ನನ್ನನ್ನು ಮಂತ್ರಿ ಮಾಡುವಷ್ಟು ತಾಕತ್ತು, ಯೋಗ್ಯತೆ ನಿನಗೆ ಇದೆಯಾ? MP ರೇಣುಕಾಚಾರ್ಯ

Published : Oct 26, 2026, 08:32 AM IST
Renukacharya

ಸಾರಾಂಶ

ದಾವಣಗೆರೆಯಲ್ಲಿ ಸ್ವಪಕ್ಷದ ಶಾಸಕ ಬಿ.ಪಿ. ಹರೀಶ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬ್ಲ್ಯಾಕ್‌ಮೇಲ್, ಹೊಂದಾಣಿಕೆ ರಾಜಕೀಯದ ಆರೋಪಗಳ ಜೊತೆಗೆ ಸಚಿವ ಮಲ್ಲಿಕಾರ್ಜುನ್ ಭೇಟಿಯ ಹಿಂದಿನ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಸ್ಟಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮತ್ತು ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

ದಾವಣಗೆರೆ: ನನ್ನನ್ನು ಮಂತ್ರಿ ಮಾಡುವಷ್ಟು ತಾಕತ್ತು, ಯೋಗ್ಯತೆ ನಿನಗೆ ಇದೆಯಾ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ಶಾಸಕ ಹರಿಹರದ ಬಿ.ಪಿ.ಹರೀಶ ವಿರುದ್ಧ ಕೆಂಡ ಕಾರಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡಿದ್ದು ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ, ಕೆ.ಎಸ್. ಈಶ್ವರಪ್ಪನವರು. 2008ರಿಂದ 13ರವರೆಗೂ ನನಗೆ ಬ್ಲ್ಯಾಕ್ ಮೇಲ್ ಮಾಡಿದ ಮಹಾಶಯ ನೀನು ಎಂದರು.

ಯಡಿಯೂರಪ್ಪ ತಂದೆ ಸಮಾನರು, ಅಂತಹವರಿಗೆ ನಾನು ಬ್ಲ್ಯಾಕ್‌ಮೇಲ್‌ ಮಾಡಿಲ್ಲ. ಹೈದರಾಬಾದ್‌ಗೆ ಬಂದು ಹಣ ಎಣಿಸಿಕೊಂಡೆ, ಬೆಂಗಳೂರಿನಲ್ಲಿ ಎಷ್ಟು ಜಮೀನು ತಗೊಂಡಿದ್ದೀಯಾ ದಾಖಲೆ ಬಿಡುಗಡೆ ಮಾಡ್ಲಾ? 2013ರಲ್ಲಿ ನೀನು ಸೋತಾಗ ಹರಿಹರದಿಂದ ತಲೆಮರೆಸಿಕೊಂಡು ಬಂದು, ಬೆಂಗಳೂರಿನ ಜಯನಗರದ ಲಾಡ್ಜ್‌ವೊಂದರಲ್ಲಿದ್ದೆ. ಆಗ ಮಲೆಬೆನ್ನೂರಿನ ಬಿ.ಎಂ. ವಾಗೀಶಸ್ವಾಮಿ ಕರೆ ಮಾಡಿ, ಹರೀಶ್ ಸೋತು, ಕಾರ್ಯಕರ್ತರಲ್ಲಿ ಸಮಸ್ಯೆ ಮಾಡಿಕೊಂಡು ಬೆಂಗಳೂರಿಗೆ ಹೋಗಿದ್ದಾರೆಂಬ ವಿಷಯ ತಿಳಿಸಿದ್ದರು ಎಂದು ಅವರು ಹೇಳಿದರು.

ನಾನೂ ಸಹ 2023ರ ಚುನಾವಣೆಯಲ್ಲಿ ಸೋತರೂ ಜನರ ಮಧ್ಯೆ ಇದ್ದೇನೆ. ಆದರೆ, ಈ ಮಹಾನುಭಾವ ಬೆಂಗಳೂರಿಗೆ ಹೋಗಿದ್ದಾಗ ಇದ್ದಲ್ಲಿಗೆ ಹೋಗಿ, ತೆರಳಿ ಸಮಾಧಾನಪಡಿಸಿದ್ದೆ. ನಿನ್ನನ್ನು ಹರಿಹರಕ್ಕೆ ಕರೆ ತಂದಿದ್ದು ಯಾರೆಂಬುದನ್ನೇ ಮರೆತಿರಾ ಹರೀಶಣ್ಣ? ನನ್ನ ಮನೆಯಲ್ಲೇ ಇದ್ದೆಯಲ್ಲಪ್ಪಾ? ಊಟ ಮಾಡಿದ್ದು ಮರೆತೆಯಾ? ಸರ್ಕ್ಯೂಟ್ ಹೌಸ್‌ನಲ್ಲಿ ಸಿದ್ದೇಶ್ವರ ತೊಂದರೆ ಕೊಡುತ್ತಿದ್ದಾರೆಂದಾಗ ನಾನು ಎಸ್ಪಿ, ಡಿಸಿಗೆ ಹೇಳಿ, ನಿನ್ನ ಕೆಲಸ ಮಾಡಿಸಿಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸೇರಿ 1.4 ಲಕ್ಷ ಮತ ಪಡೆದಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ನಿನ್ನ ಹರಿಹರ ಕ್ಷೇತ್ರದಿಂದ ಬರೀ 74 ಸಾವಿರ ಮತ ಮಾತ್ರ ಬಂದಿದ್ದವು. ಉಳಿದ ಮತಗಳು ಎಲ್ಲಿ ಹೋದವು? ನೀನೂ ಹೊಂದಾಣಿಕೆ ರಾಜಕೀಯ ಮಾಡಿದ್ದೀಯಾ. ಎಸ್.ಎ. ರವೀಂದ್ರನಾಥ ಮನೆಯಲ್ಲಿ ಬಿ.ಪಿ.ಹರೀಶ್‌ಗೆ ಮತ್ತೆ ಬಿಜೆಪಿಗೆ ಸೇರಿಸಿದ್ದೆವು. ಅಂತಹ ರವೀಂದ್ರನಾಥ ಬಗ್ಗೆ ಮಾತನಾಡುತ್ತೀಯಾ? ರವೀಂದ್ರನಾಥ ಭೀಷ್ಮ. ಅಂತಹವರ ಬಗ್ಗೆಯೇ ಮಾತನಾಡುತ್ತೀಯಾ? ಬಿಜೆಪಿಯಿಂದ ಉಚ್ಚಾಟನೆಯಾದರೆ, ಕಾಂಗ್ರೆಸ್ಸಿನವರ ಜೊತೆ ರಾತ್ರಿ ಸೇರಿ, ಮಾತನಾಡುತ್ತೀರಿ ಎಂದು ಅವರು ಟೀಕಿಸಿದರು.

ಡಿ.ಕೆ.ಶಿವಕುಮಾರ ಭಿಕ್ಷೆ:

ಡಿ.ಕೆ.ಶಿವಕುಮಾರ ಭಿಕ್ಷೆಯಿಂದ ವಿಜಯೇಂದ್ರ ಶಾಸಕರಾಗಿಲ್ಲ. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಮಾಡಿದ್ದು ನೀನಾ? ವಿಜಯೇಂದ್ರ ಬದಲಾವಣೆ ಮಾಡುವುದಕ್ಕೆ ದೆಹಲಿಗೆ ಹೋಗಿದ್ದೆಯಲ್ಲಪ್ಪಾ? ವೈಯಕ್ತಿಕ ವಿಚಾರವನ್ನು ನೀನು ಕೆದಕಿದ್ದೀಯಾ? ನಾನು ಇಷ್ಟಕ್ಕೆ ಬಿಡುವುದಿಲ್ಲ. ವಿಪ ಚುನಾವಣೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮುಂದೆ ನಾವೇ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುತ್ತೇವೆಂದು ಹೇಳಿದ್ದೇವೆ. ಯಾವುದೇ ಹೊಂದಾಣಿಕೆ ಇಲ್ಲ. ವರಿಷ್ಠರಿಗೆ ದೂರು ಕೊಡುವುದಕ್ಕೆ ಹೋಗಬೇಕಿತ್ತು. ಸಚಿವರ ನಮ್ಮ ಭೇಟಿ ಆಕಸ್ಮಿಕ ಭೇಟಿಯಷ್ಟೇ. ಪ್ರೀತಿ, ವಿಶ್ವಾಸದಲ್ಲಿ ಭೇಟಿ ತಪ್ಪಲ್ಲ ಎಂದು ಅವರು ತಿರುಗೇಟು ನೀಡಿದರು.

ಇದು ಹೊಂದಾಣಿಕೆಯಲ್ಲ. ವರಿಷ್ಠರಿಗೆ ದೂರು ನೀಡಿದರೆ ಉತ್ತರ ಕೊಡುತ್ತೇವೆ. ಆದರೆ, ಮಾಧ್ಯಮಗಳ ಬಗ್ಗೆ ಹೇಳಿ, ಪ್ರಚಾರ ಪಡೆಯುತ್ತಿಯಾ. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಭೇಟಿ ವೇಳೆ ಪ್ರೀತಿಯಿಂದ ನನ್ನ ಗಲ್ಲಗಳನ್ನು ಹಿಡಿದಿದ್ದಾರೆ. ನಾನು ದಾವಣಗೆರೆ ಮತಕೇಂದ್ರದ ಬಳಿ ನಿಂತಿದ್ದಾಗ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಬಂದು, ಪ್ರೀತಿಯಿಂದ ಗಲ್ಲ ಹಿಡಿದರು. ಹಾಗಂತಾ ನಾವು ಹೊಂದಾಣಿಕೆ ರಾಜಕೀಯವನ್ನೇನೂ ಮಾಡಿಲ್ಲ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕಾರ್ಯಕರ್ತರಿಗೆ ನೋವು:

ಬಿ.ಪಿ.ಹರೀಶ್ ಹೇಳಿಕೆಗಳಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದು, ಈ ಬಗ್ಗೆ ಮುಖಂಡರು, ಕಾರ್ಯಕರ್ತರಿಗೆ ಕೈಮುಗಿದು ಕ್ಷಮೆ ಕೇಳುತ್ತೇನೆ. ಯಾರೂ ಸ್ವಪಕ್ಷೀಯರ ಬಗ್ಗೆ ಮಾತನಾಡಬಾರದೆಂದು ಸ್ವತಃ ನನಗೆ ನಾನೇ ಲಕ್ಷ್ಮಣ ರೇಖೆ ಎಳೆದುಕೊಂಡಿದ್ದೆ. ಆದರೆ, ಬಿ.ಪಿ.ಹರೀಶ್‌ ಹೇಳಿಕೆಗಳಿಂದ ಕಾರ್ಯಕರ್ತರಿಗೆ ನೋವಾಗಿದೆ. ಜೀವನದಲ್ಲಿ ಹೊಂದಾಣಿಕೆ ರಾಜಕೀಯವೇ ನನಗೆ ಗೊತ್ತಿಲ್ಲ. ನಾನು ಅಭ್ಯರ್ಥಿಯಾಗಿದ್ದರೂ 2008ರ ಚುನಾವಣೆಯಲ್ಲಿ ನಾನೇ ನಿನಗೆ ಹಣ ಕೊಟ್ಟಿದ್ದೇನೆ. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಮಧ್ಯಸ್ಥಿಕೆಯಲ್ಲಿ ಬೇಕಿದ್ದರೆ ಚರ್ಚೆಗೆ ಬರಲಿ, ಮಾತನಾಡುತ್ತೇನೆ ಎಂದು ಅವರು ಕಿಡಿಕಾರಿದರು.

ಸ್ಟಿಂಗ್ ಪ್ರಕರಣ ಸಿಬಿಐಗೆ ಒಪ್ಪಿಸಲಿ: ರೇಣು

ಇಡೀ ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಸಿದ್ದರಾಮಯ್ಯನಂತಹವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ಸ್ಟಿಂಗ್ ಪ್ರಕರಣ ಸಿಬಿಐಗೆ ಒಪ್ಪಿಸಿದರೆ ಸತ್ಯಾಂಶ ಹೊರ ಬರುತ್ತದೆ. ಸರ್ಕಾರ ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರನೀಡಬೇಕು. ಅದೇ ರೀತಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಂದೆ ಹೆಸರಿನ ಗೊಂದಲದಲ್ಲಿ ಜಿರಳೆ ಲೀಡರ್​ ಸೌರವ್​ ದಾಸ್​: SIR ವಿರೋಧದ ಕಾರಣ ಹೆಕ್ಕಿ ತೆಗೆದರು- ಅಪ್ಪ ಯಾರು
ಸ್ಟಿಂಗ್ ಆಪರೇಷನ್, ಆರೆಸ್ಸೆಸ್, ರಾಹುಲ್ ಗಾಂಧಿ ಸೀಕ್ರೆಟ್ ವಿದೇಶ ಪ್ರವಾಸ... ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಹೇಳಿಕೆ!