ಮುರುಗೇಶ್ ನಿರಾಣಿ ದಿಲ್ಲಿ ಯಾತ್ರೆಗಳು ಹೆಚ್ಚಾಗುತ್ತಿರುವುದೇಕೆ.?

By Kannadaprabha News  |  First Published Jul 16, 2021, 4:48 PM IST

ಮುರುಗೇಶ್‌ ನಿರಾಣಿ ಅವರ ದಿಲ್ಲಿ ಭೇಟಿಗಳು ಜಾಸ್ತಿ ಆಗಿವೆ.ಭೇಟಿಯ ಕಾರಣವನ್ನೂ ಎಲ್ಲಿಯೂ ಬಹಿರಂಗಪಡಿಸುತ್ತಿಲ್ಲ. ದಿಢೀರನೇ ದೆಹಲಿಗೆ ಹಾರುವುದೇಕೆ ನಿರಾಣಿ..? 


ಬೆಂಗಳೂರು (ಜು. 16): ಈ ಹಿಂದೆ ಕರ್ನಾಟಕದಲ್ಲಿನ ನಾಯಕತ್ವ ಬದಲಾವಣೆ ವಿವಾದದಲ್ಲಿ ಯತ್ನಾಳ್‌, ಅರವಿಂದ ಬೆಲ್ಲದ ಮತ್ತು ಸಿ.ಪಿ.ಯೋಗೇಶ್ವರ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರೂ, ಮುರುಗೇಶ್‌ ನಿರಾಣಿ ಅವರ ದಿಲ್ಲಿ ಭೇಟಿಗಳು ಜಾಸ್ತಿ ಆಗಿವೆ. ನಿರಾಣಿ ಜಾಣತನದಿಂದ ಏನೂ ಹೇಳಿಕೆ ನೀಡುತ್ತಿಲ್ಲ.

ಆದರೂ ಅವರ ಯಡಿಯೂರಪ್ಪನವರ ಜೊತೆಗಿನ ಸಂಬಂಧ ಅಷ್ಟೇನೂ ಸುಮಧುರವಾಗಿ ಉಳಿದಿಲ್ಲ. ಜೊತೆಗೆ ನಿರಾಣಿ ದಿಲ್ಲಿಗೆ ಹೋದಾಗಲೆಲ್ಲ ಅಮಿತ್‌ ಶಾ ಭೇಟಿಗೆ ಸಮಯ ಸಿಗುತ್ತಿರುವುದು ಗಮನಿಸಬೇಕಾದ ಬೆಳವಣಿಗೆ. ಆದರೆ ಶಾ ಏನು ಹೇಳಿದರು ಎಂಬ ಬಗ್ಗೆ ನಿರಾಣಿ ಎಲ್ಲಿಯೂ ಬಾಯಿಬಿಡುತ್ತಿಲ್ಲ. ಪಂಚಮಸಾಲಿ ನಾಯಕತ್ವ ಎಂಬ ಪ್ರಶ್ನೆ ಬಂದಾಗ ಬಿಜೆಪಿಯಲ್ಲಿ ಕಣ್ಣಿಗೆ ಕಾಣುವವರು ಮೂರು ಜನ. ಬಸನಗೌಡ ಯತ್ನಾಳ್‌, ಮುರುಗೇಶ್‌ ನಿರಾಣಿ ಮತ್ತು ಅರವಿಂದ ಬೆಲ್ಲದ. ಇದರಲ್ಲಿ ಯತ್ನಾಳ್‌ ವಾಚಾಳಿ, ಬೆಲ್ಲದಗೆ ಅನುಭವ ಕಡಿಮೆ. ಹೀಗಾಗಿ ದಿಲ್ಲಿ ನಾಯಕರು ಬಂಡವಾಳ ಹೂಡುವ ಮತ್ತು ಜಾತಿ ಹಿಡಿದಿಡುವ ಸಾಮರ್ಥ್ಯ ಇರುವ ನಿರಾಣಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತವೆ ನಿರಾಣಿ ಆಪ್ತ ಮೂಲಗಳು.

Tap to resize

Latest Videos

ಶೋಭಾ ಕರಂದ್ಲಾಜೆಗೆ ರಾಜಕೀಯ ಪುನರ್ಜನ್ಮ, ಮೋದಿ ಸಂಪುಟ ಸರ್ಜರಿ ಹಿಂದಿನ ಸತ್ಯಗಳು

ಖೂಬಾ ಹಿಂದೆ ಬಾಬಾ ಬಲ!

ಕರ್ನಾಟಕದ ಬಿಜೆಪಿ ನಾಯಕರು ಹೈಕಮಾಂಡ್‌ಗೆ ಏನಾದರೂ ಹೇಳಬೇಕು ಎಂದರೆ ಒಂದೋ ಯಡಿಯೂರಪ್ಪ ಮೂಲಕ ಹೇಳಬೇಕು, ಇಲ್ಲವೇ ಬಿ.ಎಲ್‌.ಸಂತೋಷ್‌ ಮತ್ತು ಪ್ರಹ್ಲಾದ್‌ ಜೋಶಿ ಮೂಲಕ ಸಂಪರ್ಕ ಮಾಡಬೇಕು. ಆದರೆ ಈಗ ಸೀನಿಯರ್‌ ಆಗಿರುವ ಶಿವಕುಮಾರ್‌ ಉದಾಸಿ ಮತ್ತು ಪಿ.ಸಿ.ಗದ್ದಿಗೌಡರ್‌ರನ್ನು ಹಿಂದಿಕ್ಕಿ ಭಗವಂತ ಖೂಬಾ ಮಂತ್ರಿ ಆಗಲು ಯೋಗ ಗುರು ಬಾಬಾ ರಾಮದೇವ್‌ ಮುಖ್ಯ ಕಾರಣವಂತೆ. ಹಿಂದೆ 2014ರಲ್ಲಿ ಕೂಡ ಖೂಬಾ ಸೂರ್ಯಕಾಂತ ನಾಗಮಾರಪಲ್ಲಿಯನ್ನು ಹಿಂದೆ ಹಾಕಿ ಟಿಕೆಟ್‌ ಪಡೆಯಲು ಬಾಬಾ ರಾಮದೇವ್‌ ಒತ್ತಡ ಕೆಲಸ ಮಾಡಿತ್ತು ಎನ್ನಲಾಗಿದೆ. ಈಗಲೂ ಬಾಬಾ ರಾಮದೇವ್‌ ಅವರು ಅಮಿತ್‌ ಶಾ ಜೊತೆ ಮಾತಾಡಿದ ಮೇಲೆಯೇ ಖೂಬಾ ಹೆಸರು ಫೈನಲ್‌ ಆಯಿತು ಎಂಬ ಸುದ್ದಿ ದಿಲ್ಲಿಯಲ್ಲಿದೆ. ಬಹಳ ದಿನಗಳಾದ ಮೇಲೆ ಹೈದರಾಬಾದ್‌ ಕರ್ನಾಟಕದ ಲಿಂಗಾಯತರನ್ನು ದಿಲ್ಲಿ ಗುರುತಿಸಿದೆ.

ನಸಬಂದಿಯ ನೆನಪುಗಳು

ತುರ್ತು ಪರಿಸ್ಥಿತಿ ನೆನಪು ಮಾಡಿಕೊಂಡಾಗ ಸಂಜಯ ಗಾಂಧಿ​ ನಡೆಸಿದ ನಸಬಂದಿ ಅಂದರೆ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಕೂಡ ನೆನಪಿಗೆ ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಸಂಜಯ ಗಾಂ​ಧಿ ದೇಶದಲ್ಲಿ ಒಂದು ಕೋಟಿ ನಸಬಂದಿ ಮಾಡಿಸಿದ್ದಾಗಿ ಹೇಳಿಕೊಂಡಿದ್ದರು. ಚಿತ್ರನಟಿ ಅಮೃತಾ ಸಿಂಗ್‌ರ ತಾಯಿ ರುಕ್ಸಾನಾ ಸುಲ್ತಾನಾಗೆ ದಿಲ್ಲಿ ಜಾಮಾ ಮಸೀದಿ ಬಳಿ 8000 ಮುಸ್ಲಿಮರಿಗೆ ನಸಬಂದಿ ಮಾಡಿಸಿದ್ದಕ್ಕಾಗಿ 80 ಸಾವಿರ ಹಣವನ್ನು ಇಂದಿರಾ ಗಾಂಧಿ​ ಸರ್ಕಾರ ಕೊಟ್ಟಿತ್ತು.

ಉತ್ತರ ಪ್ರದೇಶದಲ್ಲಿ ಈಗ ದಿಢೀರನೇ ಜನಸಂಖ್ಯಾ ನೀತಿ ಜಾರಿಗೆ ಬಂದಿರುವುದೇಕೆ ಗೊತ್ತೆ.?

ಆದರೆ ಷರಿಯತ್‌ ಪ್ರಕಾರ ಬಲವಂತ ಮಾಡುವುದು ತಪ್ಪು ಎಂದು ಜಾಮಾ ಮಸೀದಿ ಇಮಾಮ್‌ ಬುಖಾರಿ ಫತ್ವಾ ಹೊರಡಿಸಿದ್ದರಿಂದ ಮುಸ್ಲಿಮರು ಕಾಂಗ್ರೆಸ್‌ ವಿರುದ್ಧ ಮತ ಹಾಕಿದ್ದರು. ಕೊನೆಗೆ 1980ರಲ್ಲಿ ಇಂದಿರಾ ಗಾಂ​ಧಿ ಬುಖಾರಿ ಬಳಿ ಹೋಗಿ ಕ್ಷಮೆ ಯಾಚಿಸಿದ ಮೇಲೆ ಮುಸ್ಲಿಮರ ಸಿಟ್ಟು ಶಾಂತ ಆಗಿತ್ತು. ಆ ಘಟನೆ ಕಾರಣದಿಂದಲೇ ಭಾರತದ ಬಹುತೇಕ ರಾಜಕೀಯ ಪಕ್ಷಗಳು ಏಕರೂಪದ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ ಅಂದಕೂಡಲೇ ಮೌನವಾಗಿ ಬಿಡುತ್ತವೆ. ಅಭಿವೃದ್ಧಿ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕಾದರೆ ಜನಸಾಂದ್ರತೆಯ ಪ್ರಮಾಣ ನಿಧಾನವಾಗಿ ಕಡಿಮೆ ಆಗಬೇಕು ಎಂಬುದರ ಬಗ್ಗೆ ಜಾಣ ಮರೆವು ಆವರಿಸಿಕೊಳ್ಳುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!