ಕೃಷ್ಣೆಯ ಮಡಿಲಲ್ಲಿ ಮೈಚಾಚಿ ಮಲಗಿರುವ ಅಥಣಿ ವಿಧಾನಸಭಾ ಕ್ಷೇತ್ರ, ಈಗ ಬಿಜೆಪಿಯ ಭದ್ರಕೋಟೆ. 2004ರಿಂದ ಈ ಕ್ಷೇತ್ರದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸತತವಾಗಿ ಮೂರು ಬಾರಿ ಆಯ್ಕೆಯಾಗುತ್ತ ಬಂದಿದ್ದರು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ ಗೆಲುವು ಸಾಧಿಸಿದರು. ಅಂದಿನ ಗೆಲುವಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಪಾತ್ರ ಮಹತ್ವದ್ದಾಗಿತ್ತು.
ಶ್ರೀಶೈಲ ಮಠದ
ಬೆಳಗಾವಿ (ಮಾ.20) : ಕೃಷ್ಣೆಯ ಮಡಿಲಲ್ಲಿ ಮೈಚಾಚಿ ಮಲಗಿರುವ ಅಥಣಿ ವಿಧಾನಸಭಾ ಕ್ಷೇತ್ರ, ಈಗ ಬಿಜೆಪಿಯ ಭದ್ರಕೋಟೆ. 2004ರಿಂದ ಈ ಕ್ಷೇತ್ರದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸತತವಾಗಿ ಮೂರು ಬಾರಿ ಆಯ್ಕೆಯಾಗುತ್ತ ಬಂದಿದ್ದರು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ ಗೆಲುವು ಸಾಧಿಸಿದರು. ಅಂದಿನ ಗೆಲುವಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಪಾತ್ರ ಮಹತ್ವದ್ದಾಗಿತ್ತು. ಆದರೆ, ಸೋತರೂ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ವರಿಷ್ಠರು ಕೈಬಿಡದೆ, ಪರಿಷತ್ ಸದಸ್ಯರನ್ನಾಗಿ ಮಾಡಿ ಡಿಸಿಎಂ ಕೂಡ ಮಾಡಿದರು. ಬಳಿಕ, ರಾಜಕೀಯ ಸ್ಥಿತ್ಯಂತರದಿಂದಾಗಿ ಕುಮಟಳ್ಳಿಯವರು ತಮ್ಮ ನಾಯಕ ರಮೇಶ ಜತೆಗೆ ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕುಮಟಳ್ಳಿ ಆಯ್ಕೆಯಾದರು.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದ ಲಕ್ಷ್ಮಣ ಸವದಿ(Laxman savadii)ಯವರು, ರಾಜಕೀಯ ಅನಿವಾರ್ಯತೆಗಾಗಿ ‘ಆಪರೇಷನ್ ಕಮಲ’ದ ಮೂಲಕ ಬಂದ ಮಹೇಶ ಕುಮಟಳ್ಳಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಈ ಬಾರಿ ಮತ್ತೆ ಅಥಣಿ(Athani Assembly constituency)ಯಿಂದಲೇ ಸ್ಪರ್ಧಿಸಲು ಲಕ್ಷ್ಮಣ ಸವದಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಸವದಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ, ಅವರು ಅಷ್ಟುಸುಲಭವಾಗಿ ಕ್ಷೇತ್ರ ಬಿಟ್ಟು ಕೊಡುವ ಸಾಧ್ಯತೆ ಕೂಡ ಕಡಿಮೆ.
Gift Politics: ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ್‌ಗೆ ಮತ್ತೊಂದು ಶಾಕ್
ಇಲ್ಲಿ ಕುಮಟಳ್ಳಿ ಕೂಡ ಬಿಜೆಪಿ ಟಿಕೆಟ್(BJP Ticket) ಆಕಾಂಕ್ಷಿ. ಜೊತೆಗೆ, ಕುಮಟಳ್ಳಿಗೆ ಟಿಕೆಟ್ ನೀಡಬೇಕು ಎಂದು ರಮೇಶ ಜಾರಕಿಹೊಳಿ ಕೂಡ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರಿದ್ದಾರೆ. ರಮೇಶ ಜಾರಕಿಹೊಳಿಯವರು ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡದಿದ್ದರೇ ನಾನು ಕೂಡ ಗೋಕಾಕ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಸಂದೇಶ ಕೊಟ್ಟು ವರಿಷ್ಠರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಸವದಿ ಪುತ್ರ ಚಿದಾನಂದ ಸವದಿ ಖಡಕ್ಕಾಗಿ ಪ್ರತಿಕ್ರಿಯೆ ನೀಡಿ, ಯಾವುದೇ ಕಾರಣಕ್ಕೂ ಅಥಣಿ ಕ್ಷೇತ್ರವನ್ನು ಬಿಟ್ಟುಕೊಡುವ ಮಾತೇ ಇಲ್ಲ. ಲಕ್ಷ್ಮಣ ಸವದಿ ಇಲ್ಲಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ. ಇನ್ನು, ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಗಜಾನನ ಮಂಗಸೂಳಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ಜೊತೆಗೆ, ಎಸ್.ಕೆ.ಬುಟಾಳಿ, ಧರೆಪ್ಪ ಠಕ್ಕನ್ನವರ, ಬಸವರಾಜ ಬುಟಾಳಿ, ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪುರ, ಬಸವರಾಜ ಬೀಸನಕೊಪ್ಪ ಕೂಡ ಟಿಕೆಟ್ ಕೋರಿ ಎಐಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಸ್ಪರ್ಧಿಸುವ ಸಾಧ್ಯತೆಯಿದೆ.
ಕ್ಷೇತ್ರದ ಹಿನ್ನೆಲೆ:
1967ರಲ್ಲಿ ಅಸ್ತಿತ್ವಕ್ಕೆ ಬಂದ ಅಥಣಿ ಕ್ಷೇತ್ರದಲ್ಲಿ 7 ಬಾರಿ ಕಾಂಗ್ರೆಸ್, 2 ಬಾರಿ ಜನತಾದಳ, 4 ಬಾರಿ ಬಿಜೆಪಿ ಗೆಲುವು ಸಾಧಿಸಿವೆ. ಸದ್ಯ ಇದು ಬಿಜೆಪಿಯ ಭದ್ರಕೋಟೆ. 2004ರಿಂದ ಸತತ ಮೂರು ಬಾರಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಲ್ಲಿ ಆಯ್ಕೆಯಾಗುತ್ತ ಬಂದಿದ್ದರು. ಆದರೆ, 2018ರಲ್ಲಿ ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ ಗೆಲುವು ಸಾಧಿಸಿದರಾದರೂ, ‘ಆಪರೇಷನ್ ಕಮಲ’ದಿಂದಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಬಂದರು.
ವರಿಷ್ಠರಿಗೆ ಟಿಕೆಟ್ ಕೇಳಿದರೆ ಟಿಕೆಟ್ ನೀಡುತ್ತಾರೆಂಬ ಆತ್ಮವಿಶ್ವಾಸ: ಲಕ್ಷ್ಮಣ ಸವದಿ
ಜಾತಿ ಲೆಕ್ಕಾಚಾರ:
ಒಟ್ಟು 1,89,365 ಮತದಾರರ ಪೈಕಿ, ಲಿಂಗಾಯತರು 48,472, ಎಸ್ಸಿ 26,000, ಕುರುಬರು 18,000, ಮುಸ್ಲಿಮರು 19, 800, ಜೈನರು 15,000, ಮರಾಠರು 16,511 ಇದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ. ಜೈನರು, ಕುರುಬರು, ಮಸ್ಲಿಮರು ಕೂಡ ನಿರ್ಣಾಯಕ ಸ್ಥಾನದಲ್ಲಿದ್ದಾರೆ