ರಾಜ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದ ಕೆ.ಎಚ್‌.ಮುನಿಯಪ್ಪ

By Kannadaprabha News  |  First Published May 21, 2023, 9:05 PM IST

ರಾಷ್ಟ್ರ ರಾಜಕಾರಣದ ಹಿರಿಯ ವ್ಯಕ್ತಿತ್ವ ಕೆ.ಎಚ್‌.ಮುನಿಯಪ್ಪ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಬರೋಬ್ಬರಿ 5 ದಶಕಗಳ ರಾಜಕೀಯ ಅನುಭವ ಹೊಂದಿರುವ ಅವರು ರಾಜ್ಯ ಸರ್ಕಾರದ ನೂತನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 


ಕೆ.ಆರ್‌.ರವಿಕಿರಣ್‌

ದೊಡ್ಡಬಳ್ಳಾಪುರ (ಮೇ.21): ರಾಷ್ಟ್ರ ರಾಜಕಾರಣದ ಹಿರಿಯ ವ್ಯಕ್ತಿತ್ವ ಕೆ.ಎಚ್‌.ಮುನಿಯಪ್ಪ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಬರೋಬ್ಬರಿ 5 ದಶಕಗಳ ರಾಜಕೀಯ ಅನುಭವ ಹೊಂದಿರುವ ಅವರು ರಾಜ್ಯ ಸರ್ಕಾರದ ನೂತನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಅವರು ಸಚಿವರಾಗಿರುವುದು ಜಿಲ್ಲೆಯಲ್ಲಿ ಸಂತಸಕ್ಕೆ ಕಾರಣವಾಗಿದೆ. ಸತತ 7 ಬಾರಿ ಸಂಸದರಾಗಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಹಿರಿಮೆ ಹೊಂದಿರುವ ಅವರು, 3 ಬಾರಿ ಕೇಂದ್ರ ಸಚಿವರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 3 ದಶಕಗಳ ಕಾಲ ದೆಹಲಿ ರಾಜಕಾರಣದ ಸಕ್ರಿಯ ಸದಸ್ಯರಾಗಿದ್ದ ಮುನಿಯಪ್ಪ, ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರು. 

Tap to resize

Latest Videos

undefined

ಅವರ ಗೆಲುವಿನ ನಾಗಾಲೋಟಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿನ ಸೋಲು ಆಘಾತಕಾರಿಯಾಗಿತ್ತು. ಅದಾದ ಬಳಿಕ ಅವರ ರಾಜಕೀಯ ಬದುಕು ಭಾಗಶಃ ಮುಕ್ತಾಯವಾಯಿತು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿದ್ದ ವೇಳೆಯೇ ರಾಜ್ಯ ರಾಜಕಾರಣದತ್ತ ಅವರು ಮುಖ ಮಾಡಿದರು. ತಮ್ಮ ರಾಜಕೀಯ ಜೀವನದಲ್ಲಿ ಕಂಡ ಮೊದಲ ಸೋಲು ಅವರನ್ನು ಬಹುವಾಗಿ ಕಾಡಿತ್ತು. ವಯಸ್ಸಿನ ಕಾರಣವೂ ದೆಹಲಿ ರಾಜಕಾರಣದಲ್ಲಿ ಮುಂದುವರಿಯುವ ಇಚ್ಚೆಗೆ ಅಡ್ಡಿಯಾಗಬಹುದಾದ ಹಿನ್ನಲೆ ರಾಜ್ಯ ರಾಜಕಾರಣದತ್ತ ಅವರು ಗಮನ ಕೇಂದ್ರೀಕರಿಸಿದರು. ಪರಿಶಿಷ್ಟಸಮುದಾಯದ ಪ್ರಬಲ ನಾಯಕರಾಗಿರುವ ಅವರು, ತಮ್ಮ ಗುಣಾತ್ಮಕ ರಾಜಕೀಯ ನಡೆಯಿಂದ ಎಐಸಿಸಿ ಮಟ್ಟದಲ್ಲಿಯೂ ಉತ್ತಮ ಗೌರವ, ಹೆಸರು ಹೊಂದಿದ್ದಾರೆ.

ಸಿಪಿಪಿ ಸಹಯೋಗದಲ್ಲಿ ಬಿಬಿಎಂಪಿಯಿಂದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ

ವೃತ್ತಿಯಲ್ಲಿ ವಕೀಲ: ಕೆ.ಎಚ್‌.ಮುನಿಯಪ್ಪ ಮೂಲತಃ ಕೋಲಾರದ ಕಂಬದಹಳ್ಳಿ ಗ್ರಾಮದವರು. ಮಾರ್ಚ್‌7, 1948ರಲ್ಲಿ ಜನಿಸಿದ ಅವರು, ಬಿ.ಎ., ಎಲ್‌ಎಲ್‌ಬಿ ಪದವೀಧರರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದವರು. ವೃತ್ತಿಯಲ್ಲಿ ವಕೀಲರಾಗಿರುವ ಅವರು, ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಮತ್ತು ತುಡಿತ ಹೊಂದಿರುವವರು.

ಮೊದಲ ಬಾರಿಯ ಶಾಸಕ: ಕೆ.ಎಚ್‌.ಮುನಿಯಪ್ಪ ಅತ್ಯಂತ ಹಿರಿಯ ರಾಜಕಾರಣಿಗಳಲ್ಲೊಬ್ಬರು ಎನಿಸಿದ್ದರೂ, ರಾಜ್ಯ ವಿಧಾನಸಭೆ ಪ್ರವೇಶಿಸಿರುವುದು ಇದೇ ಮೊದಲು. 1991ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಅವರು, ಆ ಬಳಿಕ 1996, 1998, 1999, 2004, 2009, 2014ರಲ್ಲೂ ಸತತವಾಗಿ ಅಜೇಯರಾಗಿ ಸಂಸತ್‌ ಪ್ರವೇಶಿಸಿದ್ದರು. 2004ರಲ್ಲಿ ಮನಮೋಹನ್‌ಸಿಂಗ್‌ ಅವರ ಸಚಿವ ಸಂಪುಟದಲ್ಲಿ ಬಂದರು, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ರಾಜ್ಯ ಸಚಿವರಾಗಿ, 2009ರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಹಾಗೂ 2012ರಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ) ಖಾತೆ ರಾಜ್ಯ ಸಚಿವ(ಸ್ವತಂತ್ರ ನಿರ್ವಹಣೆ)ರಾಗಿ ಕೆಲಸ ಮಾಡಿದ್ದರು. 2019ರ ಸೋಲಿನ ಬಳಿಕ ಕೋಲಾರದಿಂದ ದೇವನಹಳ್ಳಿ ಮೀಸಲು ಕ್ಷೇತ್ರಕ್ಕೆ ವಲಸೆ ಬಂದ ಅವರು, ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಬಲ ಪ್ರತಿಸ್ಪರ್ಧೆ ನಡುವೆಯೂ ಮೊದಲ ಯತ್ನದಲ್ಲೇ ಜಯದ ಸವಿಯುಂಡ ಅವರು, ಇದೀಗ ರಾಜ್ಯದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೊದಲ ಬಾರಿಗೆ ದೇವನಹಳ್ಳಿಗೆ ಪಟ್ಟ: 1952ರಲ್ಲಿ ಶಾಸನಸಭೆ ಅಸ್ತಿತ್ವಕ್ಕೆ ಬಂದ ದಿನದಿಂದ ಈವರೆಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಯಾವುದೇ ಶಾಸಕರೂ ಸಚಿವರಾಗಿರಲಿಲ್ಲ. ದೇವನಹಳ್ಳಿ ಮೀಸಲು ಕ್ಷೇತ್ರಕ್ಕೆ ಇದೊಂದು ಶಾಪವಾಗಿ ಪರಿಣಮಿಸಿತ್ತು. ಈ ಬಾರಿ ಆ ಶಾಪ ವಿಮೋಚನೆಯಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ದೇವನಹಳ್ಳಿಯಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇದು ಸಹಜವಾಗಿಯೇ ದೇವನಹಳ್ಳಿ ಜನತೆಯಲ್ಲಿ ಸಂತಸಕ್ಕೆ ಕಾರಣವಾಗಿದೆ. ಜಿಲ್ಲೆಯ ದೊಡ್ಡಬಳ್ಳಾಪುರವನ್ನು ಪ್ರತಿನಿಧಿಸಿದ್ದ ಟಿ.ಸಿದ್ದಲಿಂಗಯ್ಯ, ಜಿ.ರಾಮೇಗೌಡ, ಆರ್‌.ಎಲ್‌.ಜಾಲಪ್ಪ, ನೆಲಮಂಗಲ ಪ್ರತಿನಿಧಿಸಿದ್ದ ಡಾ.ಶಂಕರನಾಯಕ್‌, ಅಂಜನಮೂರ್ತಿ, ಹೊಸಕೋಟೆಯ ಬಿ.ಎನ್‌.ಬಚ್ಚೇಗೌಡ, ಎಂಟಿಬಿ ನಾಗರಾಜ್‌ ಮತ್ತಿತರರು ಸಚಿವರಾಗಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಶಾಸನಸಭೆಯಲ್ಲಿ ತಂದೆ-ಮಗಳು: ಈ ಬಾರಿ ಕೆ.ಎಚ್‌.ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದ್ದರೆ, ಅವರ ಮಗಳು ರೂಪಕಲಾ, ಕೆಜಿಎಫ್‌ ಕ್ಷೇತ್ರದಿಂದ ಸತತ 2ನೇ ಬಾರಿಗೆ ಶಾಸನ ಸಭೆ ಪ್ರವೇಶಿಸಿದ್ದಾರೆ. ಈ ಮೂಲಕ ಈ ಬಾರಿಯ ವಿಧಾನಸಭೆಯಲ್ಲಿ ತಂದೆ-ಮಗಳು ಇಬ್ಬರೂ ಪ್ರತಿನಿಧಿಸುತ್ತಿರುವುದು ವಿಶೇಷವಾಗಿದೆ.

ರಾಮ​ನ​ಗ​ರ​ ಕ್ಷೇತ್ರ​ದಲ್ಲಿಯೇ ರಾಜ​ಕೀ​ಯ​ ಮರು ಜನ್ಮ: ನಿಖಿಲ್‌ ಕುಮಾ​ರ​ಸ್ವಾಮಿ

ಜಿಲ್ಲಾ ಉಸ್ತುವಾರಿ ನಿರೀಕ್ಷೆ: ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ, ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸಿದೆ. ಹೊಸಕೋಟೆಯಿಂದ 2ನೇ ಬಾರಿಗೆ ಆಯ್ಕೆಯಾಗಿರುವ ಶರತ್‌ ಬಚ್ಚೇಗೌಡ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅಭ್ಯರ್ಥಿಯಾಗಿದ್ದ ಟಿ.ವೆಂಕಟರಮಣಯ್ಯ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ ಹುಸಿಯಾಗಿದ್ದು, ಅವರು ಸೋಲನ್ನನುಭವಿಸಿದ್ದಾರೆ. ನೆಲಮಂಗಲದಲ್ಲಿ ಶ್ರೀನಿವಾಸಯ್ಯ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಶರತ್‌ ಬಚ್ಚೇಗೌಡ ಅವರಿಗೆ ಸಚಿವ ಪದವಿಯ ಆಕಾಂಕ್ಷೆ ಇದ್ದರೂ, ಈಗಾಗಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೆ.ಎಚ್‌.ಮುನಿಯಪ್ಪ ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

click me!