ಕಾಂಗ್ರೆಸ್ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಅವರ ಆಪ್ತ ಜೆಡಿಎಸ್ ಸೇರಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಾವು ಜೆಡಿಎಸ್ ಸೇರುವುದಾಗಿ ಸುಳಿವು ನೀಡಿದ್ರಾ ಮುನಿಯಪ್ಪ?
ಬೆಂಗಳೂರು, (ಜುಲೈ.13): ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ(KH Muniyappa) ಆಪ್ತ ಸುಹೇಲ್ ದಿಲ್ ನಮಾಜ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಸುಹೇಲ್ ದಿಲ್ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕೆ.ಎಚ್. ಮುನಿಯಪ್ಪ ತಮ್ಮ ಆಪ್ತರನ್ನ ಜೆಡಿಎಸ್‌ಗೆ ಸೇರಿಸುವ ಮೂಲಕ ತಾವು ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ್ರಾ ಎನ್ನುವ ಚರ್ಚೆಗಳು ಕ್ಷೇತ್ರದಲ್ಲಿ ನಡೆದಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಮುನಿಯಪ್ಪ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅಲ್ಲದೇ ಗೊಂದಲಗಳನ್ನ ಸರಿಪಡಿಸುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಒಂದು ತಿಂಗಳು ಕಾಲಾವಕಾಶವನ್ನು ಸಹ ನೀಡಿದ್ದಾರೆ.
ಮುನಿಯಪ್ಪ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ: ದೇವೇಗೌಡ ಜೊತೆ ಮಾತುಕತೆ?
ಮುನಿಯಪ್ಪ ಸಿಡಿದೆದ್ದಿದ್ಯಾಕೆ?
2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪರನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಂಡ್ ಟೀಂನವರು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದು, ಮುನಿಯಪ್ಪನವರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು! ಮೊನ್ನೆ ತಾನೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಭಾಗಿಯಾಗಿದ್ರು. ಇದರಿಂದ ಮುನಿಯಪ್ಪ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿ, 28 ವರ್ಷಗಳ ಕಾಲ ಸಂಸದರಾಗಿಯೂ ಕೆಲಸ ಮಾಡಿರುವ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪರನ್ನು ಒಂದೂ ಮಾತನ್ನು ಕೇಳದೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇನ್ನು ಹಾಲಿ ಜೆಡಿಎಸ್ ಪಕ್ಷದ ಶಾಸಕ ಶ್ರೀನಿವಾಸಗೌಡ ಸೇರಿದಂತೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವ ಮಾಜಿ ಶಾಸಕರುಗಳು ಹಾಗೂ ರಮೇಶ್ ಕುಮಾರ್ ಮುನಿಯಪ್ಪ ಸೋಲಿಗೆ ಕಾರಣಕರ್ತರು. ಈ ಬಗ್ಗೆ ರಮೇಶ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ ಹಾಗೂ ರಾಜ್ಯದ ನಾಯಕರಿಗೆ ಕೆ.ಎಚ್ ಮುನಿಯಪ್ಪ ಪತ್ರ ಬರೆದು 3 ವರ್ಷ ಕಳೆದಿದೆ.
ಆದ್ರೆ ಇದುವರೆಗೂ ಯಾರ ವಿರುದ್ಧ ಕ್ರಮ ಕೈಗೊಂಡಿಲ್ಲ,ಅನ್ನೋದು ಕೆ.ಎಚ್ ಮುನಿಯಪ್ಪನವರಿಗೆ ಹೈಕಮಾಂಡ್ ವಿರುದ್ಧ ಬೇಸರವಿತ್ತು.ಇದರ ನಡುವೆ ಇದೀಗ ಹೈಕಮಾಂಡ್ ಹಾಗೂ ರಾಜ್ಯದ ನಾಯಕರು ಕೆ.ಎಚ್ ಮುನಿಯಪ್ಪ ವಿರೋಧಿ ಬಣಕ್ಕೆ ರೆಡ್ ಕಾರ್ಪೆಟ್ ಹಾಕಿ ವೇಲ್ಕಮ್ ಮಾಡಿದ್ದು ಮೂಲ ಕಾಂಗ್ರೆಸಿಗರು ಹಾಗೂ ಕೆ.ಎಚ್ ಮುನಿಯಪ್ಪ ಬಣದವರ ಆಕ್ರೋಶಕ್ಕೆ ಕಾರಣವಾಗಿದೆ.
ವಿರೋಧಿಗಳು ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಮುನಿಯಪ್ಪ ಅವರು ಇತ್ತೀಚೆಗೆ ತಮ್ಮ ಬೆಂಬಲಿಗರ ಸಭೆ ನಡೆಸಿದ್ದು, ಇನ್ನೊಂದು ತಿಂಗಳು ಕಾದು ನೋಡುತ್ತೇನೆ ಎಂದು ಹೈಕಮಾಂಡ್‌ಗೆ ಗಡುವು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್‌ನಿಂದ ದೂರ ಉಳಿಯುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ ದಿನಗಳಲ್ಲಿ ಅವರು ಜೆಡಿಎಸ್ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಿವೆ.