ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ

Published : Dec 11, 2025, 10:31 AM IST
siddaramaiah

ಸಾರಾಂಶ

ಶಾಸಕಾಂಗ ಪಕ್ಷದ ಸಭೆಯಲ್ಲಿ ಗ್ಯಾರಂಟಿ ಪರಿಷ್ಕರಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಸುವರ್ಣ ವಿಧಾನಸೌಧ (ಡಿ.11): ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ಗ್ಯಾರಂಟಿ ಪರಿಷ್ಕರಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಅಲ್ಲಿ ಏನೇನು ಚರ್ಚೆಯಾಯಿತು ಎಂದು ಇಲ್ಲಿ ಹೇಳಲು ಆಗುತ್ತಾ? ಎಂದರು. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿರುವ ಬಗ್ಗೆ ಎಸ್‌ಐಟಿ ವರದಿ ಸಲ್ಲಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ದೋಷಾರೋಪಪಟ್ಟಿ ನೋಡಿಲ್ಲ ಎಂದ ಅವರು, ತೊಗರಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಅಧಿವೇಶನದಲ್ಲೇ ಒಳಮೀಸಲಾತಿ ಮಸೂದೆ ಮಂಡನೆ

ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಸಮಗ್ರ ಜಾರಿಗೆ ತರುವ ಸಂಬಂಧ ಹೊಸದಾಗಿ ಕಾಯ್ದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರ್ನಾಟಕ ಮಾದರ ಸಮಾಜದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೆ ತರಲಾಗಿದೆ. ಸಮರ್ಪಕ ಅನುಷ್ಠಾನಕ್ಕಾಗಿ ನೂತನ ಕಾಯ್ದೆ ತರಲಾಗುತ್ತಿದೆ. ನಿಮ್ಮೆಲ್ಲರ ನಿರಂತರ ಹೋರಾಟ ನಮಗೆ ಶಕ್ತಿ ತುಂಬಿದೆ. ಸುಪ್ರೀಂಕೋರ್ಟ್‌ ತೀರ್ಮಾನ ಆದಮೇಲೆ ನಾವೆಲ್ಲರೂ ಭೇಟಿಯಾದ ವೇಳೆ ಇದನ್ನು ಮಾಡುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾಗಿ ತಿಳಿಸಿದರು.

ಈಗಾಗಲೇ ಒಳ ಮೀಸಲಾತಿ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ. ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದೇ ಅಧಿವೇಶನದಲ್ಲಿ ಮಸೂದೆ ಪಾಸ್‌ ಆಗುತ್ತದೆ. ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಬೇಕು. ರಾಜ್ಯದಲ್ಲಿ ನಮ್ಮ ಸಮಾಜದ ಜನಸಂಖ್ಯೆ 36 ಲಕ್ಷ ಇದೆ ಎಂಬುದನ್ನು ಗುರುತಿಸಲಾಗಿದೆ. ನಮ್ಮ ಜನಸಂಖ್ಯೆ 45 ಲಕ್ಷ ಇರಬಹುದು. 2026ರಲ್ಲಿ ನಡೆಯುವ ಜನಗಣತಿಯಲ್ಲಿ ಮನೆ ಮನೆಗೆ ಹೋಗಿ ಬರೆಸಬೇಕಿದೆ. ಪ್ರತಿಯೊಂದು ಮನೆಯಲ್ಲಿ ಮಾದರ ಸಮಾಜದ ಸದಸ್ಯರು ಆಗಬೇಕು. ಹೊಸದಾಗಿ 10 ಲಕ್ಷ ಜನಸಂಖ್ಯೆ ನೋಂದಣಿ ಆಗುತ್ತದೆ. ಸಮುದಾಯಕ್ಕೆ ಬಡವ, ಬುದ್ಧಿವಂತ, ಶ್ರೀಮಂತ ಜನರು ಇದ್ದಾರೆ. ಸಂಘದಲ್ಲಿ ಠೇವಣಿ ಸಂಗ್ರಹವಾಗುತ್ತದೆ. ಈ ಠೇವಣಿ ಹಣವನ್ನು ಶೇ.80ರಷ್ಟು ಬಡ ಮಕ್ಕಳ ಶಿಕ್ಷಣಕ್ಕೆ, ಉತ್ತಮ ಪ್ರಜ್ಞೆ ಮೂಡಿಸಲು ವಿನಿಯೋಗ ಮಾಡಲಾಗುವುದು. ಸಮುದಾಯದ ಅಭಿವೃದ್ಧಿಗೆ ಹಣ ನೆರವಾಗಲು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಮಾತನಾಡಿ, ನಮ್ಮನ್ನು ಬ್ರಾಹ್ಮಣರು ಹೊಗಳಿದ್ದಾರೆ. ಬೌದ್ಧರು ಹೊಗಳಿದ್ದಾರೆ. ಆದರೆ, ನಾವ್ಯಾರು ಅವರ ಧರ್ಮಕ್ಕೆ ಹೋಗಲಿಲ್ಲ. ಕ್ರಿಶ್ಟಿಯನ್‌ ಧರ್ಮಕ್ಕೆ ಹೆಚ್ಚಾಗಿ ಹೋಗಿದ್ದೇವೆ. ಕರ್ನಾಟಕದಲ್ಲಿ ಕ್ರಿಶ್ಚಿಯಾನಿಟಿಗೆ ಜಾಸ್ತಿಗೆ ನಾವು ಹೋಗಿದ್ದೇವೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಇತಿಹಾಸಕಾರರು ಹೇಳಬೇಕು. ಕ್ರಿಶ್ಚಿಯನ್ ಸಂಸ್ಥೆಗಳು ನಮ್ಮನ್ನು ಎತ್ತಿ ಹಿಡಿದವು. ದೇವಸ್ಥಾನಗಳಲ್ಲಿ ನಮ್ಮನ್ನು ಹೋಗಲು ಬಿಡಲಿಲ್ಲ. ಆಗ ನಮ್ಮನ್ನು ಎತ್ತಿಕೊಂಡಿದ್ದು ಕ್ರಿಶ್ಚಿಯನ್ ಸಂಸ್ಥೆಗಳು. ನಮಗೆ ಶಾಲೆ ಕಲಿಸುವ ಕೆಲಸ ಕ್ರಿಶ್ಚಿಯನ್ ಸಂಸ್ಥೆಗಳು ಮಾಡಿವೆ. ಬರೀ ಸಂಸ್ಕಾರ, ಸಂಸ್ಕೃತದಿಂದ ಅಷ್ಟೇ ನಾವು ಹಿಂದೆ ಸರಿಲಿಲ್ಲ. ಶಿಕ್ಷಣ, ಆರ್ಥಿಕ ದೃಷ್ಟಿಯಲ್ಲೂ ರಾಜಕಾರಣದಲ್ಲೂ ಬಹುದೂರ ಹಿಂದೆ ಸರಿದಿದ್ದೇವೆ. ಮುಂದೆ ಏನು ಹೆಜ್ಜೆ ಇಡಬೇಕೆಂಬುದರ ಬಗ್ಗೆ ಅವಲೋಕನ ಆಗಬೇಕು. ಮೀಸಲಾತಿ ಹೋರಾಟ ಎಲ್ಲಿಂದ ಎಲ್ಲಿಗೆ ಬಂತು ಎಂಬುದರ ಕುರಿತು ಚರ್ಚೆ ಆಗಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಾಕ್‌ ಸ್ವಾತಂತ್ರ್ಯ ಕಡಿವಾಣಕ್ಕೆ ದ್ವೇಷ ಭಾಷಣ ಮಸೂದೆ: ಆರ್.ಅಶೋಕ್ ಕಿಡಿ
ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌