಸಲು ಆಗುವುದಿಲ್ಲ. ನೇರವಾಗಿ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚಿಸಿದ್ದೇನೆ ಎಂದರು.

ಶಾಸಕ ಜಿ.ಟಿ. ದೇವೇಗೌಡ ಅವರು ಕೂಡ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ತಮಗೆ ಹಾಗೂ ಮಗನಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಬಳಿ ಕೇಳಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಅವರು ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಎಲ್ಲಿಯೂ ಮಾತನಾಡಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾವ ಸದ್ಯಕ್ಕೆ ಇಲ್ಲ ಎಂದು ಹೇಳಿದರು.

ಶ್ರೀನಿವಾಸ್ ಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಜೊತೆ ಮಾತುಕತೆಗಳು ಮುಗಿದ್ದಿದ್ದು, ಸಮಯ ನೋಡಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

click me!