
ಬೆಂಗಳೂರು (ಅ.27): ರಾಜ್ಯ ರಾಜಕೀಯದಲ್ಲಿ ಜನಪ್ರತಿನಿಧಿಗಳು ಇತ್ತೀಚೆಗೆ ಮಿತಿಮೀರಿದ ವೈಯಕ್ತಿಕ ನಿಂದನೆ ಮತ್ತು ಅಸಭ್ಯ ಭಾಷೆಯನ್ನು ಬಳಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಮುಜುಗರ ಹಾಗೂ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹೈಕೋರ್ಟ್‌ನ ವಕೀಲರಾದ ಪ್ರಶಾಂತ್ ಮೆತಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬಹಿರಂಗ ಪತ್ರ ಬರೆದು, ತಮ್ಮ ಪಕ್ಷದ ನಾಯಕರ ಮಾತಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ವಕೀಲ ಪ್ರಶಾಂತ್ ಮೆತಲ್ ಅವರು ತಮ್ಮ ಪತ್ರದಲ್ಲಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕೆಲವು ಶಾಸಕರು ಮತ್ತು ನಾಯಕರು ಮಾಧ್ಯಮಗಳ ಎದುರು ವೈಯಕ್ತಿಕ ದ್ವೇಷ ಸಾಧನೆಗೆ ಇಳಿದಿದ್ದಾರೆ. ಈ ನಾಯಕರ ಮಿತಿಮೀರಿದ ಅಸಭ್ಯ ಪದ ಬಳಕೆ ಮತ್ತು ವೈಯಕ್ತಿಕ ನಿಂದನೆಗಳಿಂದ ಸಾರ್ವಜನಿಕರಿಗೆ ಭಾರೀ ಮುಜುಗರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್: ಕಾಂಗ್ರೆಸ್ ಪಕ್ಷದ ಶಾಸಕರಾದ ಪ್ರದೀಪ್ ಈಶ್ವರ್ ಅವರ ಹೇಳಿಕೆಗಳಿಗೆ ಕಡಿವಾಣ ಹಾಕಿ, ಅವರು ಪಕ್ಷ ಮತ್ತು ಸರ್ಕಾರದ ಚೌಕಟ್ಟಿನೊಳಗೆ ಮಾತ್ರ ಮಾತನಾಡಲು ತಿಳಿ ಹೇಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಮಾಜಿ ಸಂಸದ ಪ್ರತಾಪ ಸಿಂಹ: ಅದೇ ರೀತಿ, ಮಾಜಿ ಸಂಸದ ಪ್ರತಾಪ ಸಿಂಹ ಅವರು ಬಳಸುತ್ತಿರುವ ವೈಯಕ್ತಿಕ ನಿಂದನೆಯ ಮಾತುಗಳಿಗೆ ಬ್ರೇಕ್ ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ಪತ್ರ ಬರೆದಿದ್ದಾರೆ.
ಜನಪ್ರತಿನಿಧಿಗಳು ಎಂಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ವೈಯಕ್ತಿಕ ದ್ವೇಷವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರಿಂದ ರಾಜ್ಯದ ರಾಜಕೀಯ ಸಂಸ್ಕೃತಿ ಹಾಳಾಗುತ್ತಿದೆ ಎಂದು ಪ್ರಶಾಂತ್ ಮೆತಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಪ್ರಶಾಂತ್ ಮೆತಲ್ ಅವರು, 'ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳಾಗಿ ಈ ರೀತಿಯ ನಡವಳಿಕೆಗಳು ಯುವ ಪೀಳಿಗೆಗೆ ತಪ್ಪು ಸಂದೇಶ ನೀಡುತ್ತಿವೆ. ಈ ನಾಯಕರು ಮಾದರಿಯಾಗಿ ವರ್ತಿಸಬೇಕಿತ್ತು. ಕೂಡಲೇ ಹಿರಿಯ ನಾಯಕರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ಕೈಮೀರುವ ಮುನ್ನ ನಿಯಂತ್ರಿಸಬೇಕು' ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳ ನಾಲಿಗೆಗೆ ಬೀಳುವ ಕಡಿವಾಣವು ರಾಜಕೀಯ ವಾತಾವರಣವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.