
ಬೆಂಗಳೂರು (ಸೆ.05): ಯಾವುದೇ ಕಾರಣಕ್ಕೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಕಾಂಗ್ರೆಸ್ ಬಿಡುವುದಿಲ್ಲ. ಇದು ಅನಾವಶ್ಯಕ ಚರ್ಚೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂಬ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿ, ರಾಜಣ್ಣ ನಮ್ಮ ಜಿಲ್ಲೆಯವರು, ನಮ್ಮ ಪಕ್ಷದ ನಾಯಕರು. ನಾವಿಬ್ಬರೂ ಕ್ಲಾಸ್‌ಮೇಟ್ಸ್, ಪಿಯುಸಿಯಲ್ಲಿ ನಮ್ಮಿಬ್ಬರದ್ದೂ ಒಂದೇ ತರಗತಿ. ರಾಜಣ್ಣ ಯಾವತ್ತೂ ಕಾಂಗ್ರೆಸ್ ಬಿಡುವ ಮಾತಾಡಿಲ್ಲ. ಇದ್ದಕ್ಕಿದ್ದಂತೆಯೇ ಇವರೇ ಸೃಷ್ಟಿಸಿಕೊಂಡು ರಾಜಕೀಯ ಮಾತನಾಡುವುದು ಸರಿಯಲ್ಲ ಎಂದರು.
ನೈಸ್ ಮುಟ್ಟುಗೋಲು ಇಲ್ಲ: ‘ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ಅನೇಕ ನ್ಯೂನ್ಯತೆಗಳಿವೆ. ಎಲ್ಲವನ್ನೂ ಬಗೆಹರಿಸಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಬಿಎಂಐಸಿ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಬಿಎಂಐಸಿ ಯೋಜನೆ ವಿಳಂಬ ಹಾಗೂ ಅಕ್ರಮಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಎಂಐಸಿ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾವನೆಯೇ ಇಲ್ಲ. ಮುಟ್ಟುಗೋಲು ಹಾಕಿಕೊಳ್ಳುವುದಾದರೆ ಸರ್ಕಾರ ಒಂದೇ ನಿರ್ಧಾರದಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದಿತ್ತು. ಅದಕ್ಕೆ ಸಮಿತಿಗಳನ್ನು ರಚಿಸಿ ಚರ್ಚೆಗಳನ್ನು ಮಾಡಿ ಮಾಡುತ್ತಿರಲಿಲ್ಲ. ನಮ್ಮ ಸಂಪುಟ ಉಪಸಮಿತಿ ಮಾಡಿರುವುದು ಸಮಸ್ಯೆಗಳನ್ನು ಬಗೆಹರಿಸಿ ಯೋಜನೆ ಪೂರ್ಣಗೊಳಿಸುವ ಉದ್ದೇಶಕ್ಕಾಗಿ ಮಾತ್ರ ಎಂದು ಸ್ಪಷ್ಟಪಡಿಸಿದರು.
ಸಾಕಷ್ಟು ನ್ಯೂನ್ಯತೆಗಳಿವೆ: ಬಿಎಂಐಸಿ ಯೋಜನೆಯ ಒಪ್ಪಂದದಲ್ಲಿ ಸಾಕಷ್ಟು ಉಲ್ಲಂಘನೆಯಾಗಿದೆ. ನಾವು ಕೊಟ್ಟಂತಹ ಜಮೀನುಗಳು, ಪ್ರಾಜೆಕ್ಟ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಎ ಸೆಕ್ಷನ್, ಬಿ ಸೆಕ್ಷನ್ ಅಂತ ಮಾಡಿದ್ದಾರೆ. ಎ ಸೆಕ್ಷನ್ ಬೆಂಗಳೂರಿಗೆ ಹತ್ತಿರ ಇರುವ ಫೆರಿಪೆರಲ್ ರಿಂಗ್ ರೋಡ್, ಬಿಡದಿವರೆಗೂ ತೆಗೆದುಕೊಂಡು ಹೋಗಿ ಅಲ್ಲಿ ಕಾರ್ಪೋರೆಟ್ ಟೌನ್‌ಶಿಪ್ ಮಾಡುವಂತದ್ದನ್ನು ಪ್ರಾಜೆಕ್ಟ್‌ನಲ್ಲಿ ತಂದಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ 300ಕ್ಕೂ ಹೆಚ್ಚು ತಕರಾರುಗಳಿದ್ದು, ಎಲ್ಲವನ್ನೂ ಪರಿಹರಿಸಬೇಕಾಗಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು. ಈಗಾಗಲೇ ಸುಮಾರು 80 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಉಳಿದ ಪ್ರಕರಣಗಳ ಇತ್ಯರ್ಥಕ್ಕೆ ಉತ್ತಮ ವಕೀಲರ ತಂಡ ನೇಮಿಸಿಕೊಂಡಿದ್ದೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.