Karnataka Politics: ಬಿಜೆಪಿ ಸಂಘಟನೆಗೆ ಮೈಸೂರಿಂದ ಬಿಎಸ್‌ವೈ ಯಾತ್ರೆ

Published : Oct 31, 2022, 06:57 AM ISTUpdated : Oct 31, 2022, 07:03 AM IST
Karnataka Politics: ಬಿಜೆಪಿ ಸಂಘಟನೆಗೆ ಮೈಸೂರಿಂದ ಬಿಎಸ್‌ವೈ ಯಾತ್ರೆ

ಸಾರಾಂಶ

ಬಿಜೆಪಿ ಸಂಘಟನೆಗೆ ಮೈಸೂರಿಂದ ಬಿಎಸ್‌ವೈ ಯಾತ್ರೆ ಬೊಮ್ಮಾಯಿ ಮತ್ತಿತರರಿಂದ ಇನ್ನೊಂದು ರಥಯಾತ್ರೆ ದಾವಣಗೆರೆಯಲ್ಲಿ ಈ ಯಾತ್ರೆಗಳ ಸಂಗಮ: ಯಡಿಯೂರಪ್ಪ

ಕಲಬುರಗಿ (ಅ.31) : ಬರುವ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದ್ದು, ಜನರ ಹತ್ತಿರ ಹೋಗುತ್ತೇವೆ. ಮೈಸೂರಿನಿಂದ ನನ್ನ ರಥಯಾತ್ರೆ ನಡೆಯಲಿದೆ. ಬೊಮ್ಮಾಯಿ ಮತ್ತಿತರರು ಇನ್ನೊಂದು ರಥಯಾತ್ರೆ ಮಾಡಲಿದ್ದಾರೆ. ದಾವಣಗೆರೆಯಲ್ಲಿ ಈ ಯಾತ್ರೆಗಳು ಸಂಗಮಿಸಲಿದ್ದು, ಅಲ್ಲೇ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ನಾವು ಸಜ್ಜಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಖರ್ಗೆ ತವರು ನೆಲ ಕಲಬುರಗಿಯಲ್ಲಿ ಮೊಳಗಿದ ಕೇಸರಿ ಪಾಂಚಜನ್ಯ

ಕಲಬುರಗಿಯಲ್ಲಿ ಭಾನುವಾರ ನಡೆದ ಒಬಿಸಿ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರಂಥ ಮಹಾನ್‌ ನಾಯಕ ನಮ್ಮ ಜೊತೆಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು. ಅಲ್ಲದೆ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದರು.

ಎಲ್ಲ ವರ್ಗಗಳ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಈ ಭಾಗದ ಅಭಿವೃದ್ಧಿ ಕೇವಲ ಮರೀಚಿಕೆಯಾಗಿತ್ತು. ಮತಬ್ಯಾಂಕ್‌ ರಾಜಕೀಯ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌, ಒಬಿಸಿ ವರ್ಗದ ಜನರಿಗೆ ದ್ರೋಹ ಮಾಡಿದೆ. ಆದರೆ, ನಮ್ಮ ಸರಕಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿವೆ. ಹೀಗಾಗಿ, ರಾಜ್ಯದಲ್ಲಿ ಮತ್ತೆ ಕಮಲ ಅರಳೋದು ನಿಶ್ಚಿತ ಎಂದರು.

ಧಮ್ ಇದ್ರೆ ಯಾತ್ರೆ ತಡೀರಿ

ಇತರ ಹಿಂದುಳಿದ ವರ್ಗಗಳವರು ಇನ್ನೂ ನಿಮ್ಮ (ಕಾಂಗ್ರೆಸ್‌) ಜೇಬಲ್ಲೇ ಇದ್ದಾರೆಂದು ಅನ್ಕೋಬೇಡಿ. ಆ ಭ್ರಮೆಯಿಂದ ಹೊರಬನ್ನಿ, ನಿಮ್ಮ ಕಥೆ ಮುಗೀತು, ಒಬಿಸಿ ಸೇರಿ ಎಲ್ಲಾ ಸಮುದಾಯದವರು ಬಿಜೆಪಿ ವಿಜಯ ಸಂಕಲ್ಪಕ್ಕೆ ಪಣ ತೊಟ್ಟಿದ್ದಾರೆ. ನಿಮ್ಮ ಹತ್ರ ತಾಕತ್ತು ಹಾಗೂ ಧಮ್‌ ಇದ್ರೆ ಬಿಜೆಪಿ ವಿಜಯ ಯಾತ್ರೆ ತಡೆಯಿರಿ ನೋಡೋಣ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್‌ ಮುಖಂಡರಿಗೆ ಸವಾಲು ಹಾಕಿದ್ದಾರೆ.

ಕಲಬುರಗಿಯಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿರಾಟ್‌ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಗವಂತನ ಆಶೀರ್ವಾದ, ಪ್ರಧಾನಿ ಮೋದಿಯವರ ಬೆಂಬಲ, ಒಬಿಸಿ ಸೇರಿದಂತೆ ನಾಡಿನ ಎಲ್ಲಾ ವರ್ಗದ ಜನರ ಶುಭ ಹಾರೈಕೆಗಳೊಂದಿಗೆ ಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

News Hour With B Y Vijayendra: ಬಿಎಸ್‌ವೈ ಹೆಸರಲ್ಲಿ ವಿಜಯೇಂದ್ರ ರಾಜಕಾರಣ? ಶಿಕಾರಿಪುರದಿಂದಲೇ ಕಣಕ್ಕೆ?

ಬಿಜೆಪಿಯವರು ಬರೀ ರಾಜಕಾರಣ ಮಾಡೋರಲ್ಲ, ಜನರಿಗಾಗಿ ರಾಜಕಾರಣ ಮಾಡೋರು. ನಾವಿಲ್ಲಿ ಮಾತಿನಲ್ಲೇ ಮಂಟಪ ತೋರಿಸಲು ಬಂದಿಲ್ಲ. 65ಕ್ಕೂ ಹೆಚ್ಚು ಒಬಿಸಿ ಸಮುದಾಯಗಳವರಿಗೆ ಒಂದಿಲ್ಲೊಂದು ರೀತಿಯಲ್ಲಿ ಹೇಗೆ ನೆರವಾಗಿದ್ದೇವೆ ಎಂಬುದರ ಆದೇಶ ಪ್ರತಿಗಳೊಂದಿಗೆ ಬಂದಿರುವೆ. ನಿನ್ನೆಯಷ್ಟೇ ತಳವಾರ, ಪರಿವಾರ ನಾಯಕ ಸಮಾಜದವರಿಗೆ ಎಸ್ಟಿಪಟ್ಟಿಯಲ್ಲಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ್ದೇವೆ ಎಂದರು. ಜೊತೆಗೆ, ಹಿಂದುಳಿದವರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಆದೇಶ ಪ್ರತಿಗಳನ್ನು ಜನರತ್ತ ತೋರಿಸಿದರು. ಆಗ ವೇದಿಕೆಯಲ್ಲಿದ್ದ ಎಲ್ಲಾ ಮುಖಂಡರು, ಸೇರಿದ್ದ ಜನಸ್ತೋಮ ಎದ್ದು ನಿಂತು ಕರತಾಡನ ಮಾಡಿದರು, ಹತ್ತು ನಿಮಿಷ ಇಡೀ ಸಭಾಂಗಣದಲ್ಲಿ ಜಯಘೋಷಗಳು ಮೊಳಗಿದವು.

ಖರ್ಗೆ ಬಲಿ ಕಾ ಬಕ್ರಾ: ಶಿವರಾಜ ಸಿಂಗ್‌ ವ್ಯಂಗ್ಯ

ಕಾಂಗ್ರೆಸ್‌ ಪಕ್ಷ ಹಾಳಾಗಿರುವಾಗ ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಐಸಿಸಿ ಅಧ್ಯಕ್ಷರ ಪಟ್ಟಕಟ್ಟಲಾಗಿದೆ. ಖರ್ಗೆಯವರನ್ನು ಸೋನಿಯಾ ಹಾಗೂ ರಾಹುಲ್‌ ಬಾಬಾ ಸೇರಿ ಒಂದು ಬಲಿ ಕಾ ಬಕ್ರಾ (ಹರಕೆಯ ಕುರಿ) ಮಾಡಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಲೇವಡಿ ಮಾಡಿದರು. ಪತ್ರಿಕಾ ಸಂದರ್ಶನದಲ್ಲಿ ಖರ್ಗೆಯವರು ‘ಬಕ್ರೀದ್‌ ಮೇ ಬಚೆ ಗಾ ತೋ ಮೊಹರಂ ಮೇ ನಾಚೆಗಾ’ ಎಂದು ಕುರಿಯ ಕುರಿತಂತೆ ಹೇಳಿದ ಮಾತುಗಳನ್ನು ಪ್ರಸ್ತಾಪಿಸುತ್ತ, ಖರ್ಗೆ ಹರಕೆಯ ಕುರಿ ಆಗೋದು ಗ್ಯಾರಂಟಿ. ದೇಶದಲ್ಲಿ ಕಾಂಗ್ರೆಸ್‌ ಹೇಳ ಹೆಸರಿಲ್ಲದಂತೆ ಆಗಲಿದೆ ಎಂದು ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ