
ಬೆಂಗಳೂರು (ಡಿ.25): ತಿರುಪತಿ ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ತಿರುಮಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯೊಂದಿಗೆ ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೆಲ ಶಾಸಕರು ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿನ ನ್ಯೂನತೆ ಪ್ರಸ್ತಾಪಿಸಿದ್ದರು.
ಅದಕ್ಕೆ ಖುದ್ದು ತಾವೇ ತಿರುಪತಿ ತಿರುಮಲಕ್ಕೆ ರಾಜ್ಯದಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸುವುದಾಗಿ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಮಂಗಳವಾರ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದ ರಾಮಲಿಂಗಾರೆಡ್ಡಿ, ಟಿಟಿಡಿ ಅಧಿಕಾರಿಗಳೊಂದಿಗೆ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು, ಛತ್ರಗಳ ಗುಣಮಟ್ಟ ಪರಿಶೀಲನೆ ನಡೆಸಿದರು. ಉಳಿದಂತೆ ಏನೇ ಸಮಸ್ಯೆಗಳಿದ್ದರೂ ಶೀಘ್ರ ಬಗೆಹರಿಸಬೇಕು ಹಾಗೂ ಚಾಲ್ತಿ ಕಾಮಗಾರಿಗಳನ್ನು 2026ರ ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಿರುಮಲದಲ್ಲಿ ಮುಜರಾಯಿ ಇಲಾಖೆಗೆ ನೀಡಲಾಗಿರುವ ಭೂಮಿ ಗುತ್ತಿಗೆ ಅವಧಿ ವಿಸ್ತರಣೆ ಕುರಿತು ಟಿಟಿಡಿ ಅಧಿಕಾರಿಗಳೊಂದಿಗೆ ರಾಮಲಿಂಗಾರೆಡ್ಡಿ ಚರ್ಚೆ ನಡೆಸಿದರು. ಜತೆಗೆ ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ (12 ಗುಂಟೆ) ಭೂಮಿ ನೀಡಬೇಕು. ತಿರುಮಲದಲ್ಲಿ ಕರ್ನಾಟಕದ ಪರ ಟಿಟಿಡಿ ಕೈಗೊಂಡಿರುವ ಕಾಮಗಾರಿಗಳ ಮೇಲೆ ವಿಧಿಸಲಾಗಿರುವ ಸೆಂಟೇಜ್ ಶುಲ್ಕದಿಂದ ವಿನಾಯಿತಿ ನೀಡಬೇಕು.
ತಿರುಮಲದಲ್ಲಿ ರಾಜ್ಯದ ಅತಿಥಿ ಗೃಹಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸಬೇಕು. ಜತೆಗೆ ಹಾಲಿ ಇರುವ ಅತಿಥಿ ಗೃಹಗಳಲ್ಲಿನ ದುರಸ್ತಿ ಕಾಮಗಾರಿಗಳು, ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು. ಹಾಗೆಯೇ, ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ದರ್ಶನ ಸೌಲಭ್ಯ ಒದಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಮುಜರಾಯಿ ಇಲಾಖೆ ಆಯುಕ್ತ ಶರತ್, ಟಿಟಿಡಿ ಟ್ರಸ್ಟ್ ಸದಸ್ಯ ದರ್ಶನ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.