
ಬೆಂಗಳೂರು: ನಾಲ್ಕು ರಾಜ್ಯಸಭಾ ಸ್ಥಾನಕ್ಕಾಗಿ ರಾಜ್ಯದ ಮುಂಚೂಣಿ ಮೂರು ಪಕ್ಷಗಳು ಪ್ರಯತ್ನ ಪಡುತ್ತಿದೆ. ಬಿಜೆಪಿಯಿಂದ ಎರಡು ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲಲಿದ್ದಾರೆ. ಅದೇ ರೀತಿ ಕಾಂಗ್ರೆಸ್‌ಗೂ ಒಂದು ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಮಸ್ಯೆಯಿಲ್ಲ. ಆದರೆ ಜೆಡಿಎಸ್ ಮಾತ್ರ ಒಂದೂ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕುಪೇಂದ್ರ ರೆಡ್ಡಿ ಬೆಳಗ್ಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಬೆಂಬಲ ಕೋರಿದ್ದರು. ಆದರೆ ಈಗ ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ನಿಲ್ಲಿಸಿದೆ. ಜತೆಗೆ ಜೆಡಿಎಸ್ ಬೆಂಬಲವನ್ನು ಕೋರುತ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈಗ ಕುಪೇಂದ್ರ ರೆಡ್ಡಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲದಿಂದ ಗೆಲ್ಲಬೇಕು, ಇಲ್ಲದಿದ್ದರೆ ನಾಮಪತ್ರ ಹಿಂಪಡೆಯಬೇಕು. ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಮಾಡಿರುವ ಬಿಜೆಪಿ, ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುವುದು ಬಹುತೇಕ ಕಠಿಣ.
ನಂಬರ್ ಗೇಮ್:
ರಾಜ್ಯಸಭೆಗೆ ಆಯ್ಕೆಯಾಗಲು 45 ಮತಗಳ ಅಗತ್ಯವಿದೆ. ಈ ಲೆಕ್ಕಾಚಾರದಲ್ಲಿ ಬಿಜೆಪಿ ಎರಡು ಅಭ್ಯರ್ಥಿಯನ್ನು ಗೆಲ್ಲಿಸಿದ ನಂತರವೂ 32 ಮತಗಳು ಉಳಿಯಲಿದೆ. ಜೆಡಿಎಸ್ ಬಳಿಯೂ ಒಟ್ಟೂ 32 ಮತಗಳಿವೆ. ಕಾಂಗ್ರೆಸ್ ಒಂದು ಅಭ್ಯರ್ಥಿಯನ್ನು ಗೆಲ್ಲಿಸಿದ ನಂತರ 25 ಹೆಚ್ಚುವರಿ ಮತಗಳನ್ನು ಹೊಂದಿರಲಿದೆ. ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವು ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಯ ಗೆಲುವಿನ ಕೀಲಿ ಕೈ ಜೆಡಿಎಸ್ ಬಳಿ ಇರಲಿದೆ. ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದರೆ, ಜೆಡಿಸ್ ಗೆಲುವಿಗೆ ಬಿಜೆಪಿಯ ಬೆಂಬಲ ಬೇಕಾಗಲಿದೆ.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಆಯ್ಕೆ
ಜೆಡಿಎಸ್ ಮತ್ತೆ ಕಿಂಗ್ ಮೇಕರ್:
ಸ್ವಂತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಷ್ಟು ಶಕ್ತಿ ಜೆಡಿಎಸ್‌ಗೆ ಇಲ್ಲದಿದ್ದರೂ, ಬಿಜೆಪಿಯ ಮೂರನೇ ಅಭ್ಯರ್ಥಿ ಮತ್ತು ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ಜೆಡಿಎಸ್‌ಗಿದೆ. ಈ ಹಿಂದೆ ಲೋಕಸಭೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಎಚ್ ಡಿ ದೇವೇಗೌಡರು ಸೋತಾಗ, ಕಾಂಗ್ರೆಸ್ ಬೆಂಬಲದಿಂದಲೇ ರಾಜ್ಯಸಭೆ ಪ್ರವೇಶಿಸಿದ್ದರು. ಹಿಂದೆ ಮಾಡಿದ ಸಹಾಯವನ್ನೇ ಲೆಕ್ಕದಲ್ಲಿಟ್ಟುಕೊಂಡು ಕಾಂಗ್ರೆಸ್ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿರಬಹುದು. ದೇವೇಗೌಡರು ಮತ್ತೆ ದೇಶದ ಸಂಸತ್ತಿಗೆ ಪ್ರವೇಶಿಸಿದ್ದಕ್ಕೆ ಕಾಂಗ್ರೆಸ್‌ನ ಸಹಾಯ ಮರೆಯುವಂತಿಲ್ಲ. ಮತ್ತು ಮನ್ಸೂರ್ ಅಲಿ ಖಾನ್ ಅವರ ತಂದೆ ರಹ್ಮಾನ್ ಖಾನ್ ಅವರ ದೇವೇಗೌಡರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮನ್ಸೂರ್ ಅಲಿ ಖಾನ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದೂ ಕೆಲ ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ
ಒಂದು ವೇಳೆ ಈ ಲೆಕ್ಕಾಚಾರದಂತೆ ಜೆಡಿಎಸ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಕಾಂಗ್ರೆಸ್ ಎರಡು ಸದಸ್ಯರನ್ನು ರಾಜ್ಯಸಭೆಗೆ ಕಳಿಸಬಹುದು. ಇಲ್ಲವೇ ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಮೂರು ಸದಸ್ಯರನ್ನು ಮತ್ತು ಕಾಂಗ್ರೆಸ್ ಒಂದು ಸದಸ್ಯರನ್ನು ರಾಜ್ಯಸಭೆಗೆ ಕಳಿಸಲಿದೆ. ಈ ಎರಡೂ ಲೆಕ್ಕಾಚಾರಗಳನ್ನು ಅಲ್ಲಗಳೆದು, ಬಿಜೆಪಿ ಈ ಬಾರಿ ಜೆಡಿಎಸ್‌ಗೆ ಬೆಂಬಲ ಕೊಟ್ಟರೆ, ಕುಪೇಂದ್ರ ರೆಡ್ಡಿ ಜೆಡಿಎಸ್‌ನಿಂದ ರಾಜ್ಯಸಭೆಗೆ ತೆರಳುತ್ತಾರೆ. ಈ ಮೂರು ಲೆಕ್ಕಾಚಾರದಲ್ಲಿ ಒಂದಂತೂ ಆಗಲೇಬೇಕು.
ವಿಧಾನಸಭೆಯ ಸಂಖ್ಯಾಬಲ: 224
ಬಿಜೆಪಿ-120
ಕಾಂಗ್ರೆಸ್-69
ಜೆಡಿಎಸ್-32
ಇತರೆ-03
ಡಿಕೆ ಶಿವಕುಮಾರ್ ಜೆಡಿಎಸ್ ಬೆಂಬಲ ನೀಡುವಂತೆ ಕೋರಿದ್ದಾರೆ. ಆದರೆ ಅತ್ತ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಜೆಡಿಎಸ್ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂದಿದ್ದಾರೆ. ಮನ್ಸೂರ್ ಅಲಿ ಖಾನ್ ಗೆಲ್ಲಬೇಕು ಅಂದರೆ ಜೆಡಿಎಸ್‌ನ ಬಾಹ್ಯ ಬೆಂಬಲ ಬೇಕೇಬೇಕು. ಹೀಗಿರುವಾಗ ಸಿದ್ದರಾಮಯ್ಯ ಈ ವಿಚಾರದಲ್ಲಿ ತಗ್ಗುತ್ತಾರ ಅಥವಾ ಡಿಕೆ ಶಿವಕುಮಾರ್ ಮನವಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಒಪ್ಪುತ್ತಾರ ಎಂಬುದನ್ನು ಕಾದುನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.