ಬೆಂಗಳೂರು(ಜೂ.09): ರಾಜ್ಯ ರಾಜಕಾರಣದಲ್ಲಿ ತಂತ್ರ ಪ್ರತಿತಂತ್ರ ಸಾಮಾನ್ಯ. ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ಈ ರಾಜಕೀಯ ಗೇಮ್ ಪ್ಲಾನ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಕಾರಣ ಬಿಜೆಪಿಯಿಂದ 2 ಸ್ಥಾನ ಹಾಗೂ ಕಾಂಗ್ರೆಸ್‌ನಿಂದ ಒಂದು ಸ್ಥಾನದ ಗೆಲುವು ಖಚಿತ. ಇನ್ನುಳಿದಿರುವ ಒಂದು ಸ್ಥಾನಕ್ಕೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದೆ. ಈ ಗೆಲುವು ಯಾರಿಗೆ ಅನ್ನೋ ಕುತೂಹಲ ಇನ್ನೂ ಹಾಗೇ ಉಳಿದಿದೆ.
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಗೆಲುವು ಖಚಿತ. 3ನೇ ಅಭ್ಯರ್ಥಿಯಾಗಿ ಬಿಜೆಪಿ ಲೆಹರ್ ಸಿಂಗ್ ಕಣಕ್ಕಿಳಿಸಿದೆ. ಇತ್ತ ಜೈರಾಮ್ ರಮೇಶ್ ಮೊದಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರ ಗೆಲುವು ಖಚಿತ. ಇದರ ನಡುವೆ ಮನ್ಸೂರ್ ಆಲಿ ಖಾನ್ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇತ್ತ ಜೆಡಿಎಸ್ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದೆ. ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಕೆಸರೆರಚಾಟದಲ್ಲಿ ತೊಡಗಿದೆ. ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ,ಬಿಜೆಪಿ ಕೋಮುವಾದಿ ಪಕ್ಷವನ್ನು ದೂರವಿಡಿ ಅನ್ನೋ ಹಳೇ ಡೈಲಾಗ್ ಹರಿಬಿಟ್ಟಿದೆ. ಇವರಿಬ್ಬರ ಜಗಳ ಬಿಜೆಪಿಗೆ ವರವಾಗಲಿದೆ ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿ ಸಮಾಧಾನದಲ್ಲಿದೆ.
ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್ ಶಾಸಕರಿಗೆ ಪತ್ರ!
ಕಳೆದೆರಡು ವಾರದಿಂದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಬಹಿರಂಗ ಹೇಳಿಕಿ, ಏಟಿಗೇ ಎದಿರೇಟು ರಾಜ್ಯ ರಾಜಕಾರಣದಲ್ಲಿ ಹೊಸ ಗುದ್ದಾಟಕ್ಕೆ ಕಾರಣವಾಗಿದೆ. ‘ಕಳೆದ ಬಾರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದವರು ನಾವು. ದೇವೆಗೌಡರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. ಈಗ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ನಮಗೆ ಬೆಂಬಲಿಸಲಿ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತೀಕ್ಷ$್ಣವಾಗಿ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ‘ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಕಾಂಗ್ರೆಸ್‌ನವರು ತಮ್ಮ ಅಭ್ಯರ್ಥಿಯನ್ನು ವಾಪಸ್ ಪಡೆದು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿ’ ಎಂದಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಬೇಕು ಎಂದಾಗಿದ್ದರೆ ಜೆಡಿಎಸ್ ತಮ್ಮ ಅಭ್ಯರ್ಥಿ ಕಣಕ್ಕಿಳಿಸಬಾರದಿತ್ತು. ಜೆಡಿಎಸ್‌ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಬಳಿಕ ಜೆಡಿಎಸ್ ತಮ್ಮ ಅಭ್ಯರ್ಥಿ ಹಾಕಿದ್ದಾರೆ. ಕೋಮುವಾದಿ ಬಿಜೆಪಿ ಸೋಲಿಸುವ ಉದ್ದೇಶವಿದ್ದರೆ ಜೆಡಿಎಸ್ ಏತಕ್ಕಾಗಿ ಅಭ್ಯರ್ಥಿ ಹಾಕಬೇಕಿತ್ತು?’ ಎಂದು ಟಾಂಗ್ ನೀಡಿದರು.
ಜೆಡಿಎಸ್‌ಗೇ ಮತ ಹಾಕ್ಬೇಕು ಅಂತ ಅಂದ್ಕೊಂಡಿದ್ದೇನೆ, ಕೊನೆ ಕ್ಷಣದಲ್ಲಿ ಏನ್ ಬೇಕಾದ್ರೂ ಆಗಬಹುದು: ಗುಬ್ಬಿ ಶಾಸಕ
ಜೆಡಿಎಸ್ ವಿಪ್ ಜಾರಿ
ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಧಿಕೃತ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರಿಗೆ ಮತ ನೀಡುವಂತೆ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ.ಜೆಡಿಎಸ್ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ ಅವರು ವಿಪ್ ಜಾರಿಗೊಳಿಸಿದ್ದಾರೆ. ಜೂ.10ರಂದು ವಿಧಾನಸೌಧದ ಮೊದನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ವೇಳೆ ಶಾಸಕರು ಕಡ್ಡಾಯವಾಗಿ ಮತದಾನದಲ್ಲಿ ಭಾಗಿಯಾಗಿ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ವಿಪ್ ಜಾರಿ ಮಾಡಲಾಗಿದೆ.
ಬಿಜೆಪಿಗೆ ಬೇರೆ ಪಕ್ಷದ ಮತ ಬೇಡ,3 ಮಂದಿಯೂ ಗೆಲ್ತಾರೆ: ಬಿಎಸ್‌ವೈ
ರಾಜ್ಯಸಭೆಯಲ್ಲಿ ನಮ್ಮ ಮೂರು ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ. ನಮಗೆ ಯಾರ ಮತವೂ ಬೇಡ. ನಮ್ಮ ಮತ ಒಂದೇ ಸಾಕು. ನಾವು ಚುನಾವಣೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ರಾಜ್ಯಸಭೆಗೆ ಮೂವರು ಅಭ್ಯರ್ಥಿಗಳನ್ನು ಹಾಕಿದ್ದೇವೆ. ನಮ್ಮ ಬಳಿ 122 ಮತಗಳಿವೆ. ಹೀಗಾಗಿ ಬೇರೆಯವರ ಸಹಾಯವಿಲ್ಲದೆ ನಮ್ಮ ಪಕ್ಷದ ಮೂರೂ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ ಎಂದು ಹೇಳಿದರು. ವಿವರಣೆ ನೀಡಲು ನಿರಾಕರಿಸಿದ ಅವರು, ಲೆಹರ್ ಸಿಂಗ್ ಸೇರಿ ಎಲ್ಲರೂ ಗೆಲ್ಲುತ್ತಾರೆ. ನಮ್ಮ ಮತಗಳಲ್ಲೇ ಮೂರೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ನೋಡುತ್ತಿರಿ ಎಂದರು.