ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್‌ಡಿಕೆ ಮುಂದಿದೆ ಸಾಕಷ್ಟು ಅಭಿವೃದ್ಧಿ ಸವಾಲುಗಳು

By Kannadaprabha News  |  First Published May 21, 2023, 8:45 PM IST

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜಯಗಳಿಸಿ ಎರಡನೇ ಬಾರಿಗೆ ಕ್ಷೇತ್ರದ ಶಾಸಕರಾಗಿದ್ದಾರೆ. ಇದರ ಬೆನ್ನಲ್ಲೇ ತಾಲೂಕಿನಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸವಾಲು ಅವರಿಗೆ ಎದುರಾಗಿದೆ.


ವಿಜಯ್‌ ಕೇಸರಿ

ಚನ್ನಪಟ್ಟಣ (ಮೇ.21): ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜಯಗಳಿಸಿ ಎರಡನೇ ಬಾರಿಗೆ ಕ್ಷೇತ್ರದ ಶಾಸಕರಾಗಿದ್ದಾರೆ. ಇದರ ಬೆನ್ನಲ್ಲೇ ತಾಲೂಕಿನಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸವಾಲು ಅವರಿಗೆ ಎದುರಾಗಿದೆ. ಕಳೆದ ಬಾರಿ ಕ್ಷೇತ್ರದಿಂದ ಆಯ್ಕೆಯಾಗಿ ಇಲ್ಲಿಂದಲೇ ಮುಖ್ಯಮಂತ್ರಿ ಸ್ಥಾನವನ್ನು ಕುಮಾರಸ್ವಾಮಿ ಅಲಂಕರಿಸಿದ್ದರು. ತಮ್ಮ ಶಾಸಕತ್ವದ ಅವಧಿಯಲ್ಲಿ ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೂ ಕೆಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದರು. ಈ ಬಾರಿಯಾದರೂ ತಾಲೂಕಿನಲ್ಲಿನ ಕೆಲ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆಯೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

Tap to resize

Latest Videos

ಬಗೆಹರಿಯದ ಸಮಸ್ಯೆಗಳು: ನಗರ ಪ್ರದೇಶದಲ್ಲಿ ಕಸ ವಿಲೇವಾರಿಯದ್ದೇ ಬಹುದೊಡ್ಡ ಸಮಸ್ಯೆಯಾಗಿದೆ. ಡಂಪಿಂಗ್‌ ಯಾರ್ಡ್‌ಗೆ ಜಾಗ ಗುರುತಿಸಿ ವೈಜ್ಞಾನಿಕ ಕಸ ವಿಲೇವಾರಿಗೆ ಮಾರ್ಗ ಕಂಡುಕೊಂಡು ಕಸದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕಾದ ಗುರುತರ ಜವಾಬ್ದಾರಿ ನೂತನ ಶಾಸಕರ ಮೇಲಿದೆ. ಇದರ ಜತೆಗೆ ನಗರ ಪ್ರದೇಶದಲ್ಲಿ ಯುಜಿಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಎಚ್ಡಿಕೆ ಮೇಲಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಈಗಲೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದನ್ನು ಪರಿಹರಿಸಲು ಅದ್ಯತೆ ನೀಡಬೇಕಿದೆ. ಜಲಜೀವನ್‌ ಮಿಷನ್‌ ಕುರಿತು ಕೆಲವು ಅಪಸ್ವರಗಳಿದ್ದು, ಅದರ ಬಗ್ಗೆ ನಿಗಾ ವಹಿಸಬೇಕಿದೆ. ಕೆಲವು ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಸಮಸ್ಯೆ ಪರಿಹರಿಸುವ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅಂಬೇಡ್ಕರ್‌ ಭವನ, ಬಾಬು ಜಗಜೀವನ್‌ ರಾಮ್‌ ಭವನ ಕಾಮಗಾರಿ ಪೂರ್ಣಗೊಳಿಸಬೇಕಿದೆ.

ರಾಮ​ನ​ಗ​ರ​ ಕ್ಷೇತ್ರ​ದಲ್ಲಿಯೇ ರಾಜ​ಕೀ​ಯ​ ಮರು ಜನ್ಮ: ನಿಖಿಲ್‌ ಕುಮಾ​ರ​ಸ್ವಾಮಿ

ಕಾಡು ಪ್ರಾಣಿ ಹಾವಳಿಗೆ ಪರಿಹಾರ: ಇನ್ನು ಗಡಿ ಅಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಹಾವಳಿ ಮಿತಿ ಮೀರಿದೆ. ಚಿರತೆ, ಆನೆ ಮುಂತಾದ ಕಾಡು ಪ್ರಾಣಿಗಳ ಹಾವಳಿಯಿಂದ ಜನ ಹೈರಾಣಾಗಿದ್ದಾರೆ. ಕಾಡಾನೆಗಳ ಹಾವಳಿಯಿಂದ ರೈತರ ಬೆಳೆಗಳು ಹಾಳಾಗುತ್ತಿದ್ದು, ರೈತ ಸಮುದಾಯ ಸಮಸ್ಯೆಗೆ ಸಿಲುಕಿದೆ. ಇನ್ನು ಚಿರತೆಗಳ ಹಾವಳಿಯಿಂದ ರೈತರು ತಾವು ಸಾಕಿದ ಜಾನುವಾರುಗಳನ್ನು ಕಳೆದುಕೊಂಡು ನಷ್ಟಅನುಭವಿಸುತ್ತಿದ್ದಾರೆ. ಕಾಡಾನೆಗಳ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಜತೆಗೆ ಕಾಡುಪ್ರಾಣಿಗಳ ದಾಳಿಯಿಂದ ನಷ್ಟಕ್ಕೊಳಗಾದ ರೈತರಿಗೆ ತ್ವರಿತವಾಗಿ ಪರಿಹಾರ ದೊರಕುವ ವ್ಯವಸ್ಥೆ ಕಲ್ಪಿಸಬೇಕಿದೆ.

ಇದರ ಜತೆಗೆ ನೂತನ ಸರ್ಕಾರದ ಮೇಲೆ ಒತ್ತಡ ತಂದು ನಗರದ ಸಿಲ್‌ ಫಾರಂ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆಯೋಜನೆ ಶೀಘ್ರವಾಗಿ ಚಾಲನೆಯಾಗುವಂತೆ ನೋಡಿಕೊಳ್ಳುವುದು. ತಾವೂ ಸಿಎಂ ಆಗಿದ್ದಾಗ ಘೋಷಿಸಿದ್ದ ತಾಲೂಕಿನ ಕಣ್ವ ಬಳಿ ಚಿಲ್ಡ್ರನ್ಸ್‌ ಪಾರ್ಕ್ ನಿರ್ಮಾಣ ಯೋಜನೆಗೆ ಅನುಮೋದನೆ ಪಡೆಯುವುದು. ಮಾವು ಸಂಸ್ಕರಣಾ ಘಟಕದ ಶೀಘ್ರ ಕಾರ್ಯಾರಂಭಕ್ಕೆ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ಸಾಕಷ್ಟುಸವಾಲುಗಳು ಕುಮಾರಸ್ವಾಮಿ ಅವರ ಮುಂದಿವೆ.

ಇದಲ್ಲದೇ ಕಳೆದ ಬಾರಿ ತಮ್ಮ ಐದು ವರ್ಷದ ಅವಧಿಯಲ್ಲಿ ಕೆಡಿಪಿ ಸಭೆ ನಡೆಸದ ಕುರಿತು, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗಯಾಗದ ಕುರಿತು ಅಪಸ್ವರಗಳು ಕೇಳಿಬಂದಿದ್ದವು. ಈ ಬಾರಿಯಾದರೂ ಅವರು ಆಗಿಂದಾಗ ಅಧಿಕಾರಿಗಳ ಸಭೆ ನಡೆಸಿ, ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಬೇಕಿದೆ. ಸುಮಾರು 16 ಸಾವಿರದಷ್ಟುಮತಗಳ ಅಂತರದಿಂದ ಗೆಲುವು ಸಾಧಿಸಿ ಎರಡನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಎಚ್‌.ಡಿ.ಕುಮಾರಸ್ವಾಮಿಯವರ ಮುಂದೆ ಸಾಕಷ್ಟುಸವಾಲುಗಳಿದ್ದು, ಈ ಅವಧಿಯಲ್ಲಾದರೂ ತಾಲೂಕಿನ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆಯೇ ಎಂಬ ಆಶಾಭಾವನೆ ಹೊತ್ತು ತಾಲೂಕಿನ ಜನ ನಿಂತಿದ್ದಾರೆ.

ರೇಷ್ಮೆ​ನ​ಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!

ಎಲೇಕೇರಿ ಮೇಲ್ಸೇತುವೆ ಕಾಮಗಾರಿಗೆ ಕಾಯಕಲ್ಪ: ನನೆಗುದಿಗೆ ಬಿದ್ದಿರುವ ಎಲೇಕೇರಿ ಮೇಲ್ಸೇತುವೆ ಕಾಮಗಾರಿಗೆ ಕಾಯಕಲ್ಪ ನೀಡುವ ಜತೆಗೆ ಖಾಸಗಿ ಬಸ್‌ ನಿಲ್ದಾಣದ ಜಾಗದ ಸಮಸ್ಯೆ ಬಗೆಹರಿಸಿ ಕಾಮಗಾರಿ ಮುಂದುವರಿಸಬೇಕಾಗಿದೆ. ಇನ್ನು ನಗರ ಪ್ರದೇಶದಲ್ಲಿ ಸುಂದರ ಕ್ರೀಡಾಂಗಣ ನಿರ್ಮಾಣ ಬಹುವರ್ಷಗಳ ಕನಸಾಗಿದೆ. ನಗರ ಪ್ರದೇಶದಲ್ಲಿರುವ ಶೆಟ್ಟಿಹಳ್ಳಿ ಕೆರೆ ಕಸ ಮತ್ತು ಕೊಳಚೆ ನೀರು ತುಂಬಿ ಗಬ್ಬು ನಾರುತ್ತಿದೆ. ಇದರ ಜತೆಗೆ ಕೆರೆ ಒತ್ತುವರಿಯಾಗಿದ್ದು, ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಪುನಃಶ್ವೇತನಗೊಳಿಸುವ ಇಲ್ಲ ಕೆರೆ ಮುಚ್ಚಿ ಅಲ್ಲಿ ಕ್ರೀಡಾಂಗಣವೋ, ಉದ್ಯೋನವೋ ನಿರ್ಮಿಸಬೇಕಿದೆ. ಇದಲ್ಲದೇ ಅಂಬೇಡ್ಕರ್‌ ಭವನದ ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕಿದೆ. ಇದರ ಜತೆಗೆ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಾಧಿಕಾರಿ ಕಚೇರಿಯನ್ನು ತಾಲೂಕು ಕಚೇರಿಗೋ ಇಲ್ಲ ಬೇರೊಂದು ಜಾಗಕ್ಕೋ ಸ್ಥಳಾಂತರಿಸಬೇಕಿದೆ.

click me!