ನಾಯಕರ ತಲೆದಂಡಕ್ಕೆ ಕೈ ವಿರುದ್ಧ ಮುಸ್ಲಿಮರು ಕಿಡಿ; ಬಿಜೆಪಿಯ ರಾಘವೇಂದ್ರ ಪರ ಪ್ರಚಾರ ಮಾಡಿದ್ದ ಶಾಮನೂರು ಮೇಲೇಕೆ ಕ್ರಮ ಆಗಿರಲಿಲ್ಲ?

Kannadaprabha News   | Kannada Prabha
Published : Apr 17, 2026, 04:28 AM IST
Karnataka police Muslims community outraged at Congress Over Leaders' Ouster

ಸಾರಾಂಶ

2024ರಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ್ದ ದಿ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್‌, ಈಗ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದೇಕೆ ಎಂದು ಮುಸ್ಲಿಂ ಮುಖಂಡ ಶಬ್ಬೀರ್ ಅಹ್ಮದ್ ನದ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬೆಂಗಳೂರು (ಏ.17): 2024ರಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚನೆ ಮಾಡಿದ್ದ ದಿ.ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್‌, ಈಗ ಮುಸ್ಲಿಂ ನಾಯಕರನ್ನು ವಜಾ ಮಾಡಿದ್ದೇಕೆ ಎಂದು ಮುಸ್ಲಿಂ ಮುಖಂಡ ಶಬ್ಬೀರ್ ಅಹ್ಮದ್ ನದ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಉಲಮಾ ಎ ಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2013, 2018, 2023, 2024ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರ ಬಲವಾಗಿ ನಿಂತುಕೊಂಡಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡಿದೆ. ನಮ್ಮ ನಾಯಕರನ್ನು ವಜಾ ಮಾಡುತ್ತಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದರಿಂದ ಆಶ್ಚರ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಒಂದು ಕುಟುಂಬಕ್ಕಾಗಿ ಮುಸ್ಲಿಮರನ್ನು ಕೈಬಿಟ್ಟು, ಆ ಸಮುದಾಯದ ಮುಖಂಡರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಕಾಂಗ್ರೆಸ್‌ ನಡೆ ಸ್ವೀಕಾರಾರ್ಹವಲ್ಲ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಬೇಸರವಿದೆ. ಎಲ್ಲವನ್ನೂ ಸಮುದಾಯದ ಜನರು ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.

ಉಲಮಾ ಎ ಕರ್ನಾಟಕ ಅಧ್ಯಕ್ಷ ಇಫ್ತಿಖಾರ್ ಖಾಸ್ಮೀ ಮಾತನಾಡಿ, ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಕ್ರಮಗಳು ಖಂಡನೀಯ. 2023ರ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲು ಒತ್ತಾಯ ಮಾಡಲಾಗಿತ್ತು. ಆಗ ಶಾಮನೂರು ಶಿವಶಂಕರಪ್ಪ ಅವರು ಮುಂದೆ ಮುಸ್ಲಿಮರಿಗೆ ನೀಡುವ ಭರವಸೆ ನೀಡಿದ್ದರು. ಬಾಗಲಕೋಟೆಯಲ್ಲಿ ಮೇಟಿ ಅವರು ನಿಧನದ ನಂತರ ಅವರ ಮಗನಿಗೆ ಟಿಕೆಟ್‌ ನೀಡಿದರು. ದಾವಣಗೆರೆಯಲ್ಲಿ ಶಾಮನೂರು ಅವರ ಮೊಮ್ಮಗನಿಗೆ ನೀಡಿದ್ದಾರೆ. ಇದು ಮುಸ್ಲಿಮರಿಗೆ ನೋವುಂಟು ಮಾಡಿದೆ ಎಂದರು.

ಕಾಂಗ್ರೆಸ್‌ಗಾಗಿ ಮುಸ್ಲಿಂ ಮುಖಂಡರು ದಾವಣಗೆರೆ, ಬಾಗಲಕೋಟೆಯಲ್ಲಿ ಕೆಲಸ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಮೊದಲು ಶೋಕಾಸ್ ನೋಟಿಸ್ ನೀಡಬೇಕಿತ್ತು. ಆದರೆ ಕಾಂಗ್ರೆಸ್ ನೇರವಾಗಿ ಶಿಸ್ತು ಕ್ರಮದ ಮೂಲಕ ದಾಳಿ ನಡೆಸಿದೆ. ಜಬ್ಬಾರ್ ಮತ್ತು ನಜೀರ್ ಅಹ್ಮದ್ ಮೇಲೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಕ್ರಮ ಸರಿಯಲ್ಲ ಎಂದು ಟೀಕಿಸಿದರು.

ಮೌಲಾನಾ ಖಾರಿ ಝುಲ್ಫಿಕರ್ ಅಹ್ಮದ್ ನೂರಿ ಮಾತನಾಡಿ, ದಾವಣಗೆರೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಭರವಸೆ ನೀಡಿದ್ದರು. ಆದರೆ, ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲಾನಾ ಝೈನುಲ್ ಆಬಿದಿನ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನಾ ಸೈಯದ್ ಆಸಿಮ್ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಾವಣಗೆರೆ 'ಕೈ' ಜಗಳ ಬೀದಿಗೆ: ಜಮೀರ್ ಕೆಣಕಿದರೆ 2028ಕ್ಕೆ ಕಾಂಗ್ರೆಸ್‌ಗೆ 20 ಸೀಟೂ ಬರಲ್ಲ; ಸುಬಾನ್ ಖಾನ್ ಗುಡುಗು!
Owaisi: ಕೇಂದ್ರದ ಮಸೂದೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ, ದಕ್ಷಿಣ ಭಾರತ, ಒಬಿಸಿಗಳ ಮೇಲೆ ಟಾರ್ಗೆಟ್: ಓವೈಸಿ ಗಂಭೀರ ಆರೋಪ