Kodagu: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದವರ ಗಡಿಪಾರು: ಕೋರ್ಟ್‌ ನೋಟಿಸ್‌ ಜಾರಿ

By Sathish Kumar KHFirst Published Feb 1, 2023, 8:20 PM IST
Highlights

ಕಳೆದ ಕೆಲವು ತಿಂಗಳ ಹಿಂದೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿಯ ಇಬ್ಬರು ಮುಖಂಡರಿಗೆ ಗಡಿಪಾರು ಭೀತಿ ಎದುರಾಗಿದೆ.

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.01): ಕಳೆದ ಕೆಲವು ತಿಂಗಳ ಹಿಂದೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿಯ ಇಬ್ಬರು ಮುಖಂಡರಿಗೆ ಗಡಿಪಾರು ಭೀತಿ ಎದುರಾಗಿದೆ. ಮೊಟ್ಟೆ ಎಸದ ಆರೋಪಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ ಗಡಿಪಾರು ಮಾಡದಿರಲು ಸೂಕ್ತ ಕಾರಣ ನೀಡುವಂತೆ ಕೇಳಲಾಗಿದೆ.

ಮಡಿಕೇರಿ ನಗರಸಭೆ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಮತ್ತು ಹಿಂದೂ ಯುವ ವಾಹಿನಿ ಜಿಲ್ಲಾ ಸಂಚಾಲಕ ವಿನಯ್ ಈ ಇಬ್ಬರಿಗೆ ಗಡಿಪಾರು ಭೀತಿ ಎದುರಾಗಿದೆ. ಇಬ್ಬರನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ನೀಡುವಂತೆ ಸೂಚಿಸಿ ಕೊಡಗು ಎಸಿ ಕೋರ್ಟ್ ನೋಟೀಸ್ ಜಾರಿ ಮಾಡಿದೆ. 2022 ರ ಅಕ್ಟೋಬರ್ ತಿಂಗಳಲ್ಲಿ ಮಳೆ ಹಾನಿ ಸಂಬಂಧ ವೀಕ್ಷಣೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಆಗಮಿಸಿದ್ದ ವೇಳೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಹಾಗೆಯೇ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಅಲ್ಲದೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಗದ್ದಲ ಗಲಾಟೆಯಾಗಿತ್ತು. 

ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ನಾಯಕ ಸಿದ್ದರಾಮಯ್ಯ; ಅವರ ಏಳ್ಗೆ ಸಹಿಸದೆ ಮೊಟ್ಟೆ ಎಸೆದ ಬಿಜೆಪಿ

ಭದ್ರತೆ ಲೋಪದೋಷವೆಂದು ಕಾಂಗ್ರೆಸ್‌ ಪ್ರತಿಭಟನೆ: ವಿಪಕ್ಷ ನಾಯಕರಿಗೆ ಸೂಕ್ತ ಭದ್ರತೆ ನೀಡುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಆರೋಪಿಸಿ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಹೋರಾಟ ನಡೆಸಿದ್ದರು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಮಡಿಕೇರಿ ನಗರ ಸಭೆ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಎ1 ಆರೋಪಿ ಆಗಿದ್ದರೆ, ಇದೇ ಪ್ರಕರಣದಲ್ಲಿ ಹಿಂದೂ ಯುವವಾಹಿನಿ ಜಿಲ್ಲಾ ಸಂಚಾಲಕ ವಿನಯ್ ಕೂಡ ಆರೋಪಿ ಆಗಿದ್ದರು. ಅಲ್ಲದೆ ಕವನ್ ಕಾವೇರಪ್ಪ ಹಿಂದೆಯೂ  ಪ್ರಕರಣ ಒಂದರಲ್ಲಿ ಇದ್ದರು. ಆದರೆ ಆ ಪ್ರಕರಣ ಇತ್ತೀಚೆಗೆ ಖುಲಾಸೆಗೊಂಡಿತ್ತು. 

ಗಡಿಪಾರು ಮಾಡದಿರಲು ಕಾರಣ ನೀಡಿ: ಇದೀಗ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣದಲ್ಲಿ ಗಡಿಪಾರು ಮಾಡದಿರಲು ಕಾರಣ ನೀಡುವಂತೆ ನೋಟೀಸ್ ನೀಡಿದೆ. ನೊಟೀಸ್ ಪಡೆದಿರುವ ಇಬ್ಬರು ಫೆ.2 ರಂದು  ಕೊಡಗು ಎಸಿ ಕೋರ್ಟಿಗೆ ಹಾಜರಾಗಬೇಕಾಗಿದೆ. 

ಕೇಸು ಖುಲಾಸೆ ಆಗಿದ್ದರೂ ನೋಟಿಸ್ ಜಾರಿ: ಈ ಕುರಿತು ಪ್ರತಿಕ್ರಿಯಿಸಿರುವ ಕವನ್ ಕಾರ್ಯಪ್ಪ ದೇಶದ ಕಾನೂನು ಎಲ್ಲರಿಗೂ ಗೊತ್ತಿದೆ. ಆದರೆ ಕೊಡಗಿನ ಪೊಲೀಸರು ಕಾನೂನು ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ಯಾವುದೇ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆಯಾಗಿದ್ದು, ಮತ್ತೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಗಡಿಪಾರು ಆದೇಶ ಮಾಡಬಹುದು. ಆದರೆ ನನ್ನ ಮೇಲೆ ಇದ್ದ ಪ್ರಕರಣ ಖುಲಾಸೆ ಆಗಿದೆ. ಇದೀಗ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಒಡೆಯಲಾಗಿದೆ ಎಂದು ಯಾರೋ ದೂರು ಕೊಟ್ಟ ಕೂಡಲೇ ಅದರ ಆಧಾರದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಿಸಿ ಈಗ ಜಿಲ್ಲಾಡಳಿತ ಗಡಿಪಾರಿಗೆ ಮುಂದಾಗುತ್ತಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಇದಕ್ಕೆ ಸರಿಯಾದ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಕವನ್ ಕಾವೇರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಒಂದಲ್ಲ ಎರಡಲ್ಲ, ಸಿದ್ದರಾಮಯ್ಯ ಕಾರಿನ ಮೇಲೆ ನಾಲ್ಕು ಮೊಟ್ಟೆ ಎಸೆತ!

ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಕ್ರಮ: ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವವಸ್ಥೆ ಕಾಪಾಡಬೇಕೆಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೊಡಗಿಗೆ ಆಗಮಿಸಿದ್ದ ವೇಳೆ ನಡೆದ ಗಲಭೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಗಡಿಪಾರಿಗೆ ಇಬ್ಬರ ಹೆಸರನ್ನು ಪೊಲೀಸ್ ಇಲಾಖೆ ಸೂಚಿಸಿದ್ದು, ಸದ್ಯ ಎಸಿ ಕೋರ್ಟ್ ಅಂಗಳದಲ್ಲಿ ಪ್ರಕರಣ ಇದ್ದು ಗುರುವಾರ ವಿಚಾರಣೆ ಬಳಿಕ ಎಸಿ ಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕು.

click me!