ಮಂಗನಕಾಯಿಲೆ ಪರೀಕ್ಷೆಗೆ ಶಿರಸಿಯಲ್ಲಿ ಹೊಸ ಲ್ಯಾಬ್‌: ಸಚಿವ ದಿನೇಶ್ ಗುಂಡೂರಾವ್‌

Published : Dec 25, 2025, 08:27 AM IST
Dinesh Gundu Rao

ಸಾರಾಂಶ

ರಾಜ್ಯದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯ ಮೇಲೆ ಒತ್ತಡ ಹೆಚ್ಚಾಗಿರುವುದರಿಂದ ಶೀಘ್ರದಲ್ಲೇ ಶಿರಸಿಯಲ್ಲಿ ಪ್ರಯೋಗಾಲಯ ಆರಂಭಿಸಲಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಬೆಂಗಳೂರು (ಡಿ.25): ರಾಜ್ಯದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪರೀಕ್ಷೆಗೆ ಶಿವಮೊಗ್ಗದ ಪ್ರಯೋಗಾಲಯ ಮೇಲೆ ಒತ್ತಡ ಹೆಚ್ಚಾಗಿರುವುದರಿಂದ ಶೀಘ್ರದಲ್ಲೇ ಶಿರಸಿಯಲ್ಲಿ ಪ್ರಯೋಗಾಲಯ ಆರಂಭಿಸಲಿದ್ದೇವೆ. ಇದು ರೋಗ ತ್ವರಿತವಾಗಿ ಪತ್ತೆ ಹಚ್ಚಿ ಸಾವಿನ ಪ್ರಮಾಣ ಕಡಿಮೆ ಮಾಡಲು ಸಹಕಾರಿ ಆಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಕೆಎಫ್‌ಡಿ ಸೋಂಕಿತ ಎಲ್ಲಾ ರೋಗಿಗಳಿಗೆ ಉಚಿತವಾಗಿ ಆ್ಯಂಬುಲೆನ್ಸ್ ಮತ್ತು ಸಂಪೂರ್ಣ ಚಿಕಿತ್ಸೆ ನೀಡಲಾಗುವುದು. ಈ ಬಾರಿ ಒಂದು ಸಾವು ಸಹ ಉಂಟಾಗಬಾರದು ಎನ್ನುವ ಕಾರಣಕ್ಕೆ ಔಷಧ, ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಸ್ತುತ ಶಿವಮೊಗ್ಗದಲ್ಲಿ ಒಂದು ಪ್ರಯೋಗಾಲಯ ಕೆಲಸ ಮಾಡುತ್ತಿದ್ದು, ಒತ್ತಡ ಹೆಚ್ಚಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೂತನ ಪ್ರಯೋಗಾಲಯ ಪ್ರಾರಂಭಕ್ಕೆ ಸಿದ್ಧತೆ ನಡೆಸಿದ್ದೇವೆ. ಈಗಾಗಲೇ ಉಪಕರಣ ಖರೀದಿಸಿದ್ದು, ಸದ್ಯದಲ್ಲೇ ಪ್ರಾರಂಭ ಆಗಲಿದೆ. ಇದರಿಂದ ಶಿರಸಿ, ಸಿದ್ದಾಪುರ ಭಾಗದ ಜನರಿಗೆ ಹೆಚ್ಚು ಉಪಯೋಗ ಆಗಲಿದೆ. ತ್ವರಿತವಾಗಿ ರೋಗ ಪತ್ತೆ ಮಾಡಲು ಮತ್ತು ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸಲು ಇದು ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಅಕ್ಟೋಬರ್‌ನಿಂದ ಜೂನ್‌ ನಡುವೆ ಹೆಚ್ಚು: ಮಂಗನ ಕಾಯಿಲೆ ಪ್ರತಿ ವರ್ಷ ಅಕ್ಟೋಬರ್ ತಿಂಗಳಿಂದ ಜೂನ್ ವರೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ನಿಯಮಿತ ತಪಾಸಣೆ ಕಾರ್ಯ ಮಾಡಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

13 ಮಂದಿ ಕಾಯಿಲೆ ಪತ್ತೆ: ಈವರೆಗೆ ಶಿವಮೊಗ್ಗದಲ್ಲಿ 1163, ಚಿಕ್ಕಮಗಳೂರು- 124, ಉತ್ತರ ಕನ್ನಡ- 368, ಉಡುಪಿ- 12 ಜನರಿಗೆ ತಪಾಸಣೆ ನಡೆಸಿದ್ದು, 13 ಜನರಿಗೆ ಕಾಯಿಲೆ ಪತ್ತೆಯಾಗಿದೆ. ಎಲ್ಲರಿಗೂ ಸರಿಯಾದ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ. ಕೆಎಂಸಿ ಮಣಿಪಾಲ, ಎಸ್‌ಐಎಂಎಸ್‌ ಶಿವಮೊಗ್ಗ, ಕೆಆರ್‌ಐಎಂಎಸ್‌ ಕಾರವಾರ ಆಸ್ಪತ್ರೆಗಳನ್ನು ರೆಫೆರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ.

ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ತರಬೇತಿಗಳನ್ನು ಸಹ ನೀಡಲಾಗಿದ್ದು, ತೀರ್ಥಹಳ್ಳಿ, ಸಾಗರ, ಸಿದ್ದಾಪುರ, ಹೊನ್ನಾವರ, ಕೊಪ್ಪ, ಎನ್.ಆರ್.ಪುರ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರೋಗದ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದು ಗಣಮುಖರಾದವರನ್ನು ಮುಂದಿನ 21 ದಿನಗಳ ಕಾಲ ಆರೋಗ್ಯ ಇಲಾಖೆ ಸತತ ತಪಾಸಣೆ ಮಾಡುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಒಂದು ವರ್ಷದಲ್ಲಿ ಲಸಿಕೆ ಲಭ್ಯ?

ಐಸಿಎಂಆರ್ ಯಿಂದ ಮಂಗನ ಕಾಯಿಲೆಗೆ ಹೊಸ ಲಸಿಕೆ ಸಂಶೋಧಿಸಲು ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇನ್ನೊಂದು ವರ್ಷದಲ್ಲಿ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಿರುಪತಿ ತಿರುಮಲದಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ: ಸಚಿವ ರಾಮಲಿಂಗಾರೆಡ್ಡಿ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!