ಮೇಲ್ಮನೆ: ನಾಮಪತ್ರಕ್ಕೆ ನಾಳೆ ಕೊನೆದಿನ. ಇನ್ನೂ ಆಗಿಲ್ಲ ಅಭ್ಯರ್ಥಿಗಳ ಆಯ್ಕೆ!

By Kannadaprabha NewsFirst Published May 23, 2022, 4:45 AM IST
Highlights

* ಅಭ್ಯರ್ಥಿಗಳ ಆಯ್ಕೆಗೆ ಪಕ್ಷಗಳಿಂದ ಮುಗಿಯದ ಕಸರತ್ತು

* ನಾಮಪತ್ರಕ್ಕೆ ನಾಳೆ ಕೊನೆದಿನ. ಇನ್ನೂ ಘೋಷಣೆಯಾಗದ ಅಭ್ಯರ್ಥಿಗಳು!

* ಈವರೆಗೆ ಒಂದೂ ಉಮೇದುವಾರಿಕೆ ಸಲ್ಲಿಕೆ ಇಲ್ಲ!

* ಅಸೆಂಬ್ಲಿಯಿಂದ 7 ಎಂಎಲ್‌ಸಿ ಸ್ಥಾನಕ್ಕೆ ಚುನಾವಣೆ

ಬೆಂಗಳೂರು(ಮೇ.23): ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು, ಇದುವರೆಗೆ ಒಂದೇ ಒಂದು ನಾಮಪತ್ರವೂ ಸಲ್ಲಿಕೆಯಾಗಿಲ್ಲ.

ಕೊನೆಯ ಎರಡು ದಿನಗಳಾದ ಸೋಮವಾರ ಅಥವಾ ಮಂಗಳವಾರ ನಾಮಪತ್ರ ಸಲ್ಲಿಕೆಯಾಗಲಿದ್ದು, ಭಾನುವಾರದವರೆಗೂ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಸೋಮವಾರವೇ ಅಭ್ಯರ್ಥಿಗಳ ಪಟ್ಟಿಹೊರಬೀಳುವ ಸಾಧ್ಯತೆಯಿದೆ.

ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಒಟ್ಟು ಏಳು ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿಗೆ ನಾಲ್ಕು, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ಎರಡು ಹಾಗೂ ಮತ್ತೊಂದು ಪ್ರತಿಪಕ್ಷ ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಲಿವೆ. ಮೂರೂ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ಕೊನೆ ಕ್ಷಣದ ಕಸರತ್ತು ನಡೆಸಿವೆ.

ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆ ದಿನ. 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು 27 ಕೊನೆಯ ದಿನವಾಗಿದೆ. ಏಳು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿ ಸ್ವೀಕೃತವಾದರೆ ಮತದಾನ ನಡೆಯುವ ಸಂಭವ ಉದ್ಭವಿಸುವುದಿಲ್ಲ. ಅಗತ್ಯವಾದಲ್ಲಿ ಜೂ.3ರಂದು ಮತದಾನ ನಡೆಯಲಿದೆ.

ನಟ ದೊಡ್ಡಣ್ಣ ಅಳಿಯ ಪಪ್ಪಿಗೆ ಜೆಡಿಎಸ್‌ ಟಿಕೆಟ್‌?

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ ಒಂದು ಸ್ಥಾನದಲ್ಲಿ ಗೆಲ್ಲಬಹುದಾಗಿದ್ದು ಈ ಸ್ಥಾನಕ್ಕೆ ಚಿತ್ರನಟ ದೊಡ್ಡಣ್ಣ ಅವರ ಅಳಿಯ ಹಾಗೂ ಪಕ್ಷದ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಅವರನ್ನು ಕಣಕ್ಕಳಿಸುವ ಸಾಧ್ಯತೆ ಇದೆ. ವೀರೇಂದ್ರ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಉದ್ಯಮಿಯಾಗಿರುವ ವೀರೇಂದ್ರ ಅವರು ಗೋವಾದಲ್ಲಿನ ಕ್ಯಾಸಿನೋ ಮಾಲೀಕರಾಗಿದ್ದಾರೆ. ಹಲವು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಚ್ಚಲುಮನೆ ಗೋಡೆಯಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ರುಪಾಯಿ ನಗದು ವಶಪಡಿಸಿಕೊಂಡಿತ್ತು.

click me!