* ಕೇಸ್ ಮುಚ್ಚಿ ಹಾಕಲು ಸರ್ಕಾರ ಯತ್ನ: ಡಿಕೆಶಿ, ರಾಮಲಿಂಗಾರೆಡ್ಡಿ
* ರಾಜ್ಯದ ಪ್ರಭಾವಿಗಳಿಂದ ಡ್ರಗ್ಸ್, ಬಿಟ್‌ಕಾಯಿನ್ ದಂಧೆ: ಸಿದ್ದು
* ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹ
ಹುಬ್ಬಳ್ಳಿ(ಅ.29): ಡ್ರಗ್ಸ್ (Drugs) ಹಾಗೂ ಬಿಟ್ ಕಾಯಿನ್ (Bitcoin) ದಂಧೆಯಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ (Congress) ಆಗ್ರಹಿಸಿದೆ.
ಈ ಸಂಬಂಧ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ (Ramlinga Reddy) ಅವರು, ಬಿಟ್ ಕಾಯಿನ್ ದಂಧೆಯಲ್ಲಿ ದೊಡ್ಡ ದೊಡ್ಡವರು ಇರುವ ಕಾರಣಕ್ಕೆ ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಟ್‌ಕಾಯಿನ್ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಶಿಫಾರಸು ಮಾಡಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಹೇಳುತ್ತಿದ್ದಾರೆ. ಹಾಗಿದ್ದರೆ ಪ್ರಕರಣವನ್ನು ಇಷ್ಟುದಿನ ಯಾಕೆ ಮುಚ್ಚಿಟ್ಟಿದ್ದರು? ಇಷ್ಟು ದೊಡ್ಡ ಪ್ರಕರಣವನ್ನು ಮುಚ್ಚಿಟ್ಟಂತೆ ಆಯ್ತಲ್ಲ ಎಂದು ಪ್ರಶ್ನಿಸಿದರು.
ತನಿಖೆ ನಡೆಯುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಸಿದ್ದು ಆರೋಪಕ್ಕೆ ಬೊಮ್ಮಾಯಿ ಪ್ರತಿಕ್ರಿಯೆ!
ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿಯಾದುದು. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ಪ್ರಭಾವ ಬೀರಿ ತನಿಖೆಯ ಹಾದಿ ತಪ್ಪಿಸದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಚ್ಚಿ ಹಾಕುವುದೇ ಕೆಲಸ- ಡಿಕೆಶಿ:
ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಟ್‌ಕಾಯಿನ್ ದಂಧೆ ಹೆಸರಿನಲ್ಲಿ ಬಹಳ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ರಾಜಕಾರಣಿಗಳು, ಪೊಲೀಸರು, ಉದ್ಯಮಿಗಳ ಹೆಸರು ತಳುಕು ಹಾಕಿಕೊಂಡಿದೆ. ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಪ್ರಕರಣಗಳನ್ನು ಮುಚ್ಚಿ ಹಾಕುವುದೇ ಅವರ ಕೆಲಸ ಎಂದು ದೂರಿದರು.
ಪ್ರಕರಣದ ಬಗ್ಗೆ ನಾನೇ ಅಚ್ಚರಿಗೊಂಡಿದ್ದೇನೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಖಾತೆಗಳು ಈ ಪರಿ ಹ್ಯಾಕ್ ಆಗುತ್ತವೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಐಟಿ-ಬಿಟಿ ಬಗ್ಗೆ ನನಗೆ ಮಾಹಿತಿ ಇಲ್ಲದ ಕಾರಣ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ದೊಡ್ಡ ಪ್ರಕರಣ ಎಂದು ತಿಳಿದುಬಂದಿದೆ ಎಂದು ಹೇಳಿದರು.
ಸರ್ಕಾರಕ್ಕೇ ಕಂಟಕ:
ಮತ್ತೊಂದೆಡೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಬಿಟ್ ಕಾಯಿನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ತನಿಖೆಯಲ್ಲಿ ಸತ್ಯಾಂಶ ಹೊರಬಂದರೆ ರಾಜ್ಯ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಬಿಟ್‌ಕಾಯಿನ್ ದಂಧೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ರಾಜ್ಯದ ಇಬ್ಬರು ಪ್ರಭಾವಿ ನಾಯಕರು ಇದರಲ್ಲಿ ಭಾಗಿಯಾಗಿರುವುದಾಗಿ ವರದಿಯಾಗಿದೆ. ಸುಮಾರು 10 ಸಾವಿರ ಕೋಟಿ ರು. ವಹಿವಾಟು ನಡೆದಿರುವ ಅನುಮಾನ ಇದೆ. ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಶ್ರೀಕಿ ಅವರನ್ನು ಬಂಧಿಸಲು ಸರ್ಕಾರ ಹಿಂದೆ ಮುಂದೆ ನೋಡಿದ್ದು ಯಾಕೆ? ಸರ್ಕಾರ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯಾಂಶ ಹೊರತರಬೇಕು. ಉಳಿದ ಯಾವುದೇ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸತ್ಯಾಂಶ ಹೊರಬಂದರೆ ರಾಜ್ಯ ಸರ್ಕಾರದ ಹಲವು ನಾಯಕರ ಕುರ್ಚಿ ಅಲುಗಾಡಲಿದೆ. ಪ್ರಕರಣ ಇಡೀ ಸರ್ಕಾರಕ್ಕೇ ಕಂಟಕವಾಗಬಹುದು ಎಂದರು.