'ಯಾರೇ ಲಾಗ ಹೊಡೆದರೂ ನನ್ನನ್ನೇನು ಮಾಡಲು ಸಾಧ್ಯವಿಲ್ಲ'

By Web DeskFirst Published Nov 25, 2019, 7:53 AM IST
Highlights

ಯಾರೇ ಲಾಗ ಹೊಡೆದರೂ ನನ್ನನ್ನೇನು ಮಾಡಲು ಸಾಧ್ಯವಿಲ್ಲ|  ಕರ್ನಾಟಕದಲ್ಲಿ ನನ್ನನ್ನು ಮುಗಿಸಬೇಕೆಂದು ಕೆಲವರು ಯತ್ನಿಸಿದ್ದಾರೆ: ಯತ್ನಾಳ್‌ ಕಿಡಿ

ಬಾಗಲಕೋಟೆ[ನ.25]: ಉಪಚುನಾವಣೆಯಲ್ಲಿ ಪ್ರಚಾರದ ಉಸ್ತುವಾರಿ ನೀಡದ ಕಾರಣ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ನನ್ನನ್ನು ಮುಗಿಸಬೇಕೆಂದು ಕೆಲವರು ಯತ್ನ ನಡೆಸಿದ್ದಾರೆ. ಯಾರೇ ಲಾಗ ಹೊಡೆದರು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ಪಂಚಮಸಾಲಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಲಿಲ್ಲ. ಅದನ್ನು ಅಲ್ಲಿಯೇ ಇಟ್ಟುಕೊಂಡು ಕುಳ್ಳಿರಿ ಎಂದೆ. ಈಗ ಅಭ್ಯರ್ಥಿಗಳು ನನಗೆ ಕರೆ ಮಾಡಿ ನೀವು ಬಂದು ಭಾಷಣ ಮಾಡಿದರೆ ಸಾಕು ನಾವು ಗೆಲ್ಲುತ್ತೇವೆ ಅನ್ನುತ್ತಿದ್ದಾರೆ ಎಂದರು.

ವಿಜಯಪುರ: ಯತ್ನಾಳ, ಪಟ್ಟ​ಣ​ಶೆಟ್ಟಿ ಬೆಂಬ​ಲಿ​ಗರ ಮಧ್ಯೆ ಮಾತಿನ ಚಕಮಕಿ

ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದು ಪ್ರಚಾರ ಮಾಡು ಅಂತಾ ಹೇಳಿದ್ದಾರೆ. ಈ ಹಿಂದೆ ಕಲಬುರ್ಗಿ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಾನು ಮಾಡಿದ ಭಾಷಣದಿಂದ ಉಮೇಶ ಜಾಧವ ಅಂಥವರು ಗೆದ್ದರು. ಅಲ್ಲಿ ಪಂಚಮಸಾಲಿ ಸಮುದಾಯವು ಹೆಚ್ಚಾಗಿದೆ, ನಾನು ನನ್ನದೆ ಶಕ್ತಿಯನ್ನು ಇಟ್ಟುಕೊಂಡಿದ್ದೇನೆ. ಸಮಾಜಕ್ಕೆ ಅನ್ಯಾಯವಾದಾಗ ದನಿ ಎತ್ತಿದ್ದೇನೆ. ನೆರೆ ಪರಿಹಾರದ ಬಗ್ಗೆ ಮಾತನಾಡಿದಾಗ ನನಗೆ ನೋಟಿಸ್‌ ನೀಡಲಾಗಿತ್ತು ಎಂದು ನೆನಪಿಸಿಕೊಂಡರು.

ಜೆಡಿಎಸ್‌ ಶಾಸಕರು ಸಿದ್ಧರಿದ್ದಾರೆ:

ಈಗಾಗಲೇ ಜೆಡಿಎಸ್‌ನ ಇಬ್ಬರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಇನ್ನು ಅನೇಕ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಯತ್ನಾಳ್‌ ಬಾಂಬ್‌ ಸಿಡಿಸಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಆದಿಯಾಗಿ ಯಾವ ಶಾಸಕರಿಗೂ ಮಧ್ಯಂತರ ಚುನಾವಣೆ ಬೇಡವಾಗಿದೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಮಾತನ್ನು ಯಾರು ಕೇಳುವುದಿಲ್ಲ. ಅವರನ್ನು ಯಾರು ಬೆಂಬಲಿಸುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ಎಲ್ಲ ಶಾಸಕರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಯಡಿಯೂರಪ್ಪ ಸರ್ಕಾರ ಸಂಪೂರ್ಣ ಅವಧಿ ಆಡಳಿತವನ್ನು ಮುಗಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ ಬೆಳಗಾವಿ ರಾಜಕಾರಣ ಬದಲಿಸುವ ಮಾತಿಗೆ ಹಾಗೂ ಅಥಣಿ ಶಾಸಕ ಮಹೇಶ ಕುಮಟಳ್ಳಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ನಮ್ಮ ಸಹೋದರಿಯಾಗಿರುವ ಆಕೆಯ ಹೇಳಿಕೆಗೆ ಸೋಮವಾರ ಅಥಣಿಗೆ ಹೊರಟಿದ್ದೇನೆ. ಅಲ್ಲಿಯೇ ಉತ್ತರಿಸುವೆ. ಉಪಚುನಾವಣೆಯಲ್ಲಿ 15 ಸ್ಥಾನಗಳಲ್ಲಿ 12 ಸ್ಥಾನ ಗೆಲ್ಲುವ ಮೂಲಕ ಮೂರೂವರೆ ವರ್ಷ ಆಡಳಿತ ನಡೆಸುತ್ತೇವೆ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!