ಬೆಂಗಳೂರು (ನ.3) : ಮುಂಬರುವ ವಿಧಾನಸಭಾ ಚುನಾವಣೆ ತಯಾರಿಗೆ ಕಾಂಗ್ರೆಸ್ ಅಧಿಕೃತವಾಗಿ ಚಾಲನೆಯನ್ನು ನೀಡಿದ್ದು, ಚುನಾವಣಾ ಅಭ್ಯರ್ಥಿಯಾಗಲು ಆಸಕ್ತ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನ. 5ರಿಂದ 15ರವರೆಗೆ ಅವಕಾಶ ಕಲ್ಪಿಸಿದೆ. ಅರ್ಜಿ ಹಾಕಿದರೆ ಮಾತ್ರ ಟಿಕೆಟ್‌ಗೆ ಪರಿಗಣಿಸಲಾಗುತ್ತದೆ. ಇದೇ ವೇಳೆ, ಪಕ್ಷ ತೊರೆದವರೂ ಸೇರಿದಂತೆ ಟಿಕೆಟ್ ಬಯಸುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಲಸಿಗರಿಗೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ. ಅಲ್ಲದೆ, ‘ಅನ್ಯ ಪಕ್ಷದವರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದೂ ಹೇಳಿದ್ದಾರೆ.
ಮುಂಬರುವ ಚುನಾವಣಾ ಟಿಕೆಟ್‌ಗಾಗಿ ಕಾಂಗ್ರೆಸ್ ಅರ್ಜಿ ಆಹ್ವಾನ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಶಿವಕುಮಾರ್ ಅವರು, ‘ನಾನು ಸೇರಿದಂತೆ ಪಕ್ಷದ ಟಿಕೆಟ್ ಬಯಸುವ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬೇಕು’ ಎಂದು ಹೇಳಿದರು.
‘ಅರ್ಜಿಗೆ 5 ಸಾವಿರ ಶುಲ್ಕವಿದ್ದು, ಸಾಮಾನ್ಯ ವರ್ಗದವರು 2 ಲಕ್ಷ ರು.ಗಳ ಡಿಡಿ ಹಾಗೂ ಕಾಂಗ್ರೆಸ್ ಸದಸ್ಯತ್ವದ ವಿವರ ಸಲ್ಲಿಸಬೇಕು. ಪರಿಶಿಷ್ಟವರ್ಗದವರಿಗೆ ಶೇ. 50ರಷ್ಟುವಿನಾಯಿತಿ ನೀಡಲಾಗಿದೆ. ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ’ ಎಂದು ವಿವರಿಸಿದರು.
ಕಾರ್ಯಕರ್ತರು ಹಣ ನೀಡಲಿ:
‘ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸುವಾಗ ಯಾವ ಮಾನದಂಡದಿಂದ ಹಣ ನೀಡಬೇಕು?’ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ‘ಯಾವುದೇ ಮಾನದಂಡವಿಲ್ಲ. ಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ, ಜಾಹೀರಾತಿಗೆ ಹಣ ಬೇಕಿದೆ. ಪತ್ರಕರ್ತರಿಗೆ ಹಣ ನೀಡುವುದಿಲ್ಲ. ಮುಖಪುಟದ ಜಾಹಿರಾತು ನೀಡಲು ನಮ್ಮಲ್ಲಿ ಹಣ ಇಲ್ಲ. ಪಕ್ಷಕ್ಕೆ 20 ಸಾವಿರ ರು.ಗಿಂತ ಹೆಚ್ಚು ಪಡೆಯಲು ಅವಕಾಶವಿಲ್ಲ. ನಮಗೆ ಯಾವುದೇ ಚುನಾವಣಾ ಬಾಂಡ್ ಬರುತ್ತಿಲ್ಲ. ಎಲ್ಲ ಬಿಜೆಪಿಗೆ ಹೋಗುತ್ತಿದೆ. ಹೀಗಾಗಿ ಕಾರ್ಯಕರ್ತರಾದರೂ ಪಕ್ಷಕ್ಕೆ ಹಣ ನೀಡಲಿ’ ಎಂದು ವಿವರಿಸಿದರು.
ವಯೋಮಿತಿ ಇಲ್ಲ:
‘ಟಿಕೆಟ್‌ಗೆ ಅರ್ಜಿ ಹಾಕಲು ಯಾವುದೇ ವಯೋಮಿತಿ ಇಲ್ಲ. ನಮ್ಮಲ್ಲಿ ಮಾರ್ಗದರ್ಶಕ ಮಂಡಳಿ ಇಲ್ಲ. ನಾವು 92 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನು ಇಟ್ಟುಕೊಂಡಿದ್ದೇವೆ. ಅವರು ಬೇರೆಯವರಿಗಿಂತ ಕ್ಷೇತ್ರದಲ್ಲಿ ಹೆಚ್ಚು ಓಡಾಡುತ್ತಿದ್ದಾರೆ. ನಮ್ಮ ತಂದೆ-ತಾಯಿಗಳನ್ನು ಮನೆಯಿಂದ ಹೊರಗೆ ಹಾಕುವುದಿಲ್ಲ. ಅದಕ್ಕೆ ತಾವು ಅವಕಾಶ ನೀಡುವುದಿಲ್ಲ’ ಎಂದು ಎಲ್.ಕೆ. ಅಡ್ವಾಣಿ ಅವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಿದ್ದ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದರು.
ವಲಸಿಗರಿಗೆ ಪಕ್ಷಕ್ಕೆ ಆಹ್ವಾನ:
‘ಪಕ್ಷ ತೊರೆದವರೂ ಸೇರಿದಂತೆ ಪಕ್ಷದ ಟಿಕೆಟ್ ಬಯಸುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು’ ಎಂದು ಡಿಕೆಶಿ ನುಡಿದರು. ಈ ಮೂಲಕ ವಲಸಿಗರಿಗೆ ಪಕ್ಷಕ್ಕೆ ಪರೋಕ್ಷ ಆಹ್ವಾನ ನೀಡಿದರು. ‘ಪಕ್ಷ ಬಿಟ್ಟು ಹೋದವರನ್ನು ಪುನಃ ಸೇರಿಸಿಕೊಳ್ಳುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ’ ಅವರು, ಈ ವಿಚಾರದಲ್ಲಿ ಮುಕ್ತ ಅವಕಾಶ ನೀಡಿದ್ದೇವೆ. ಅದಕ್ಕಾಗಿ ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿ ಇದೆ. ಪಕ್ಷದ ಸಿದ್ಧಾಂತವನ್ನು ಬೇಷರತ್ತಾಗಿ ಒಪ್ಪಿಕೊಂಡು ಪಕ್ಷಕ್ಕೆ ಬರಲು ಇಚ್ಛಿಸುವ ಯಾರೂ ಬೇಕಾದರೂ ಅರ್ಜಿ ಹಾಕಬಹುದು. ನಾವು ಎಲ್ಲ ನಾಯಕರ ಜತೆ ಚರ್ಚಿಸಿ ಪಕ್ಷದ ಅಧ್ಯಕ್ಷನಾಗಿ ಈ ವಿಚಾರ ತಿಳಿಸುತ್ತಿದ್ದೇನೆ. ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಸೇರಿಸಿಕೊಳ್ಳಬಾರದು ಎಂಬ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ’ ಎಂದರು.
ಇದಲ್ಲದೆ, ‘ಬೇರೆ ಪಕ್ಷಗಳ ಕೆಲವು ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದು, ತಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ’ ಎಂದರು. ಇದೇ ವೇಳೆ, ‘ರಾಜ್ಯಾದ್ಯಂತ ಹಲವಾರು ಮಂದಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಮತ್ತೆ ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿ ಆರಂಭಿಸಿದ್ದೇವೆ’ ಎಂದರು.
ಅರ್ಜಿ ಸಲ್ಲಿಕೆ: